ಹಿನ್ನಡೆಯಾದ ಪ್ರದೇಶಕ್ಕೆ ಮುನ್ನಡೆಯ ಮುನ್ನುಡಿ ಬರೆದ ಸರ್ಕಾರ

CM
Advertisement

ಬಾಗಲಕೋಟ: ನೀರಾವರಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ರೈತರಕಣ್ಣೊರೆಸುವ ಕಾರ್ಯ ಮಾಡಿರುವ ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ 3 ನೇ ಹಂತದ ಭೂಸ್ವಾಧೀನ ಕ್ರಿಯೆ ನಡೆದಿದ್ದು, ಇದಕ್ಕಾಗಿ ಹಣ ಕಾಯ್ದಿರಿಸಲಾಗಿದೆ. ಅತಿ ಶೀಘ್ರವೇ ಕಾಮಗಾರಿಗೆ ಚಾಲನೆ ದೊರಕಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಸಸಾಲಟ್ಟಿ ಶ್ರೀ ಶಿವಲಿಂಗೇಶ್ವರ ಏತ ನೀರಾವರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೃಷ್ಣಾ ಜಲಾನಯನ ಕಾರ್ಯದಲ್ಲಿ ಹಿಂದಿನ ಸರ್ಕಾರ ಕೇವಲ ಭರವಸೆಗಳನ್ನೇ ಹರಿಸಿ ಮೋಸವೆಗಸಿದ್ದಾರೆ.
ಬರೀ ಮಾತಾಡೋದನ್ನು ಬಿಟ್ಟು ಕೆಲ್ಸಾ ಮಾಡಬೇಕು ಅಂದಾಗ ಮಾತ್ರ ಜನ ನಾಡು ಮೆಚ್ಚುವದು ಎಂದು ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಹರಿಹಾಯ್ದರು. ದುಡ್ಡೇ ದೊಡ್ಡಪ್ಪವೆಂಬ ಶಾಸ್ತçವನ್ನು ಅಳಿಸಿ ಹಾಕುವ ಮೂಲಕ ಬಿಜೆಪಿ ಸರ್ಕಾರವು ದುಡಿಮಯೇ ದೊಡ್ಡಪ್ಪವೆಂದು ತೋರಿಸಿಕೊಟ್ಟು ಅದರಂತೆ ಕೆಲಸವನ್ನೂ ಮಾಡಿದೆ. ಹುಸಿ ಭರವಸೆ ಹಾಗು ದಾರಿ ತಪ್ಪಿಸುವ ಕಾರ್ಯವನ್ನು ದೇವರು ಎಂದಿಗೂ ಮೆಚ್ಚುವದಿಲ್ಲ. ನಾನು ಕೆಲಸ ಮಾಡಿ ಭಾಷಣದಲ್ಲಿ ಮಾತಾಡುತ್ತೇನೆ. ಭಾಷಣಗಳೇ ಕೆಲಸವಲ್ಲವೆಂದು ವಿಪಕ್ಷಗಳನ್ನು ಸಿಎಂ ಬೊಮ್ಮಾಯಿ ತಿವಿದರು. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ 5 ನದಿಗಳ ನೀರು ಬಳಕೆಯಾಗುತ್ತಿರಲಿಲ್ಲ. ಇದರ ಹಿನ್ನಡೆಯನ್ನು ಅರಿತು ಈ ಪ್ರದೇಶಗಳನ್ನು ಸರಿಪಡಿಸಿ ಮುನ್ನಡೆಗೆ ಮುನ್ನುಡಿ ಬರೆಯುವಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, 475 ಕೋಟಿ ರೂ.ಗಲ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿಯೊಂದಿಗೆ ಅವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ನೀರಾವರಿ ಯೋಜನೆ ಜಾರಿ ತರುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರಮಿಸಿದ್ದಾರೆಂದರು.ಬಾಗಲಕೋಟೆ ಜಿಲ್ಲೆಯೊಂದರಲ್ಲಿಯೇ 3200 ಕೋಟಿ ರೂ.ಗಳ 1.04 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಮಂಜೂರು ಮಾಡಿದ್ದು, ಉತ್ತರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆಂದರು. ಕೃಷ್ಣಾ ಮೇಲ್ದಂಡೆ ಸಂತ್ರಸ್ತರು ಕಾಂಗ್ರೆಸ್‌ಗೆ ಮತ ನೀಡಿ ಸಂಕಷ್ಟಪಡಬೇಕಾಗಿತ್ತು. ಅಲ್ಲಿನ ಮುಳುಗಡೆ ಭೂಮಿಗೆ ಎಕರೆಗೆ 8 ಲಕ್ಷ ರೂ.ಗಳ ಬದಲಾಗಿ 24 ಲಕ್ಷ ರೂ.ಗೆ ಹೆಚ್ಚಿಸುವದರ ಮೂಲಕ ರೈತರ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಕಾಂಗ್ರೆಸ್ಸಿಗರು ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ 6 ದಶಕಗಳ ಆಡಳಿತದಲ್ಲಿ ಏನನ್ನು ಕಡಿದು ಕಡ್ಡಿ ಹಾಕಿದ್ದಾರೆಂದು ಕಾರಜೋಳ ಲೇವಡಿ ಮಾಡಿದರು.
ಸಸಾಲಟ್ಟಿ, ಮಂಟೂರ, ಕೆರೂರ, ಭಗವತಿ, ಶಿರೂರ ಏತ ನೀರಾವರಿಗಳಿಗೆ ನಮ್ಮ ಸರ್ಕಾರದಿಂದಲೇ ಕಾಮಗಾರಿಗೆ ಚಾಲನೆ ನೀಡುತ್ತೇವೆ. ಒಟ್ಟಾರೆ ಸಂಪೂರ್ಣ ನೀರಾವರಿ ಮಾಡುವ ಮೂಲಕ ದಾಖಲೆ ನಿರ್ಮಿಸುವಲ್ಲಿ ಸರ್ಕಾರ ಕಾರಣವಾಗಲಿದೆ ಎಂದರು. ಕೇವಲ ಅಕ್ಕಿ-ಬೇಳೆ ಉಚಿತ ನೀಡುವ ಬದಲು ಇಂದಿನ ದಿನಮಾನಗಳಲ್ಲಿ ಶಿಕ್ಷಣ, ಉದ್ಯೋಗ ಪ್ರಮುಖವಾಗಿ ಸ್ವಾಭಿಮಾನದ ಬದುಕು ನಿರ್ಮಿಸುವ ಕಾರ್ಯ ಮಾಡಬೇಕಿದೆ. ಬರೀ ಸುಳ್ಳು ಹೇಳುತ್ತಲೇ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಬಡವರ ಶಾಪಕ್ಕೆ ಗುರಿಯಾಗಿದ್ದಾರೆ.
ಸಾನಿಧ್ಯವನ್ನು ಬಂಡಿಗಣಿಯ ಅನ್ನದಾನೇಶ್ವರ ಶ್ರೀಗಳು ವಹಿಸಿದ್ದರು. ಸಚಿವ ಮುರುಗೇಶ ನಿರಾಣಿ, ಶಾಸಕ ಸಿದ್ದು ಸವದಿ ಮಾತನಾಡಿದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಪಿ.ಎಚ್. ಪೂಜಾರ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ನಗರಾಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ದಭಾಡಿ, ಪ್ರಾಧಿಕಾರ ಅಧ್ಯಕ್ಷ ಬಸವಪ್ರಭು ಹಟ್ಟಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.