ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ ನೈತಿಕ ಪೊಲೀಸ್ ಗಿರಿ ಪ್ರಕರಣ

Advertisement

ಮಂಗಳೂರು: ‘ಲವ್ ಜಿಹಾದ್’ ಹೆಚ್ಚು ಚರ್ಚೆಯಲ್ಲಿರುವಂತೆಯೇ ಮೊನ್ನೆ ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಈ ಪ್ರಕರಣದಲ್ಲಿ ಬೀಚ್‌ನಲ್ಲಿ ಹಿಂದೂ ಯುವತಿಯರನ್ನು ಕರೆಸಿಕೊಂಡು ಅಶ್ಲೀಲವಾಗಿ ಮೋಜಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿಬಂದಿದೆ. ಲವ್ ಜಿಹಾದ್ ನಡೆಸುತ್ತಿರುವ ಇಂತಹ ಸಂದರ್ಭದಲ್ಲಿ ಇದನ್ನೆಲ್ಲ ನೋಡಿಕೊಂಡು ನಮ್ಮ ಹುಡುಗರು ಸುಮ್ಮನಿರಬೇಕಿತ್ತಾ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ಪ್ರಶ್ನಿಸಿದ್ದಾರೆ.
ಗುರುವಾರ ಸಂಜೆ ಸೋಮೇಶ್ವರ ಬೀಚಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದು, ಅನ್ಯಮತೀಯ ಯುವಕರೊಂದಿಗೆ ಮೋಜಲ್ಲಿ ತೊಡಗಿದ ಘಟನೆಗೆ ಕಾರಣರಾದ ಹಿಂದು ಯುವತಿಯರ ಪೋಷಕರನ್ನ ಠಾಣೆಗೆ ಕರೆಸಿ ಪ್ರಕರಣದ ಅಸಲಿಯತ್ತನ್ನ ಅವರಿಗೆ ತಿಳಿಯ ಪಡಿಸಬೇಕೆಂದು ಉಳ್ಳಾಲ ಮಹಿಳಾ ರಕ್ಷಣಾ ವೇದಿಕೆ ವತಿಯಿಂದ ಇಂದು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಧನಲಕ್ಷ್ಮಿ ಗಟ್ಟಿ ಅವರು ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರವಾಗಿ ಏಳು ಜನ ಹಿಂದೂ ಸಂಘಟನೆ ಕಾರ್ಯಕರ್ತರನ್ನ ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಸೋಮೇಶ್ವರ ಬೀಚಲ್ಲಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದವರೆಲ್ಲರೂ ವಿದ್ಯಾರ್ಥಿಗಳೆಂದೇ ಬಿಂಬಿಸಲಾಗಿತ್ತು. ಅಸಲಿಗೆ ಅಂದು ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಬಂದಿದ್ದ ಮುಸ್ಲಿಂ ಯುವಕರು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. ಹಿಂದೂ ಸಂಘಟನೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಕೇರಳದ ಚೆರ್ಕಳದ ಜಾಫರ್ ಶರೀಫ್ ಮೀಶೋ ಆನ್ ಲೈನ್ ಕಂಪನಿಯ ಡೆಲಿವರಿ ಬಾಯ್ ಆಗಿದ್ದರೆ, ಮಂಜೇಶ್ವರ ಮೂಲದ ಮಹಮ್ಮದ್ ಮುಜೀಬ್ ಸೂಪರ್ ಮಾರ್ಕೆಟ್ ಒಂದರಲ್ಲಿ ಕೆಲಸಕ್ಕಿದ್ದು, ಆಶಿಕ್ ಜವಳಿ ಶಾಪಲ್ಲಿ ಕೆಲಸ ಮಾಡುತ್ತಿದ್ದಾನೆ. ಇವರಲ್ಲಿ ಓರ್ವನಿಗೆ ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಪ್ರೇಯಸಿಯಾಗಿದ್ದಳು. ಲವ್ ಜಿಹಾದ್ ನ ಅಮಲೇರಿಸಿದ್ದ ಈ ಕಿರಾತಕ ಪ್ರೇಯಸಿಯಲ್ಲಿ ಹೇಳಿ ಆಕೆಯ ಇಬ್ಬರು ಸ್ನೇಹಿತೆಯರನ್ನ ತನ್ನ ಇಬ್ಬರು ಸ್ನೇಹಿತರಿಗೆ ಪರಿಚಯಿಸಿ ಜತೆಯಾಗಿ ಸೋಮೇಶ್ವರ ಬೀಚ್‌ಗೆ ಬಂದು ಸಾರ್ವಜನಿಕರ ಎದುರೇ ಅಶ್ಲೀಲವಾಗಿ ವರ್ತಿಸಿ ಮೋಜು ಮಾಡಿದ್ದಾರೆ. ಅನ್ಯಕೋಮಿನ ಯುವಕರು ಹಿಂದೂ ಯುವತಿಯರೊಂದಿಗೆ ಸಾರ್ವಜನಿಕವಾಗಿ ಮೋಜು ಮಾಡುವಾಗ ಕಣ್ಣಾರೆ ಕಂಡ ಹಿಂದೂ ಯುವಕರು ಸಹಿಸ ಬೇಕಿತ್ತೇ ಎಂದು ಧನಲಕ್ಷ್ಮಿ ಪ್ರಶ್ನಿಸಿದ್ದಾರೆ.
ಹಲ್ಲೆಗೊಳಗಾದ ಮುಸ್ಲಿಂ ಯುವಕರು ಅಮಾಯಕರಂತೆ ನಟಿಸಿ ಆಸ್ಪತ್ರೆ ಸೇರಿದ್ದು, ಆಸ್ಪತ್ರೆಯಿಂದ ಹೊರ ಹೋಗಿ ಮತ್ತೆ ಲವ್ ಜಿಹಾದ್ ಚಟುವಟಿಕೆಯಲ್ಲಿ ಸಕ್ರಿಯರಾಗುವುದು ಗ್ಯಾರಂಟಿ. ಹಾಗಾಗಿ ಅವರ ಜತೆಯಲ್ಲಿದ್ದ ಹಿಂದೂ ಯುವತಿಯರ ಪೋಷಕರನ್ನ ಎಚ್ಚರಿಸುವುದು ಪೊಲೀಸರ ಕರ್ತವ್ಯ. ನಮ್ಮ ಬೇಡಿಕೆ ಈಡೇರದಿದ್ದರೆ ಯುವತಿಯರು ವ್ಯಾಸಂಗ ಮಾಡುವ ಕಾಲೇಜಿನ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.