ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಪಟ್ಟ ಶೀಘ್ರ?

Advertisement

ಬಿ.ಅರವಿಂದ
ಹುಬ್ಬಳ್ಳಿ: ವಾಯು ಯಾನದ ಮಟ್ಟಿಗೆ ಇನ್ನು ಹುಬ್ಬಳ್ಳಿ ಭೂಪಟದ ಪ್ರಮುಖ ನಗರ. ವಿಮಾನ ನಿಲ್ದಾಣಕ್ಕೆ ಹೊಸ ಟರ್ಮಿನಲ್ ಸೇರ್ಪಡೆಯಾಗುತ್ತಿರುವುದು ಒಂದು ದೊಡ್ಡ ಸುದ್ದಿ. ಜೊತೆಗೆ, ಯಾವುದೇ ಕ್ಷಣದಲ್ಲಿ ಇದಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಟ್ಟ ದೊರೆಯುವ ಸಾಧ್ಯತೆ ಈಗ ನಿಚ್ಚಳವಾಗಿರುವುದು ಇದಕ್ಕೂ ಮಿಗಿಲಾದ ವಿಷಯ.
ಕೆಲ ಬಲ್ಲ ಮೂಲಗಳು ಹೇಳುವಂತೆ, `ಹೊಸ ಟರ್ಮಿನಲ್ ಜೊತೆಗೆ, ಅಂತಾರಾಷ್ಟ್ರೀಯ ಮಾನ್ಯತೆ ದೊರೆಯಲಿರುವುದು ಬಹುತೇಕ ಖಚಿತ’.
ಹುಬ್ಬಳ್ಳಿಯಲ್ಲಿ ದೊಡ್ಡ ನಿಲ್ದಾಣವಿದ್ದರೂ ಬಂದರುಗಳ ಸಂಪರ್ಕವನ್ನು ಪ್ರಧಾನವಾಗಿ ದೃಷ್ಟಿಯಲ್ಲಿಟ್ಟುಕೊಂಡು ಬೆಳಗಾವಿ ಮತ್ತು ಧಾರವಾಡ ನಡುವೆ (ಕಿತ್ತೂರು) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ನಿಕಟಪೂರ್ವ ಸರ್ಕಾರ ಯೋಚಿಸಿತ್ತು. ಘೋಷಣೆಯೂ ಆಗಿತ್ತು. ಇದು ಈಗ ತಾತ್ಕಾಲಿಕ ಶೀತಲಗೃಹದಲ್ಲಿದೆ ಎಂಬುದು ಬೇರೆ ವಿಷಯ.
ಈ ದೃಷ್ಟಿಯಿಂದ ಇಡೀ ದಕ್ಷಿಣ ಭಾರತಕ್ಕೆ ಹುಬ್ಬಳ್ಳಿ ವಾಯುಯಾನ ಕ್ಷೇತ್ರದಲ್ಲಿ ಜಂಕ್ಷನ್. ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕರೆ ಹುಬ್ಬಳ್ಳಿ ಮತ್ತು ಇದರೊಂದಿಗೆ ಇಡೀ ಉತ್ತರ-ಕಲ್ಯಾಣ ಪ್ರಾಂತ್ಯಗಳ ಆರ್ಥಿಕತೆ ಮುಗಿಲು ಮುಟ್ಟಲಿದೆ.

ಏರ್ ಸ್ಟ್ರಿಪ್‌ನಿಂದ ಇಲ್ಲಿಯವರೆಗೆ
ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಯತ್ನದಿಂದ ಮೊದಲು ಇಲ್ಲಿ ಸಣ್ಣ ವಿಮಾನಗಳು ಬಂದು ಇಳಿಯುವ ಏರ್‌ಸ್ಟ್ರಿಪ್ ನಿರ್ಮಾಣವಾಯಿತು. ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿದ್ದಾಗ ಇಲ್ಲಿನ `ಹುಡುಗನೇ’ ಆಗಿದ್ದ ಅಂದಿನ ವಿಮಾನಯಾನ ಸಚಿವ ಅನಂತಕುಮಾರ ಪ್ರಯಾಣಿಕರ ಪೂರ್ಣ ಪ್ರಮಾಣದ ನಿಲ್ದಾಣವನ್ನಾಗಿ ಅಭಿವೃದ್ಧಿ ಮಾಡಿದರು. ಆ ನಂತರದ ಯುಪಿಎ ಸರ್ಕಾರವಿದ್ದಾಗ ಅಂದಿನ ಸಂಸದ, ಈಗಿನ ಕೇಂದ್ರ ಸಚಿವ ಪ್ರಲ್ದಾದ ಜೋಶಿ ಮೇಲ್ದರ್ಜೆಗೆ ಏರಿಸುವಂತೆ ಒತ್ತಾಯಿಸಿ ಯಶಸ್ವಿಯಾದರು. ರಾಜ್ಯದ ಕಂದಾಯ ಸಚಿವರಾಗಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ ೬೦೦ ಎಕರೆಯಷ್ಟು ಭೂಮಿ ಸ್ವಾಧೀನ ಮಾಡಿಕೊಟ್ಟರು. ಈಗಿನ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಪೂರಕ ಸಹಕಾರ ನೀಡಿದರು. ಪರಿಣಾಮವಾಗಿ ಎನ್‌ಡಿಎ (ಮೋದಿ ೧.೦) ಸರ್ಕಾರದಲ್ಲಿ ಮೇಲ್ದರ್ಜೆಗೆ ಏರಿ, ಈಗ ಹೊಸ ಟರ್ಮಿನಲ್‌ನೊಂದಿಗೆ ಅಧಿಕೃತವಾಗಿ ಅಂತಾರಾಷ್ಟ್ರೀಯ ನಿಲ್ದಾಣವಾಗಲು ದಾರಿ ಸುಗಮವಾಗಿದೆ.

ಏಕೆ ಇಂಟರ್ ನ್ಯಾಷನಲ್?
ಈಗಿರುವ ೩೬೦೦ ಚದರ ಮೀಟರ್ ವಿಸ್ತೀರ್ಣದ ಟರ್ಮಿನಲ್, ವಾರ್ಷಿಕ ೫.೯ ಲಕ್ಷ ಪ್ರಯಾಣಿಕರನ್ನು ಭರಿಸುವ ಸಾಮರ್ಥ್ಯ ಹೊಂದಿದೆ, ತಲೆ ಎತ್ತುತ್ತಿರುವ ಟರ್ಮಿನಲ್ ೩೫ ಲಕ್ಷ ಪ್ರಯಾಣಿಕರ ಸಾಮರ್ಥ್ಯದ್ದಾಗಿರಲಿದೆ.
೩೨ ಚೆಕ್ ಇನ್ ಕೌಂಟರ್‌ಗಳಿರುತ್ತವೆ. ಮತ್ತು ೪ ಏರ್‌ಬ್ರಿಜ್ (ಟರ್ಮಿನಲ್‌ನಿಂದ ನೇರವಾಗಿ ವಿಮಾನ ಏರಲು ವ್ಯವಸ್ಥೆ ಕಲ್ಪಿಸುವ ಮಡಚಬಹುದಾದ ಕಾಲು ಸೇತುವೆಗಳು) ಇರುತ್ತವೆ.
ಏಕಕಾಲಕ್ಕೆ ೬೦೦ ಕಾರುಗಳ ಪಾರ್ಕಿಂಗ್ ಸೌಲಭ್ಯ.