ಹಾಲಿ-ಮಾಜಿ ಮಧ್ಯೆ ನೇಕಾರ-ಸ್ಥಳೀಯ ಪೈಪೋಟಿ

ಬಾಗಲಕೋಟೆ
Advertisement

ಬಾಗಲಕೋಟೆ(ಬನಹಟ್ಟಿ): ರಾಜಕೀಯ ರಂಗು ತೇರದಾಳ ವಿಧಾನಸಭಾ ಕ್ಷೇತ್ರಾದ್ಯಂತ ತೀರಾ ವಿಭಿನ್ನವಾಗಿ ಕೂಡಿದ್ದು, ಬಹುತೇಕ ಕಡೆಗಳಲ್ಲಿ ಹೊಸಬರ-ಹಳಬರ ಮಧ್ಯ ಪೈಪೋಟಿ ಎದುರಾಗುತ್ತಿದ್ದರೆ, ಇಲ್ಲಿ ಮಾತ್ರ ವಿಶೇಷತೆಯಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯದಲ್ಲಿ ಒಂದೇ ಧ್ವನಿ ಪ್ರತಿಧ್ವನಿಸುತ್ತಿದೆ. ಬಿಜೆಪಿಯ ಹಾಲಿ ಶಾಸಕ ಸಿದ್ದು ಸವದಿಯವರಿಗೆ ಹಾಗೂ ಕಾಂಗ್ರೆಸ್ ಮಾಜಿ ಸಚಿವೆ ಉಮಾಶ್ರೀಯವರಿಗೆ ಟಿಕೆಟ್ ನೀಡುವಲ್ಲಿ ಉಭಯ ಹೈಕಮಾಂಡ್‌ಗಳಿಗೆ ತೀವ್ರ ತಲೆ ನೋವಾಗಿದ್ದು, ಕ್ಷೇತ್ರವಾದಾಗಿನಿಂದಲೂ ನೇಕಾರ ಸಮುದಾಯಕ್ಕೆ ಅವಕಾಶ ನೀಡಿಲ್ಲವೆಂದು ವಾದವಾದರೆ, ಮತ್ತೊಂದು ವಾದ ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕೆಂಬುದು. ಹೀಗಾಗಿ ಎರಡೂ ಪಕ್ಷಗಳಲ್ಲಿನ ಮುಖಂಡರು ಬಹಿರಂಗವಾಗಿಯೇ ಸವಾಲು ಎಸೆಯುವ ಮೂಲಕ ಈ ಬಾರಿ ಟಿಕೆಟ್ ನಮಗೇ ನೀಡಬೇಕೆಂದು ಆಯಾ ಹೈಕಮಾಂಡ್‌ಗಳ ಮುಂದೆ ಪರೇಡ್ ಮಾಡುತ್ತಿದ್ದು, ಟಿಕೆಟ್‌ಗಾಗಿ ಭಾರಿ ಕಸರತ್ತು ಮಾಡುತ್ತಿದ್ದಾರೆ.
ಕಾಂಗ್ರೆಸ್‌ನಿಂದ ನೇಕಾರ ಸಮುದಾಯಕ್ಕೆಂದು ಡಾ. ಎಂ.ಎಸ್. ದಡ್ಡೇನವರ, ಸ್ಥಳೀಯರಾಗಿ ಡಾ. ಎ.ಆರ್. ಬೆಳಗಲಿ, ಡಾ. ಪದ್ಮಜೀತ ನಾಡಗೌಡ ಪಾಟೀಲ ಟಿಕೆಟ್‌ಗಾಗಿ ಲಾಭಿ ನಡೆಸುತ್ತಿದ್ದರೆ, ಬಿಜೆಪಿಯಿಂದ ನೇಕಾರ ಸಮುದಾಯದಿಂದ ರಾಜೇಂದ್ರ ಅಂಬಲಿ, ಮನೋಹರ ಶಿರೋಳ ಹಾಗೂ ಸ್ಥಳೀಯ ಅಭ್ಯರ್ಥಿಯೆಂದು ಡಾ. ಎಂ.ಎಸ್. ದಾನಿಗೊಂಡ, ಕಿರಣಕುಮಾರ ಪಾಟೀಲ, ಭೀಮಶಿ ಮಗದುಮ್ ಪೈಪೋಟಿಯಲ್ಲಿದ್ದಾರೆ.
ಸ್ಥಳೀಯ ಅಥವಾ ನೇಕಾರ ವ್ಯಕ್ತಿಗೇ ಟಿಕೆಟ್ ನೀಡಬೇಕೆಂಬ ಕೂಗು ಕಾಂಗ್ರೆಸ್-ಬಿಜೆಪಿಯ ವರಿಷ್ಠರಿಗೆ ತಲೆನೋವಾಗಿದ್ದು, ಅಳೆದು ತೂಗಿ ಯಾರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡಲಿದ್ದಾರೆಂದು ಕಾದು ನೋಡಬೇಕು.