ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್‌ ರಾವ್‌ ನಿಧನ

Advertisement

ಬೆಂಗಳೂರು: ಕರ್ನಾಟಕದ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್‌ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಎರಡು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅದರಲ್ಲೂ 15 ದಿನದ ಹಿಂದೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದರು ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ ಜಯಾ, ಪುತ್ರ ಅಭಿಜಿತ್‌ ಇದ್ದಾರೆ.
ಮೂಲತಃ ಶಿರಸಿ ತಾಲ್ಲೂಕಿನವರಾದ ಎಂ.ಕೆ.ಭಾಸ್ಕರರಾವ್‌ ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ಅಲ್ಲಿಯೇ ಶಿಕ್ಷಣ ಮುಗಿಸಿ ನಂತರ ಪತ್ರಿಕೋದ್ಯಮ ಸೇರಿದವರು. ಪ್ರಜಾವಾಣಿ ಪತ್ರಿಕೆಯಲ್ಲಿಯೇ ಮೂರು ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿದ್ದರು.
ರಾಯಚೂರು ಜಿಲ್ಲಾ ವರದಿಗಾರರಾಗಿದ್ದರು. ಬೆಂಗಳೂರಿನಲ್ಲಿ ಸಿನೆಮಾ ಪತ್ರಕರ್ತರಾಗಿಯೂ ಕೆಲವು ಕಾಲ ಭಾಸ್ಕರರಾವ್‌ ಕಾರ್ಯನಿರ್ವಹಿಸಿದ್ದರು. ನಿವೃತ್ತಿ ನಂತರ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಪ್ರವಾಸ ಕೈಗೊಳ್ಳುತ್ತಲೇ ಬರವಣಿಗೆಯಲ್ಲಿ ನಿರತರಾಗಿದ್ದರು. ಕೆಲವು ವರ್ಷದ ಹಿಂದೆಯಷ್ಟೇ ಕ್ಯಾನ್ಸರ್‌ಗೆ ಸಿಲುಕಿ ಚಟುವಟಿಕೆಗಳಿಂದ ದೂರವಾಗಿದ್ದರು. ಆರು ತಿಂಗಳ ಹಿಂದೆಯಷ್ಟೇ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಮನೆಗೆ ತೆರಳಿ ಸನ್ಮಾನ ಮಾಡಲಾಗಿತ್ತು. ದಿನೇಶ್ ಬಾಬು ನಿರ್ದೇಶನದ ನಟ ಉಪೇಂದ್ರ ನಟೆಸಿರುವ ‘ಹಾಲಿವುಡ್’ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು, ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ತಿಳಿದುಬಂದಿದೆ.

ಸಿಎಂ ಸಂತಾಪ: ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ ರಾವ್ ಅವರ ನಿಧನದಿಂದ ದು:ಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಪ್ರಜಾವಾಣಿಯ ದಿನಗಳಿಂದಲೂ ನಾನು ಬಲ್ಲ ಭಾಸ್ಕರ ರಾವ್ ನಿವೃತ್ತಿಯ ನಂತರವೂ ಪತ್ರಕರ್ತನಾಗಿ ಸಕ್ರಿಯರಾಗಿದ್ದರು. ತನ್ನ ಸೌಜನ್ಯಭರಿತ ನಡವಳಿಕೆಯಿಂದ ಎಲ್ಲರಿಗೂ ಆತ್ಮೀಯರಾಗಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.