ಹನುಮಾನ್ ಜಪ ರಾಜಕೀಯ ತಾಪ

Advertisement

ಮಂಡ್ಯ: ಜಿದ್ದಾಜಿದ್ದಿ ರಾಜಕಾರಣಕ್ಕೆ ಹೆಸರುವಾಸಿಯಾದ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಇದೀಗ `ಧ್ವಜ ಸಂಘರ್ಷ’ ನೆಪದಲ್ಲಿ ಹಿಂದುತ್ವದ ಕಿಡಿ ಹೊತ್ತಿ ಉರಿದಿದೆ.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜ. ೨೬ರ ಗಣರಾಜೋತ್ಸವದಂದು ರಾಷ್ಟ್ರಧ್ವಜ ಹಾರಿಸಲು ಗ್ರಾಮಪಂಚಾಯಿತಿ ಅನುಮತಿ ಪಡೆದ ಹಿಂದೂಪರವಾದ ಗೌರಿಶಂಕರ ಟ್ರಸ್ಟ್ ಪದಾಧಿಕಾರಿಗಳು ತದನಂತರ ಹನುಮ ಧ್ವಜ ಹಾರಿಸಿದ್ದು ಪರ ವಿರೋಧದ ಬೆಳವಣಿಗೆಗೆ ನಾಂದಿಯಾಗಿದೆ.
ನಿಯಮ ಉಲ್ಲಂಘಿಸಿ ಭಗವಾಧ್ವ್ವಜ ಹಾರಿಸಿದ್ದನ್ನು ಪ್ರಶ್ನಿಸಿ ಜಿಲ್ಲಾಡಳಿತವು ಗ್ರಾಮದಲ್ಲಿ ನಿಷೇಧಾಜ್ಞೆ ಹೊರಡಿಸಿ ಕೇಸರಿ ಧ್ವಜ ಇಳಿಸಿ ರಾಷ್ಟ್ರಧ್ವಜ ಹಾರಿಸಿದ್ದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜೆಡಿಎಸ್-ಬಿಜೆಪಿ ರಾಜಕೀಯ ಎಂಟ್ರಿ ಕೊಟ್ಟು ಕೆರಗೋಡು ಉದ್ವಿಗ್ನಗೊಂಡಿದೆ.
ಸೋಮವಾರ ಕೆರಗೋಡಿನಿಂದ ಮಂಡ್ಯ ಡಿಸಿ ಕಚೇರಿಯವರೆಗೆ ಕೇಸರಿ ಪಡೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಜಿಲ್ಲೆಯ ಪ್ರಮುಖ ನಾಯಕರು ಪಾಲ್ಗೊಂಡು ಧ್ವಜ ಸಂಘರ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದ ಪರಿಣಾಮ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರಿಗೆ ಲಾಠಿ ರುಚಿ ತೋರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ರವಿಕುಮಾರ್ ಗಣಿಗ ಅವರ ಫ್ಲೆಕ್ಸ್, ಕಟೌಟ್‌ಗಳನ್ನು ಹರಿದು ದಹಿಸಿದ್ದಾರೆ. ಜಿಲ್ಲಾ ಕುರುಬರ ಸಂಘದ ಆವರಣಕ್ಕೆ ನುಗ್ಗಿ ಸಿಎಂ ಬ್ಯಾನರ್‌ಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ .ಕುಮಾರಸ್ವಾಮಿ, ವಿರೋಧಪಕ್ಷದ ನಾಯಕ ಆರ್.ಅಶೋಕ್, ಅಶ್ವಥನಾರಾಯಣ, ಮಾಜಿ ಶಾಸಕ ಪ್ರೀತಂಗೌಡ, ಸುರೇಶ್‌ಗೌಡ, ಡಿ.ಸಿ.ತಮ್ಮಣ್ಣ, ನಾರಾಯಣಗೌಡ, ಅನ್ನದಾನಿ, ಬಿಜೆಪಿ ಮುಖಂಡರಾದ ಅಶೋಕ್, ಇಂದ್ರೇಶ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್ : ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇರುವುದರಿಂದ ೨೦೦ಕ್ಕಿಂತ ಹೆಚ್ಚಿನ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಮಾಡಲಾಗಿದ್ದು , ಧ್ವಜಸ್ತಂಭದ ಬಳಿ ಪೊಲೀಸರ ಸರ್ಪಗಾವ­ಲಿದೆ. ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತವು ಗ್ರಾಮದಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿದೆ. ಫೆಬ್ರವರಿ ೯ ರಂದು ಹಿಂದೂಪರ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲು ಕರೆಕೊಟ್ಟಿದ್ದು, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಇದರಲ್ಲಿ ಭಾಗಿಯಾಗುವರೆಂದು ಹೇಳಲಾಗುತ್ತಿದೆ.