ಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು

Advertisement

ಹೊನ್ನಾವರ: ಕರಾವಳಿ ಕಾವಲು ಪೊಲೀಸ್ ಮತ್ತು ಕೆ.ಎನ್.ಡಿ ಸಿಬ್ಬಂದಿ ಸಮಯೋಜಿತ ನಡೆಯಿಂದ ವ್ಯಕ್ತಿಯೊಬ್ಬ ಸಾವಿನ ದವಡೆಯಿಂದ ಪಾರಾದ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಶನಿವಾರ ಸಂತೆಗೆ ತರಕಾರಿ ವ್ಯಾಪಾರಕ್ಕೆಂದು ಬಂದ ಹುಬ್ಬಳಿ ಕಡೆಯ ವ್ಯಕ್ತಿಯೊಬ್ಬ ಕುಡಿಯಲು ನೀರು ತರಲು ಕರಾವಳಿ ಕಾವಲು ಪೊಲೀಸ್ ಮತ್ತು ಕೆ.ಎನ್.ಡಿ ಸಿಬ್ಬಂದಿ ಕಚೇರಿ ಆವರಣದಲ್ಲಿ ಇರುವ ಬಾವಿ ಹತ್ತಿರ ಹೋಗಿದ್ದಾಗ ಕುಸಿದು ಬಿದ್ದಿದ್ದಾರೆ. ಅದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ತಕ್ಷಣ ಆತನಿಗೆ ಹೃದಯ ಸ್ತಂಭನವಾಗಿರುವ ಬಗ್ಗೆ ಅರಿತುಕೊಂಡು ತುರ್ತಾಗಿ ಸಿಪಿಆರ್ ತುರ್ತು ಚಿಕಿತ್ಸೆ ಮಾಡುತ್ತ ತಮ್ಮ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ವ್ಯಕ್ತಿಗೆ ಆದ ಹೃದಯಾಘಾತದ ಗಂಭೀರತೆ ಅರಿತು ಆಸ್ಪತ್ರೆಯ ಅಂಬ್ಯುಲೆನ್ಸ್ ವಾಹನವನ್ನು ಸನ್ನದ್ದವಾಗಿಡಲಾಗಿತ್ತು. ವ್ಯಕ್ತಿಯು ಚೇತರಿಸಿಕೊಂಡ ಬಳಿಕ ಆತನ ವಿನಂತಿಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿಗೆ ಶಿಪಾರಸು ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಕಾಶ ನಾಯ್ಕ ಸಿಪಿಆರ್ ತುರ್ತು ಚಿಕಿತ್ಸೆ ವ್ಯಕ್ತಿಯೊಬ್ಬನ ಜೀವ ಉಳಿಸಿದೆ.
ವೈದ್ಯಕೀಯ ಚಿಕಿತ್ಸೆ ಸಿಗುವವರೆಗೆ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತುರ್ತಾಗಿ ಸಿಪಿಆರ್ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಮನೆಯಲ್ಲಿ ಅಥವಾ ಆಸ್ಪತ್ರೆ ಹೊರಗೆ ಹೃದಯಘಾತವಾದಾಗ ಕುಟುಂಬಸ್ಥರು ಅಥವಾ ಸಾರ್ವಜನಿಕರು ಸಿಪಿಆರ್ ಚಿಕಿತ್ಸೆ ತಕ್ಷಣ ನೀಡಿ ಅಂಬ್ಯುಲೆನ್ಸ್‌ಗೆ ವರ್ಗಾಯಿಸಿ ಆಸ್ಪತ್ರೆಗೆ ಸೇರಿಸಬೇಕು ಎಂದರು.