ಹಳೇಹುಬ್ಬಳ್ಳಿ ಪ್ರಕರಣ; ಮತ್ತೆ ೧೦೮ ಜನರಿಗೆ ಜಾಮೀನು

Advertisement

ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ೧೦೮ ಮಂದಿಗೆ ಶುಕ್ರವಾರ ಹೈಕೋರ್ಟ್ ಜಾಮೀನು ನೀಡಿದೆ. ಇನ್ನೂ ಮೂರು ಜನರ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಅವರಿಗೂ ಶೀಘ್ರ ಜಾಮೀನು ಪಡೆಯುವ ಪ್ರಯತ್ನ ನಡೆದಿದೆ ಎಂದು ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಮುಖಂಡ ಯೂಸೂಫ್ ಸವಣೂರು, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ತಿಳಿಸಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದಾಯದ ಯುವಕರನ್ನು ಬಂಧಿಸಿ, ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಕೆಲವರಿಗೆ ಜಾಮೀನು ಸಿಕ್ಕರೆ, ಇನ್ನೂ ಕೆಲವರಿಗೆ ಸಿಕ್ಕಿರಲಿಲ್ಲ. ಇನ್ನೂ ಮೂವರಿಗೆ ಜಾಮೀನು ಸಿಗಬೇಕಿದೆ ಎಂದು ಅವರು ಶುಕ್ರವಾರ ತಿಳಿಸಿದರು.
ವಕೀಲ ರೆಹಮತ್ ಉಲ್ ಕೊತವಾಲ್ ಮತ್ತು ಎಸ್. ಬಾಲನ್ ವಾದ ಮಂಡಿಸಿದರು. ಜಾಮೀನು ಆದೇಶದ ಪ್ರಮಾಣ ಪ್ರತಿ ಸಿಕ್ಕ ತಕ್ಷಣ ಬಿಡುಗಡೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.
ಏನಿದು ಘಟನೆ?
೨೦೨೨ರ ಏಪ್ರಿಲ್ ೧೬ ರಂದು ಯುವಕನೊಬ್ಬ ವಿವಾದಾತ್ಮಕ ಎನಿಮೇಟೆಡ್ ವಾಟ್ಸಪ್ ವಿಡಿಯೊ ಸ್ಟೇಟಸ್ ಹಾಕಿದ ಹಿನ್ನೆಲೆಯಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಗಲಭೆ ಆಗಿತ್ತು. ಕೆಲವರು ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದರು.
ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಒಂದು ಸಾವಿರಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿ, ೧೫೫ ಜನರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲ ಸಲ ಒಮ್ಮೆ ೯, ಎರಡನೇ ಬಾರಿ ೩೫ ಜನರ ಬಿಡುಗಡೆ ಮಾಡಲಾಗಿತ್ತು. ಈಗ ೧೦೮ ಜನರನ್ನು ಬಿಡುಗಡೆ ಮಾಡಿದೆ.