ಹುಚ್ಚು-ಖೋಡಿ ಇವರೆಂಥಾ ರೋಲ್ ಮಾಡೆಲ್?

Advertisement

ಇವರು ರೋಲ್ ಮಾಡೆಲ್ಲಾ? ಹಾಗೆಯೇ ಇದ್ದಾರೆಯೇ ಇವರೆಲ್ಲ…?
ಕಳೆದ ಒಂದು ತಿಂಗಳಿಂದೀಚೆಗೆ ಚಂದನವನ' ಕೆಟ್ಟ ಹಾಗೂ ಆಘಾತಕಾರಿ ಕಾರಣಗಳಿಂದಾಗಿ ಸುದ್ದಿಯಾಗುತ್ತಿದೆ. ತಮ್ಮ ನೆಚ್ಚಿನ ನಟರನ್ನು ದೇವರೆಂದೇ ಪೂಜಿಸುವ, ಅವರ ನಡೆ ನುಡಿ, ಸ್ಟೈಲ್, ಜೀವನಕ್ರಮ ಎಲ್ಲವನ್ನೂ ರೀಲ್‌ನಲ್ಲಿ ಕಂಡಿದ್ದಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ, ಹೃದಯದಲ್ಲಿಟ್ಟುಕೊಳ್ಳುವ ಅಭಿಮಾನಿಗಳು. ದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ಕನಸಿನಲ್ಲಿಯೂ ಈ ಆರಾಧ್ಯ ಮಾಡೆಲ್‌ಗಳ ಪೂಜೆ. ಇದರ ಅತಿರೇಕ ಎಲ್ಲ ಭಾಷೆಗಳಲ್ಲಿ, ಸಿನಿಮೋದ್ಯಮದಲ್ಲಿ, ಸಮಾಜದಲ್ಲಿ ಏನೆಲ್ಲ ಅವಾಂತರಗಳನ್ನು ಸೃಷ್ಟಿಸುತ್ತದೆ...! ಆದಾಗ್ಯೂ ಈ ಹಾವಳಿ ನಿಂತಿಲ್ಲ. ಚಂದನವನದ ನಟ ನಟಿಯರ ವರ್ತನೆ ಅವರವರ ಅಭಿಮಾನಿಗಳಿಗೆ ಇವತ್ತು ಆಘಾತ ತಂದಿದೆ. ಕನ್ನಡದ ಖ್ಯಾತ ನಟ ದರ್ಶನ್ ತೂಗದೀಪ್ ಈಗ ಅಭಿಮಾನಿಯೊಬ್ಬರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ತನ್ನ ಪ್ರೇಯಸಿ ಪವಿತ್ರಾ ಗೌಡಳಿಗೆ ಅಶ್ಲೀಲ, ಅನುಚಿತ ಶಬ್ದಗಳಿಂದ ಮೆಸೇಜ್ ಮಾಡುತ್ತಿದ್ದಾನೆಂಬ ಕಾರಣಕ್ಕೆ ಆತನನ್ನು ಕಿಡ್ನ್ಯಾಪ್ ಮಾಡಿಸಿ, ಹಿಂಸಿಸಿ, ಬಡಿದು ಕೊನೆಗೆ ಆತನ ಹತ್ಯೆಯೇ ನಡೆಯಿತು. ಚಿತ್ರದುರ್ಗದಲ್ಲಿ ಔಷಧಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತ, ಸಮಾಜದ ಆಗು ಹೋಗು ಗಮನಿಸುತ್ತ, ದರ್ಶನ್ ಮೇಲೆ ತಮ್ಮ ಅಭಿಮಾನ, ಪ್ರೀತಿ ಮತ್ತು ಬದುಕಿನ ಕಾಳಜಿ ತೋರುತ್ತಿದ್ದ ರೇಣುಕಾ ಸ್ವಾಮಿ, ದರ್ಶನ್ ಕುಟುಂಬದ ಮೇಲಿನ ಕಳಕಳಿಯಿಂದ ಕಳಿಸಿದ್ದ ಸಂದೇಶ, ಅದೇ ದರ್ಶನ್ ಮತ್ತು ಅವರ ಬೆಂಬಲಿಗರಿಂದ ಸಾವು ತರುತ್ತದೆ ಎಂಬ ಕ್ಷಣ ಕಲ್ಪನೆಯೂ ಕೂಡ ಈತನಿಗೆ ಇದ್ದಿರಲಿಕ್ಕಿಲ್ಲ! ಹೀಗಾದೀತೆಂದು ಊಹಿಸಿಕೊಳ್ಳಲೂ ಕಷ್ಟ. ರೇಣುಕಾ ಸ್ವಾಮಿ ದರ್ಶನ್ ಅಭಿಮಾನಿ. ಅವನ ಕಾಳಜಿ ದರ್ಶನ್ ಕುಟುಂಬ ಉಳಿಯಬೇಕು; ಅದಕ್ಕಾಗಿ ಪವಿತ್ರಾ ಗೌಡಗೆ ದರ್ಶನ್ ಕುಟುಂಬದಲ್ಲಿಹುಳಿ ಹಿಂಡಬೇಡ’ ಎಂಬ ಕಳಕಳಿ ಒತ್ತಾಸೆಯ ಸಂದೇಶ ರವಾನಿಸುತ್ತಿದ್ದ ಎನ್ನಲಾಗಿದೆ.
ಪವಿತ್ರಾ ಗೌಡಳ ಈ ಆರೋಪ ದರ್ಶನನ ನೆತ್ತಿಗೆ ಏರಿರಬೇಕು. ಮೊದಲೇ ಅಹಂಕಾರ. ನಿಯಂತ್ರಣಕ್ಕಿಲ್ಲದ ಹುಚ್ಚು-ಖೋಡಿ ಮನಸ್ಸು. ದರ್ಶನ್ ತನ್ನ ಬೆಂಬಲಿಗರಿಗೆ, ಅಭಿಮಾನಿಗಳಿಗೆ ಕಣ್ಣು ಮತ್ತು ತುಟಿ ಬಿಟ್ಟರಷ್ಟೇ. ಸ್ವತಃ ದರ್ಶನ್ ಮತ್ತು ಪವಿತ್ರಾ ಗೌಡ ಸಮ್ಮುಖದಲ್ಲೇ ರೇಣುಕಾ ಸ್ವಾಮಿ ಹೆಣವಾದ. ಅಷ್ಟಲ್ಲದೇ ಆತನ ಮೃತ ದೇಹವನ್ನು ಮೋರಿಯೊಂದರ ಕೆಳಗೆ ಎಸೆದು ಸಾಕ್ಷಿನಾಶಕ್ಕೆ ಯತ್ನದ ಆರೋಪ.
ಸಮಾಜದ ಆಗು ಹೋಗುಗಳ ಬಗ್ಗೆ ಅರಿವಿರುವ ಖ್ಯಾತ ನಟನಿಗೆ, ಯಾರೋ ಒಬ್ಬರು ಈ ರೀತಿ ಬೇಡದ ಮೆಸೇಜ್ ಮಾಡಿ ಮಾನಸಿಕ ಹಿಂಸೆ ನೀಡುವಾಗ, ಸೈಬರ್ ಪೊಲೀಸರ ಗಮನಕ್ಕೆ ತರಬೇಕು ಎನ್ನುವ ಪರಿಜ್ಞಾನ ಇರಬೇಕಾಗಿತ್ತಲ್ಲವೇ? ಪ್ರಭಾವಿ ವ್ಯಕ್ತಿಯಾದ ದರ್ಶನ್ ಸೈಬರ್ ಪೊಲೀಸರ ಮೊರೆ ಹೋಗಿದ್ದರೆ ಇಂತಹ ಅಮಾನವೀಯ ಘಟನೆಯನ್ನು ತಪ್ಪಿಸಬಹುದಿತ್ತಲ್ಲವೇ? ಒಂದು ಅಮಾಯಕ ಜೀವ ಉಳಿಯುತ್ತಿತ್ತಲ್ಲವೇ? ಅದನ್ನು ಬಿಟ್ಟು ತಾವೇ ಕಾನೂನು ಕೈಗೆತ್ತಿಕೊಂಡು ವಿಚಾರಣೆಗೆ' ಇಳಿದದ್ದು ಭುಜಬಲ-ದುಡ್ಡಿನ ಮದವನ್ನಲ್ಲದೇ ಇನ್ನೇನನ್ನು ತೋರುತ್ತದೆ? ರೇಣುಕಾ ಸ್ವಾಮಿ, ತಂದೆ ತಾಯಿಗೆ ಯಾರು ಈ ದರ್ಶನ್ ಎನ್ನುವುದೂ ಗೊತ್ತಿಲ್ಲ. ಅವರ ಮೂರ‍್ನಾಲ್ಕು ತಿಂಗಳ ಗರ್ಭಿಣಿ ಪತ್ನಿ, ನನ್ನ ಗಂಡ ಕಳಿಸಿದ ಸಂದೇಶ ಕೊಲೆ ಮಾಡುವಷ್ಟು ಕ್ರೂರವಾ? ನನ್ನ ಬದುಕು, ಹೊಟ್ಟೆಯಲ್ಲಿರುವ ಮಗುವಿನ ಬದುಕು ಹೊಸಕಿ ಹಾಕುವಷ್ಟು ಕ್ರೂರವಾ? ದರ್ಶನ್ ಯಾರು? ಅವನ ಪ್ರೀತಿ-ಅಭಿಮಾನ ಇಟ್ಟುಕೊಂಡಿದ್ದೇ ಹೆಚ್ಚಾಯಿತಾ? ಎಂದು ಕೇಳುತ್ತಾರೆ. ಅಮಾಯಕ ಮಹಿಳೆಯ ಈ ಪ್ರಶ್ನೆಗೆ ಸಮಾಜ ಬಿಡಿ, ವ್ಯವಸ್ಥೆ ನಂತರದ್ದು, ದರ್ಶನ್ ಕೂಡ ಉತ್ತರಿಸಲಾರ. ಇದೆಂಥ ಕ್ರೌರ್ಯರೀ? ಚಿಕ್ಕ ವಿಷಯಕ್ಕೂ ಕೊಲೇನಾ? ಹಿಂಸೆನಾ? ಇದು ಅಭಿಮಾನಿಗಳ ಅತಿರೇಕ ಎನ್ನುವಂತೆಯೂ ಇಲ್ಲ. ಸ್ವತಃ ದರ್ಶನ್, ಪವಿತ್ರಾ ಗೌಡ ಸಮ್ಮುಖದ ಪ್ರಕರಣ. ಇವರ ಭಾಗಿತ್ವ ಎಷ್ಟಿದೆ ಎನ್ನುವುದು ತನಿಖೆಯಾಗಬೇಕಷ್ಟೇ. ಆದರೆ ಈ ಒಂದು ಪ್ರಕರಣ ಈಗಿನ ಭ್ರಮಾಲೋಕದಲ್ಲಿರುವ ಯುವ ಅಭಿಮಾನಿ ಪಡೆಗಳಿಗೆ ಪಾಠವಾಗಬೇಕು. ಹಿಂದೆಯೇ ದರ್ಶನ್, ಯಶ್, ದೊಡ್ಮನೆ, ಸುದೀಪ್ ಇಂತಹವರ ಸ್ಟಾರ್‌ವಾರ್‌ಗಳಿಂದ ಅವರ ಅಭಿಮಾನಿಗಳ ಅತಿರೇಕಗಳಿಂದ ರಾಜ್ಯ ನಡುಗಿತ್ತು. ಕಳಕಳಿ, ಕಾಳಜಿ ಹೊಂದಿತ್ತು. ಒಂದು ಕ್ಷೇತ್ರದಲ್ಲಿ ಪ್ರಭಾವಿಯಾದಾಗ, ಅದೂ ಸಿನೆಮಾದಂತಹ ಕ್ಷೇತ್ರದಲ್ಲಿ ಮಾಸ್ ಅಪೀಲ್ ಸೃಷ್ಟಿಯಾದಾಗ ಸ್ಟಾರ್‌ಗಿರಿ ಅರಗಿಸಿಕೊಳ್ಳುವುದು ಕಷ್ಟ. ಸಿನೆಮಾ ರಂಗವೇ ಹಾಗೇ. ತೆರೆಯ ಮೇಲೆ ಕಂಡಿದ್ದನ್ನು ಜನ ತಮ್ಮ ನಿಜ ಜೀವನದೊಂದಿಗೆ ಹೋಲಿಕೆ, ಹೊಂದಾಣಿಕೆ, ಅನುಕರಣೆಗೆ ಇಳಿಯುತ್ತಾರೆ. ದರ್ಶನ್‌ದ್ದು ಇದೇ ಮೊದಲ ವಿವಾದವಲ್ಲ. ಹೆಂಡತಿಗೆ ಹೊಡೆದ ವಿವಾದಲ್ಲಿ ವಾರ ಕಾಲ ಜೈಲು ಸೇರಿದ್ದ. ಆ ನಂತರವೂ ಸುಧಾರಿಸಿಲ್ಲ. ಅವರ ಸಿನೆಮಾ ಯಶಸ್ವಿಯಾದಂತೆಲ್ಲ ವಿವಾದಗಳು ಹೆಚ್ಚಾದವು. ಮೊನ್ನೆ ಮೊನ್ನೆ ಕ್ಲಬ್‌ನಲ್ಲಿ ಬಹುರಾತ್ರಿಯವರೆಗೆ ಪಾರ್ಟಿ ಸೇರಿದಂತೆ ಹತ್ತು ಹಲವು ಒಂದಿಲ್ಲೊಂದು ವಿವಾದದಲ್ಲಿ ದರ್ಶನ್ ಇದ್ದಾನೆ. ತೆರೆಯ ಮೇಲೆ ಕಂಡಿದ್ದೆಲ್ಲವೂ ನಿಜ ಎನ್ನುವ ಅವರ ಭಕ್ತಗಣ, ಫ್ಯಾನ್ಸ್, ಇನ್ನಷ್ಟು ಉದ್ರೇಕ-ಉನ್ಮಾದಕ್ಕೆ ಈಡಾಗುತ್ತಾರೆ. ಇವರಿಗೆಲ್ಲ ಯಾವ ಅಭಿಮಾನಿಯ ಕಾಳಜಿ ಕಳಕಳಿ ಇಲ್ಲ. ಸಾರ್ವಜನಿಕವಾಗಿ ಗಮನ ಸೆಳೆದ ಇವರುರೋಲ್ ಮಾಡೆಲ್’ ಎಂದು ಜನರಲ್ಲಿ ಅನಿಸಿಕೊಂಡಾಗ ಅವರ ವರ್ತನೆಗಳು ಕೂಡ ಹಾಗೇ ಇರಬೇಕು ಅಲ್ಲವೇ?
ದರ್ಶನ್ ಪ್ರಕರಣ ಒಂದೇ ಅಲ್ಲ. ಈಗ ಅತ್ಯಂತ ಕ್ಯೂಟ್ ಜೋಡಿ ಎಂದು ಯುವ ಜನರಿಂದ ಹೇಳಿಸಿಕೊಂಡ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಡೈವೋರ್ಸ್ ಪ್ರಕರಣವೂ ಕೂಡ ಅಷ್ಟೇ ಘಾಸಿಯಾದದ್ದು. ನಾಲ್ಕುವರ್ಷಗಳ ಹಿಂದೆ ಮೈಸೂರು ದಸರಾ ವೇದಿಕೆಯ ಮೇಲೆಯೇ ಮದುವೆಗೆ ಪ್ರಸ್ತಾವನೆ ಇಟ್ಟು ಒಪ್ಪಿ, ನಂತರ ಅದ್ಧೂರಿ ವಿವಾಹ ಮಾಡಿಕೊಂಡು ಸದಾ ಲವಲವಿಕೆ, ಪ್ರೀತಿ ಆದರದಲ್ಲಿ ಜೀವನ ನಡೆಸುತ್ತಿದ್ದರೆಂದು ಅಭಿಮಾನಿಗಳಲ್ಲಿ, ಪ್ರೀತಿ ಪಾತ್ರರಾಗಿದ್ದ ಈ ಜೋಡಿ ಏಕಾಏಕಿ ಮುಂಜಾನೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಸಂಜೆ ವಿಚ್ಛೇದನ ಪಡೆದು ಖುಷಿ ಖುಷಿಯಿಂದ ಹೊರಟು ಬಿಟ್ಟರು! ವಿಚ್ಛೇದನ ಯಾಕೆ? ಮದುವೆ, ಜೀವನ, ಅವರವರ ಭವಿಷ್ಯ, ಜನ-ಸಾರ್ವಜನಿಕರ ಮುಂದೆ ನಗೆಪಾಟಲಿಗೋ, ಎಂತಹ ವಿಕೃತ ಜನ ಎಂದೋ ಹೇಳಿಸಿಕೊಳ್ಳಬೇಕಾಯಿತು. ಈ ಕ್ಷಣದವರೆಗೂ ಕೂಡ ಅವರ ವಿಚ್ಛೇದನಕ್ಕೆ ಕಾರಣ ಗೊತ್ತಿಲ್ಲ. ಇಬ್ಬರೂ ಒಟ್ಟಾಗೇ ಇರುತ್ತಾರೆ. ಓಡಾಡುತ್ತಾರೆ. ಆದರೆ ವಿಚ್ಛೇದನ ಪಡೆದುಕೊಂಡಿದ್ದಾರೆ!!
ಸಮಾಜದಲ್ಲಿ ಇಂತಹ ಪ್ರಕರಣ, ಅದೂ ವಿಶೇಷವಾಗಿ ಯುವಕರಲ್ಲಿ ಎಂತಹ ಪರಿಣಾಮ ಬೀರುತ್ತೇ? ಎನ್ನುವುದನ್ನು ಆ ನಿಟ್ಟಿನಲ್ಲಾದರೂ ಯೋಚಿಸಬೇಕಿತ್ತು. ಮದುವೆ, ನಾಲ್ಕು ವರ್ಷಗಳ ಜೀವನ, ನಂತರ ಏಕಾಏಕಿ ವಿಚ್ಛೇದನ… ಯುವಕರಿಗೆ ಇವರು ರೋಲ್ ಮಾಡೆಲ್ಲಾ?! ಚಂದನ್ ಶೆಟ್ಟಿ-ನಿವೇದಿತಾ ಪ್ರತ್ಯೇಕವಾದಂತೆ ಎಂದು ಉದಾಹರಿಸಲು ಒಂದು ಘಟನೆಯಾದಂತಾಯಿತು.
ಸಾರ್ವಜನಿಕ ವ್ಯಕ್ತಿ ಹೇಗಿರಬೇಕು ಎನ್ನುವ ಪರಿಜ್ಞಾನ ಕೂಡ ಇವರಿಗಿಲ್ಲ. ಅದೇ ದೊಡ್ಮನೆ ಕುಟುಂಬದ ಕುಡಿ ಯುವರಾಜ್ ರಾಜಕುಮಾರ ಮತ್ತು ಅವರೇ ಪ್ರೀತಿಸಿ ಮದುವೆಯಾದ ಶ್ರೀದೇವಿ ಅವರ ವಿಚ್ಛೇದನವೂ ಭಾರೀ ಸುದ್ದಿ ಮಾಡುತ್ತಿದೆ. ಟೀಕೆ ಟಿಪ್ಪಣಿಗಳೆಲ್ಲ ಬಂದವು. ಯುವ ರಾಜ್ ಕೂಡ ನಟ. ಇನ್ನೂ ಸಿನೆಮಾ ಜಗತ್ತಿನಲ್ಲಿ ಸಾಕಷ್ಟು ಕಾಲ ಉಳಿಯಬೇಕಾದವನು. ದೊಡ್ಮನೆ ಕುಟುಂಬದಲ್ಲಿ ಎಂದೂ ಈ ರೀತಿಯ ಆಘಾತ ಮತ್ತು ವಿವಾದ ಎದ್ದಿಲ್ಲ. ಡಾ. ರಾಜಕುಮಾರ್ ತಮ್ಮ ಅಭಿಮಾನಿಗಳನ್ನು ದೇವರೆಂದು ಪರಿಗಣಿಸಿ ಹೃದಯದಲ್ಲಿ ಇಟ್ಟುಕೊಂಡವರು. ಅಭಿಮಾನಿ ದೇವರುಗಳೇ ಎಂದು ಹೇಳುತ್ತಿದ್ದವರು. ಸಿನೆಮಾ ಕ್ಷೇತ್ರದಲ್ಲಿ ದೇಶ ಕಂಡ ಅತ್ಯಂತ ಸಜ್ಜನ, ಸಭ್ಯ, ಸುಸಂಸ್ಕೃತ, ಮಾನವಂತ, ಜ್ಞಾನವಂತ, ಕಲಾ ಆರಾಧಕರಾಗಿ ಹೃನ್ಮನ ಗೆದ್ದವರು. ನಿಜವಾಗಿ ರೋಲ್ ಮಾಡೆಲ್!.
ಕನ್ನಡ ಸಿನೆಮಾ ಉದ್ಯಮ ಬಿಕ್ಕಟ್ಟಿನಲ್ಲಿದೆ. ಚಿತ್ರಮಂದಿರಕ್ಕೆ ಜನ ಹೋಗಿ ನೋಡೋದೆ ಕಡಿಮೆಯಾಗಿದೆ. ಅಪರೂಪಕ್ಕೆ ಒಳ್ಳೆಯ ಸಿನಿಮಾ ತೆರೆಗೆ ಬರುತ್ತಿದೆ… ಇಷ್ಟಿದ್ದಾಗಲೇ ಇಂತಹ ಘಟನೆಗಳು ಉದ್ಯಮದ ಮೇಲಿನ ನಂಬಿಕೆ, ವಿಶ್ವಾಸಾರ್ಹತೆಗೆ ಧಕ್ಕೆಯಾಗದಿದ್ದೀತೆ?
ಚಂದನವನದ ಈ ಅಪಸವ್ಯಗಳಿಗೆ ಕಾರಣ ಏನು? ಜನರೇ ಕಾರಣ. ಸಿನೆಮಾ ಸಿನೆಮಾವನ್ನಾಗಿ ನೋಡಬೇಕು. ನಟರನ್ನು ಕಲಾವಿದರನ್ನಾಗಿ ಗೌರವಿಸಬೇಕು. ಅದಕ್ಕೊಂದು ಅಭಿಮಾನಿ ಪಡೆ, ಸ್ಟಾರ್‌ವಾರ್‌ಗಳು, ಅವರಿಗಾಗಿ ಜೀವನ ತೆಗೆದುಕೊಳ್ಳುವುದು ಇವೆಲ್ಲ ಹುಚ್ಚುಚ್ಚಾರದ ವರ್ತನೆಗಳು. ಅಭಿಮಾನಿಗಳು ಎನ್ನುವುದೇ ಬಹುದೊಡ್ಡ ತಪ್ಪು ಕಲ್ಪನೆ. ಇಂತಹ ಅನಗತ್ಯ ಕಾನ್ಸೆಪ್ಟ್‌ಗಳಿಂದ ಮತ್ತು ಈ ಭ್ರಮಾ ಲೋಕದಿಂದ ಜನ ಇನ್ನಾದರೂ ಹೊರಬರಬೇಕಿದೆ. ಅಭಿಮಾನಿಗಳಿಗೇನೋ ಒಂದು ಪುಳಕ.
ಆದರೆ ಈ ನಟರಿಗೋ ದುಡ್ಡು-ದುರಹಂಕಾರ, ಉನ್ಮಾದಗಳ ಮುಂದೆ ಅಭಿಮಾನಿಗಳು ಶೂನ್ಯ. ಪ್ರಸಿದ್ಧಿ, ಪ್ರಚಾರಕ್ಕಾಗಿ `ಅಭಿಮಾನಿಗಳು’ ಎನ್ನುವ ಅಂಶ ಇವರಿಗೆ ನಾಟಕ ಹಾಗೂ ಬೂಟಾಟಿಕೆ.
ಜೊತೆಗೆ ಅಮಾಯಕ ಅಭಿಮಾನಿಗಳ ಹೆಸರಿನಲ್ಲಿ ದುಡ್ಡು ಮಾಡುವುದು ಕೂಡ ಸ್ಟಾರ್‌ಗಳಿಗೆ ದೊಡ್ಡ ದಂಧೆಯಾಗಿದೆ, ಅಷ್ಟೇ !ಹುಚ್ಚು ಭ್ರಮೆಗೆ ಒಳಗಾಗುವವರು ಎಲ್ಲಿಯವರೆಗೆ ಇರುತ್ತಾರೋ… ಅಲ್ಲಿಯವರೆಗೆ ಅಮಾಯಕರ ಮುಂದೆ ಭ್ರಮಾಲೋಕ ಸೃಷ್ಟಿಸುವವರೂ ಇರುತ್ತಾರೆ!