ಹುಟ್ಟು-ಸಾವಿನಲ್ಲೂ ಒಂದಾದ ದಂಪತಿ

Advertisement

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಉತ್ತರಾಖಂಡ ಸಹಸ್ರ ತಾಳ್ ಶಿಖರದ ಚಾರಣಕ್ಕೆ ತೆರಳಿದ್ದ ಹುಬ್ಬಳ್ಳಿ ಮೂಲದ ಮುಂಗುರವಾಡಿ ದಂಪತಿ ಹವಾಮಾನ ವೈಪರೀತ್ಯದಿಂದ ದುರಂತ ಅಂತ್ಯ ಕಂಡಿದ್ದಾರೆ.
ಕರ್ನಾಟಕದಿಂದ ತೆರಳಿದ್ದ ೨೨ ಚಾರಣಿಗರ ತಂಡವೊಂದು ಉತ್ತರಾಖಂಡದ ಎತ್ತರದ ಸಹಸ್ರ ತಾಳ್ ಮಯಳಿ ಪ್ರದೇಶಕ್ಕೆ ತೆರಳಿ, ಅಲ್ಲಿಂದ ಚಾರಣ ಆರಂಭಿಸಿತ್ತು. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಮುಂದಾಗಿದೆ. ಆಗ ಮಾರ್ಗಮಧ್ಯೆ ನಡೆಯಬಾರದ ಘಟನೆ ನಡೆದು ಹೋಗಿದೆ. ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟು, ಎಲ್ಲ ಚಾರಣಿಗರು ಅಪಾಯಕ್ಕೆ ಸಿಲುಕಿದ್ದಾರೆ. ಇದರಲ್ಲಿ ೯ ಚಾರಣಿಗರು ಮೃತಪಟ್ಟಿದ್ದು, ೧೩ ಜನರನ್ನು ರಕ್ಷಣೆ ಮಾಡಲಾಗಿದೆ. ಇದುವರೆಗೆ ಐವರ ಮೃತದೇಹ ಮಾತ್ರ ಸಿಕ್ಕಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಚಾರಣಕ್ಕೆ ಹೋದ ೨೨ ಮಂದಿಯ ಪೈಕಿ ಹುಬ್ಬಳ್ಳಿ ಮೂಲದ ವಿನಾಯಕ ಮುಂಗುರವಾಡಿ ಹಾಗೂ ಸುಜಾತಾ ಮುಂಗುರವಾಡಿ ಕೊನೆಯುಸಿರೆಳೆದಿದ್ದಾರೆ. ಅಕ್ಟೋಬರ್ ೩ರಂದೇ (ಇಸವಿ ಬೇರೆ) ಇಬ್ಬರ ಜನನವಾಗಿತ್ತು. ಅದೇ ತರನಾಗಿ ಜೂನ್ ೪ರಂದು ಒಟ್ಟಿಗೆ ಮೃತಪಟ್ಟಿರುವುದು ಕ್ರೂರ ವಿಧಿಯಾಟವೇ ಸರಿ.
ಮೃತರಿಬ್ಬರೂ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ೧೯೯೪ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ವಿನಾಯಕ ಮೆಕ್ಯಾನಿಕಲ್ ವಿಭಾಗದಿಂದ ಚಿನ್ನದ ಪದಕ ಪಡೆದಿದ್ದರು. ಆರಂಭಿಕ ದಿನಗಳಲ್ಲಿ ಹುಬ್ಬಳ್ಳಿಯ ಉಣಕಲ್‌ನಲ್ಲಿ ವಾಸವಿದ್ದ ಇಬ್ಬರೂ ಉದ್ಯೋಗ ಅರಸಿಕೊಂಡು ೧೯೯೬ರಲ್ಲಿ ಬೆಂಗಳೂರಿಗೆ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಲೇ `ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ ೧೬ ವರ್ಷಗಳಿಂದ ಜನರ ಸೇವೆಯಲ್ಲಿ ತೊಡಗಿದ್ದರು.
ಪ್ರತಿವರ್ಷ ಚಾರಣ ಮಾಡುವ ಹವ್ಯಾಸ ಹೊಂದಿದ್ದ ಇವರಿಗೆ ಈ ಬಾರಿ ಚಾರಣಕ್ಕೆ ಕೆಎಂಎ (ಕರ್ನಾಟಕ ಮೌಂಟೆನ್ ಅಸೋಸಿಯೇಷನ್) ಅವಕಾಶ ನೀಡಿರಲಿಲ್ಲ. ಆದರೂ ಬೆಂಬಿಡದೇ ಪ್ರಯತ್ನಪಟ್ಟು ಟಿಕೆಟ್ ಗಿಟ್ಟಿಸಿಕೊಂಡಿದ್ದ ಅವರು ಘೋರ ಅಂತ್ಯ ಕಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿರುವ ಪುತ್ರಿ ಅದಿತಿ ಹಾಗೂ ಇಂಜಿನಿಯರಿಂಗ್ ಓದುತ್ತಿರುವ ಪುತ್ರ ಇಶಾನ್ ಅವರನ್ನೂ ಚಾರಣಕ್ಕೆ ಕರೆದೊಯ್ಯುವ ಯೋಜನೆಯಲ್ಲಿದ್ದ ದಂಪತಿಗೆ ಸಿಕ್ಕಿದ್ದು ಎರಡು ಟಿಕೆಟ್ ಮಾತ್ರ. ಹೀಗಾಗಿ ಮಕ್ಕಳನ್ನು ಬಿಟ್ಟು ಇಬ್ಬರೇ ಅಲ್ಲಿಗೆ ತೆರಳಿದ್ದರು.