ಹಾರಲಾರದ ಪಕ್ಷಿಗಳು

Advertisement

ನಾನು ಶಾಲೆಯನ್ನು ಬಿಡುವ ದಿನ ಹತ್ತಿರ ಬಂದಂತೆ, ಅದು ಹೇಗೋ ಕೆಲವರಿಗೆ ಆ ವಿಷಯ ತಿಳಿದು, ಕೆಲವು ಪಾಲಕರಿಗೂ ಗೊತ್ತಾಯಿತು. ನನ್ನ ಮೇಲೆ ಹೆಚ್ಚಿನ ವಿಶ್ವಾಸವನ್ನು ಇಟ್ಟಿದ್ದ ಪಾಲಕರು ನನ್ನನ್ನು ಬಂದು ಕಾಣತೊಡಗಿದರು. ಶಿಕ್ಷಕರಂತೂ ತೋರಿದ ಪ್ರೀತಿಯನ್ನು ಮರೆಯುವುದು ಅಸಾಧ್ಯ. ಅವರ ಪ್ರೀತಿಯನ್ನು ಕಂಡಾಗ ಒಮ್ಮೊಮ್ಮೆ ಶಾಲೆ ಬಿಡುವ ನಿರ್ಧಾರ ತಪ್ಪಾಯಿತೇ ಎನ್ನಿಸಿದ್ದುಂಟು.
ಕೆಲವು ಪಾಲಕರು ಬಂದು, ಸರ್, ನೀವು ಶಾಲೆಯನ್ನು ಬಿಡುತ್ತೀರಂತೆ. ನಿಮ್ಮ ಹೆಸರು ಕೇಳಿ, ನಾವು ಮಗುವನ್ನು ಸೇರಿಸಿದ್ದೇವೆ. ಮುಂದೆ ಮಗುವನ್ನು ಇಲ್ಲಿಯೇ ಇಡಬೇಕೇ ಅಥವಾ ಬೇರೆ ಕಡೆಗೆ ಸೇರಿಸುವುದೇ, ಎಂಬುದನ್ನು ನೀವೇ ಹೇಳಬೇಕು’’ ಎಂದರು. ನಾನು ಅವರಿಗೆ ಹೇಳಿದೆ,ಶಾಲೆ ಒಬ್ಬರಿಂದ ಆಗುವುದಲ್ಲ. ಇದೊಂದು ದೊಡ್ಡ ತೇರು ಇದ್ದಂತೆ. ಅದನ್ನು ನೂರಾರು ಜನರು ಎಳೆದರೆ ಮಾತ್ರ ಮುಂದೆ ಚಲಿಸುತ್ತದೆ. ಈ ಶಾಲೆ ಬಹು ದೊಡ್ಡದು ಮಾತ್ರವಲ್ಲ, ತುಂಬ ವ್ಯವಸ್ಥಿತವಾದದ್ದು. ನಿಮಗೆ ಯಾವ ಚಿಂತೆಯೂ ಬೇಡ’’.
ಒಂದು ದಿನ ಒಬ್ಬ ಮಗುವಿನ ತಂದೆ-ತಾಯಂದಿರು ನನ್ನನ್ನು ಕಾಣಲು ಬಂದರು. ಆ ಮಗು ನಮ್ಮ ಶಾಲೆಯನ್ನು ಸೇರಿ ಕೆಲವೇ ದಿನಗಳಾಗಿದ್ದವು. ಆ ಹುಡುಗಿ ತುಂಬ ಆಲಸಿ, ಯಾವ ಕಾರ್ಯವನ್ನೂ ತಾನೇ ಮಾಡಿಕೊಳ್ಳುವುದಿಲ್ಲವೆಂಬ ದೂರುಗಳು ಬಂದಿದ್ದವು. ನಾನು ಆ ಹಾಸ್ಟೆಲ್ಲಿನ ವಾರ್ಡನ್‌ರನ್ನು ಪಾಲಕರ ಮುಂದೆಯೇ ಕರೆದು ಮಗುವಿನ ಬಗ್ಗೆ ಕೇಳಿದೆ. ವಾರ್ಡನ್, ಸರ್, ಈ ಹುಡುಗಿ ಆರನೇ ತರಗತಿಯಲ್ಲಿದ್ದಾಳೆ. ಆಶ್ಚರ್ಯವೆಂದರೆ ಆಕೆಗೆ ತನ್ನ ಬಟ್ಟೆಗಳನ್ನು ಹಾಕಿಕೊಳ್ಳಲು ಬರುವುದಿಲ್ಲ. ಆಕೆಗೆ ಬೂಟುಗಳನ್ನು ನಾವೇ ಹಾಕಬೇಕು. ಸ್ನಾನ ಮಾಡಿ ಹೊರಬಂದು ಬೆನ್ನು ಒರೆಸು ಎಂದು ನಿಂತುಬಿಡುತ್ತಾಳೆ. ಆಕೆಯ ಚೀಲದಲ್ಲಿ ಪುಸ್ತಕಗಳನ್ನು ನಾನೇ ವೇಳಾಪತ್ರಿಕೆ ನೋಡಿ ಹಾಕಬೇಕು. ಏನು ಕೇಳಿದರೂ ನನಗೆ ಗೊತ್ತಿಲ್ಲ, ಮಾಡಲಾಗುವುದಿಲ್ಲ ಎನ್ನುತ್ತಾಳೆ’’ ಎಂದರು. ಪಾಪ! ಪಾಲಕರ ಮುಖ ಚಿಕ್ಕದಾಗಿತ್ತು. ಹುಡುಗಿಯ ತಂದೆ ಹೇಳಿದರು,ಸರ್, ನಾನು ನನ್ನ ಹೆಂಡತಿಗೆ ಹಲವಾರು ಬಾರಿ ಅತೀ ಪ್ರೀತಿ ಬೇಡ ಎಂದು ಹೇಳಿದರೂ ಕೇಳುವುದಿಲ್ಲ. ಎಲ್ಲವನ್ನು ತಾನೇ ಮಾಡುತ್ತಾಳೆ. ಇಡೀ ದಿನ ಅವಳದೇ ಕೆಲಸ. ದಿನಾಲು ತರತರಹದ ಅಡುಗೆ, ತಿನಿಸು ಮಾಡುತ್ತಾಳೆ. ಆಕೆಗೆ ಬಟ್ಟೆ ತೊಡಿಸುವುದು, ಸ್ನಾನ ಮಾಡಿಸುವುದು ಎಲ್ಲವನ್ನೂ ಆಕೆಯೇ ಮಾಡುತ್ತಾಳೆ. ಹೀಗಾಗಿ ಮಗಳಿಗೆ ಯಾವ ಕೆಲಸವನ್ನೂ ಸ್ವತಂತ್ರವಾಗಿ ಮಾಡಲಾಗುವುದಿಲ್ಲ. ಎಷ್ಟು ಹೇಳಿದರೂ ಈಕೆ ಕೇಳುವುದಿಲ್ಲ’’. ತಾಯಿ ಬಿಕ್ಕಿದರು. ಆಕೆಗೆ ದು:ಖ ತಡೆಯಲಾಗಲಿಲ್ಲ. ಬಿಕ್ಕಿ ಬಿಕ್ಕಿ ಅಳತೊಡಗಿದರು. ಐದು ನಿಮಿಷಗಳ ನಂತರ ಸಂತೈಸಿಕೊಂಡು ಹೇಳಿದರು, ಸರ್, ಈಕೆಗಿಂತ ಮೊದಲು ನನಗೆ ಎರಡು ಮಕ್ಕಳು ಹುಟ್ಟಿ ತೀರಿಹೋದವು. ಆದ್ದರಿಂದ ಈಕೆಯನ್ನು ಸದಾಕಾಲದ ಎಚ್ಚರದಿಂದ ಬೆಳೆಸಿದೆ. ಆಕೆಗೇನು ಆಗಿಬಿಡುತ್ತದೋ ಎಂದು ಉಸಿರು ಬಿಗಿಹಿಡಿದುಕೊಂಡು ಕ್ಷಣಕಾಲವೂ ಆಕೆಯ ಮೇಲಿಂದ ಕಣ್ಣು ತೆಗೆಯದೆ, ಎಲ್ಲವನ್ನೂ ಮಾಡುತ್ತ ಬಂದೆ. ಆಕೆಗೆ ಈಗ ಕಷ್ಟವಾಗಿದೆ. ಏನು ಮಾಡಲಿ?’’.ಚಿಂತೆ ಬೇಡ. ಇನ್ನೊಂದು ತಿಂಗಳಲ್ಲಿ ಮಗು ಹೊಂದಿಕೊಂಡು ಬಿಡುತ್ತದೆ. ಆದರೆ ಒಂದು ಮಾತು ತಮಗೆ ಹೇಳಬೇಕು. ಮಕ್ಕಳಿಗೆ ಪ್ರೀತಿ ಬೇಕು. ಅದು ಅತಿಯಾದರೆ ವಿಷವಾಗುತ್ತದೆ’’ ಎಂದು ಹೇಳಿ ಅವರಿಗೊಂದು ಕತೆ ಹೇಳಿದೆ.
ಯಾವುದೋ ಕಾಲದಲ್ಲಿ ಒಂದು ಪಕ್ಷಿ ಇತ್ತು. ಅದು ಮೊಟ್ಟೆಯಿಂದ ಹೊರಬರುವಾಗ ಪೆಟ್ಟಾಯಿತೋ ಅಥವಾ ಮತ್ತೇನಾದರೂ ತೊಂದರೆಯಾಯಿತೋ ತಿಳಿಯದು. ಅದರ ರೆಕ್ಕೆಗಳು ಬಿಚ್ಚ್ಚಿಕೊಳ್ಳದೆ ಹಾರಲು ಅಸಮರ್ಥವಾಗಿತ್ತು. ಉಳಿದ ಪಕ್ಷಿಗಳು ಹಾರುವುದನ್ನು ಕಂಡಾಗ ಅದು ದೀನತೆಯಿಂದ ಅವುಗಳ ಕಡೆಗೆ ನೋಡುತ್ತ, ಮೌನದಿಂದ ಕಣ್ಣುಹನಿಯಾಗಿ ಕುಳಿತುಬಿಡುತ್ತಿತ್ತು. ಕೋಳಿಗಳಂತೆ ನೆಲದ ಮೇಲೆಯೇ ಓಡಾಡುತ್ತ, ಕಾಳು ಆರಿಸಿಕೊಂಡು ಬದುಕು ಸಾಗಿಸುತ್ತಿತ್ತು.
ಒಂದಷ್ಟು ದಿನಗಳು ಕಳೆದ ಮೇಲೆ ಈ ಪಕ್ಷಿ ಮೊಟ್ಟೆ ಇಟ್ಟಿತು. ಅದನ್ನು ಸಂಭ್ರಮದಿಂದ, ಪ್ರೀತಿಯಿಂದ ಕಾವು ಕೊಟ್ಟು ಕಾಪಾಡಿತು. ಸರಿಯಾದ ಸಮಯದಲ್ಲಿ ಮೊಟ್ಟೆ ಸೀಳಿ ಮರಿ ಹೊರಗೆ ಬಂದಿತು. ತಾಯಿ ಪಕ್ಷಿಗೆ ಅತೀವ ಸಂತೋಷ. ಅದರೊಂದಿಗೆ ವಿಪರೀತ ಭಯ. ಮರಿ ಹುಟ್ಟಿದ್ದಕ್ಕೆ ಸಂತೋಷವಾದರೆ, ಮರಿಯೂ ತನ್ನ ಹಾಗೆಯೇ ಹಾರದೆ ಹೋದರೆ ಏನು ಗತಿ ಎಂಬ ಚಿಂತೆ. ಮರಿ ಬೆಳೆಯಿತು. ಅದು ನೋಡಿದ್ದು ಯಾರನ್ನು? ತಾಯಿಯನ್ನು ಮತ್ತು ಇತರ ಕೋಳಿಗಳನ್ನು. ಅದು ತಾಯಿಯ ಜೊತೆಗೇ ಓಡಾಡುತ್ತ ಹಾರುವುದನ್ನೇ ಕಲಿಯಲಿಲ್ಲ. ಒಂದು ದಿನ ತಾಯಿ ಸಂಕಟದಿಂದ ಹೇಳಿತು, ಮಗೂ, ನಾವು ಮೂಲತ: ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಕಾಳು-ಕಡಿ ಹುಡುಕಾಡಿಕೊಂಡು ಓಡಾಡುವವರಲ್ಲ. ಅದೇನು ತೊಂದರೆಯೋ ನನಗೆ ತಿಳಿಯದು. ನನಗೆ ಹಾರಾಡಲು ಬರಲೇ ಇಲ್ಲ. ನೀನಾದರೂ ಹಾರಬಾರದೇ?’’. ಹಾರುವುದು ಎಂದರೆ ಏನಮ್ಮ? ಯಾಕೆ ಹಾರಾಡಬೇಕು? ಇಲ್ಲಿಯೇ ಸ್ನೇಹಿತರ ಜೊತೆಗೆ ಓಡಾಡಿ ಕೊಂಡಿರುವುದು ಚೆನ್ನಾಗಿದೆಯಲ್ಲ?’’ ಕೇಳಿತು ಮರಿ.
ಮಗೂ ನಾನು ಹಾರುವ ಸಂತೋಷ ತಿಳಿದಿಲ್ಲ, ಯಾಕೆಂದರೆ ಒಮ್ಮೆಯೂ ಹಾರಿಲ್ಲವಲ್ಲ? ಆದರೆ ನನ್ನಮ್ಮ ಹೇಳುತ್ತಿದ್ದಳು. ನಾವು ಆಕಾಶದ ರಾಜರಂತೆ. ತುಂಬ ಎತ್ತರದಲ್ಲಿ ಹಾರಾಡುವುದು ನಮ್ಮ ವಿಶೇಷ ಗುಣವಂತೆ. ಹಾರಲಾರದ ಅಶಕ್ತರು ಮಾತ್ರ ಹೀಗೆ ನೆಲದ ಮೇಲೆ ಓಡಾಡುತ್ತಾರಂತೆ’’ ಎಂದಿತು ತಾಯಿ. ಹಾಗಾದರೆ ನನಗೂ ಹಾರುವುದನ್ನು ಕಲಿಸಿಕೊಡು’’ ಎಂದು ಗೋಗರೆಯಿತು ಮರಿಹಕ್ಕಿ. ತಾಯಿ ಹಕ್ಕಿಗೆ ಕಲಿಸುವ ಉಮೇದು, ಆದರೆ ತನಗೇ ಹಾರಲು ಬರುವುದಿಲ್ಲ. ತಾಯಿ ತನ್ನ ಜಾತಿಯ ಪಕ್ಷಿಗಳಿಗೆ ಬೇಡಿಕೊಂಡಿತು. ತನ್ನ ಮುದ್ದು ಮರಿಗೆ ಹೇಗಾದರೂ ಮಾಡಿ ಹಾರಲು ಕಲಿಸಿಕೊಡಿ ಎಂದು ಕೇಳಿ ಕಾಡಿತು. ಬಹಳಷ್ಟು ಪಕ್ಷಿಗಳು ಇದೆಂಥ ಪಕ್ಷಿ? ಹಾರಲು ಬರದಿದ್ದ ಮೇಲೆ ಇದೊಂದು ಪಕ್ಷಿಯೇ? ಪಕ್ಷಿಗೆ ಹಾರುವುದು ಸ್ವಭಾವಸಿದ್ಧ. ಯಾರಾದರೂ ಹಾರಲು ಕಲಿಸಬೇಕೇ?’’ ಎಂದು ನಕ್ಕು, ಹೀಯಾಳಿಸಿ ಹಾರಿ ಹೋದವು. ಒಂದೆರಡು ಪಕ್ಷಿಗಳು ಕನಿಕರದಿಂದ ಮರಿಯ ಹತ್ತಿರ ಬಂದು ರೆಕ್ಕೆ ಬಡಿದು ಮೇಲೇಳಲು ಪ್ರಯತ್ನಿಸು ಎಂದು ಹೇಳಿ, ತಾವೂ ಹಾರಿ ತೋರಿಸಿದವು. ಈ ಮರಿ ಎಷ್ಟೇ ರೆಕ್ಕೆ ಬಡಿದರೂ ಮುಂದೆ ಮುಂದೆ ಓಡುತ್ತಿತ್ತೇ ವಿನ: ನೆಲಬಿಟ್ಟು ಹಾರಲಿಲ್ಲ. ತನ್ನ ಆಶಕ್ತತೆಯನ್ನು ಕಂಡು ಅಳುತ್ತ ಕುಳಿತುಬಿಟ್ಟಿತು. ಒಂದು ದಿನ ಭಾರೀ ಗರುಡ ಹಾರುತ್ತ ಅಲ್ಲಿಗೆ ಬಂದಿತು. ಅದು ತುಂಬ ಹಿರಿಯ ಪಕ್ಷಿ. ಅಳುತ್ತ ಕುಳಿತ ಮರಿಯನ್ನು ಮತ್ತು ಅದಕ್ಕೆ ಸಮಾಧಾನ ಹೇಳುತ್ತಿದ್ದ ತಾಯಿಯನ್ನು ಕಂಡಿತು.ಏನು ಸಮಸ್ಯೆ?’’ ಎಂದು ಕೇಳಿತು. ತಾಯಿಯಿಂದ ಎಲ್ಲ ವಿಷಯವನ್ನು ಸಮಾಧಾನವಾಗಿ ಕೇಳಿಸಿಕೊಂಡು, ಇಷ್ಟೇ ತಾನೇ ಸಮಸ್ಯೆ?’’ ಎಂದದ್ದೇ ಮರಿಯನ್ನು ತನ್ನ ಕಾಲಿನಲ್ಲಿ ಹಿಡಿದುಕೊಂಡು ಭರ‍್ರನೇ ಆಕಾಶಕ್ಕೆ ಹಾರಿಬಿಟ್ಟಿತು. ತಾಯಿಗೆ ಗಾಬರಿ. ಮರಿಗೆ ಉಸಿರುಕಟ್ಟುತ್ತಿತ್ತು. ಗರುಡ ಮೇಲಕ್ಕೆ, ಮೇಲಕ್ಕೆ ಏರುತ್ತಲೇ ಹೋಯಿತು. ಕಾಲುಗಳಲ್ಲಿ ಸಿಕ್ಕಿಕೊಂಡಿದ್ದ ಮರಿಗೆ ನೆಲವೇ ಕಾಣದಾಯಿತು. ಸಾಕಷ್ಟು ಎತ್ತರಕ್ಕೆ ತಲುಪಿದ ಮೇಲೆ ಗರುಡ ಜೋರಾಗಿ ಕೂಗಿತು.ಈಗ ನಿನ್ನನ್ನು ಬಿಟ್ಟು ಬಿಡುತ್ತೇನೆ. ಒಂದೇ ಸಮನೆ ರೆಕ್ಕೆ ಬಡಿ. ನೀನೇ ಹಾರುತ್ತೀ’’. ಮರಿ, ಬೇಡ, ಬೇಡ, ನನಗೆ ಭಯವಾಗುತ್ತಿದೆ. ನಾನು ನೆಲಕ್ಕೆ ಬಿದ್ದು ಸತ್ತೇ ಹೋಗುತ್ತೇನೆ’’ ಎಂದು ಚೀರಿತು. ನೀನು ಈಗ ಹಾರಬೇಕು ಇಲ್ಲವೇ ಸಾಯಬೇಕು. ಹೂಂ, ಬೇಗನೆ ರೆಕ್ಕೆ ಬಡಿ’’ ಎಂದು ಮರಿಯನ್ನು ಬಿಟ್ಟು ಬಿಟ್ಟಿತು.
ಮರಿ ಕೆಳಗೆ ಬೀಳತೊಡಗಿತು. ಹೌಹಾರಿತು. ತಲೆ ಗರಗರನೇ ತಿರುಗಿತು. ರೆಕ್ಕೆ ಬಿಚ್ಚುತ್ತಿಲ್ಲ. ಭೂಮಿ ಹತ್ತಿರಕ್ಕೆ ಬರುತ್ತಿದೆ. ಅಯ್ಯೋ ಸತ್ತೇ’’ ಎಂದು ಕೂಗಿತು. ಅಷ್ಟರಲ್ಲಿ ಗರುಡ ಭರ‍್ರೆಂದು ಕೆಳಗೆ ಬಂದು ಅದನ್ನು ಹಿಡಿದು ಮತ್ತೆ ಮೇಲೇರಿತು.ಈಗ ಮತ್ತೆ ಪ್ರಯತ್ನಿಸು’’ ಎಂದು ಹೇಳಿ ಮರಿಯನ್ನು ಬಿಟ್ಟಿತು. ಈಗಲೂ ಮರಿಗೆ ವಿಪರೀತ ಗಾಬರಿ. ಆದರೆ ಮೊದಲನೆಯ ಬಾರಿಯಷ್ಟು ಅಲ್ಲ. ಇನ್ನೂ ಒಂದೆರಡು ಬಾರಿ ಇದೇ ತರಹ ಮಾಡಿ, ಗರುಡ ಅದನ್ನು ಇನ್ನೂ ಎತ್ತರಕ್ಕೆ ಕರೆದೊಯ್ದು ಬಿಟ್ಟಿತು. ಭೂಮಿ ಹತ್ತಿರಕ್ಕೆ ಬರುತ್ತಿದ್ದಂತೆ ಸ್ವಲ್ಪ ಆತ್ಮವಿಶ್ವಾಸ ತುಂಬಿಕೊಂಡಿದ್ದ ಮರಿ ಪಟಪಟನೆ ರೆಕ್ಕೆ ಬಿಚ್ಚಿ ಬಡಿಯಿತು. ರೆಕ್ಕೆಯ ಅಡಿ ಗಾಳಿ ತುಂಬಿಕೊಂಡು ನಿಧಾನವಾಗಿ ಹಾರತೊಡಗಿತು. ಅದೆಂಥ ರೋಮಾಂಚಕ ಅನುಭವ! ಸಂತೋಷದಿಂದ ಕೇಕೆ ಹಾಕಿತು. ನಾನೂ ಹಾರಬಲ್ಲೆ, ಆಕಾಶವನ್ನೇ ಆಳಬಲ್ಲೆ’’ ಎಂದು ಕೂಗಿತು. ಹೊಸದಾಗಿ ಕಲಿತ ವಿದ್ಯೆ ಅದಕ್ಕೆ ಬಲ, ಸಂತೋಷ ತಂದಿತ್ತು. ಹಾರಾಡಿ, ಹಾರಾಡಿ ತಾಯಿಯ ಬಳಿಗೆ ಬಂದಿತು.ಅಮ್ಮ, ನಾನೀಗ ಎಲ್ಲಿ ಬೇಕಾದರೂ ಹಾರಬಲ್ಲೆ’’ ಎಂದಿತು. ತಾಯಿ ಸಂತೋಷದಿಂದ ಕಣ್ಣೀರು ಸುರಿಸಿತು.
ನಮ್ಮ ಮಕ್ಕಳೂ ಹೀಗೆಯೇ, ತಮ್ಮಿಂದಾಗುವುದಿಲ್ಲ, ಬಹಳ ಕಷ್ಟ ಎನ್ನುತ್ತಾ ಮುಂದೆ ಪ್ರಯತ್ನಿಸಲು ಹೋಗುವುದೇ ಇಲ್ಲ. ಕೆಲವು ಪಾಲಕರೂ ಅತಿಯಾದ ಪ್ರೀತಿಯಿಂದ, ಭಯದಿಂದ ಮಕ್ಕಳಿಗೆ ಏನೂ ಮಾಡಲು ಬಿಡದೆ, ತಾವೇ ಮಾಡುತ್ತ ಅವರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಾರೆ. ಅವರನ್ನು ಜವಾಬ್ದಾರಿಗೆ ತಳ್ಳಿದಾಗ ಮಾತ್ರ ಜವಾಬ್ದಾರಿ ತರುವ ಸಂತೋಷ ಅವರಿಗೆ ದಕ್ಕುತ್ತದೆ. ಎಚ್ಚರಿಕೆಯಿಂದ, ಹಂತಹಂತವಾಗಿ ಅವರಿಗೆ ಜವಾಬ್ದಾರಿ ವಹಿಸಿದರೆ ಅವರೂ ಸಮರ್ಥರಾಗುತ್ತಾರೆ. ಅತಿಯಾದ ರಕ್ಷಣೆ ಅವರನ್ನು ಮುಂದೆ ಹೋಗಲು ಬಿಡದೆ, ರೆಕ್ಕೆ ಇದ್ದೂ ಹಾರಲಾರದ ಪಕ್ಷಿಯನ್ನಾಗಿ ಮಾಡುತ್ತದೆ. ಕಥೆ ಕೇಳಿದ ತಾಯಿ ಕಣ್ಣೊರೆಸಿಕೊಂಡು, “ಹೌದು ಸರ್, ನಾವು ಇದುವರೆಗೂ ಮಾಡಿದ್ದು ಹೀಗೆಯೇ. ನೀವೇ ಈಗ ಗರುಡ ಆಗಿ ಆಕೆಯಲ್ಲಿ ಆತ್ಮವಿಶ್ವಾಸ ತುಂಬಬೇಕು’’ ಎಂದು ಹೊರಟರು.