ಹೇಮಾವತಿ ಕಾಲುವೆಗಳ ಆಧುನೀಕರಣ-ವಿಸ್ತರಣೆ: ಮುಖ್ಯಮಂತ್ರಿ ಬೊಮ್ಮಾಯಿ

Advertisement

ತುಮಕೂರು: ಹೇಮಾವತಿ ಕಾಲುವೆಗಳ ಆಧುನೀಕರಣ ಹಾಗೂ ವಿಸ್ತರಣೆಯನ್ನು ನಮ್ಮ ಸರ್ಕಾರ ಶೀಘ್ರದಲ್ಲಿಯೇ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಇಂದು ಬಿಜೆಪಿ ವತಿಯಿಂದ ಏರ್ಪಡಿಸಿರುವ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಬರುವ ದಿನಗಳಲ್ಲಿ ಕುಣಿಗಲ್ ತಾಲ್ಲೂಕಿನ ರೈತರಿಗೆ ಅನ್ನ ನೀಡುವ ಎರಡು ನೀರಾವರಿ ಯೋಜನೆಗಳನ್ನು ನಮ್ಮ ಸರ್ಕಾರ ಪೂರ್ಣ ಮಾಡುತ್ತದೆ. ನೀರಾವರಿ ಸೌಲಭ್ಯವನ್ನು ಇದೇ ಕ್ಷೇತ್ರದ ರಾಮಯ್ಯ ಅವರು ದೊಡ್ಡ ಪಾದಯಾತ್ರೆ ಮಾಡಿ ಹೇಮಾವತಿ ನೀರಿಗೆ ತುಮಕೂರಿಗೂ ಹಕ್ಕಿದೆ ಎಂದು ಹೋರಾಟ ಮಾಡಿದರು. ಈ ಭಾಗದ ಜನರಿಗೆ ಹೋರಾಟದ ಪ್ರತಿಫಲವಾಗಿ ರಾಮಕೃಷ್ಣ ಹೆಗಡೆ ಅವರು ನೀರು ಒದಗಿಸಿದರು. ಹೋರಾಟದಿಂದ ಲಭಿಸಿದ ಯೋಜನೆಗೆ ಕಾಯಕಲ್ಪ ನೀಡಬೇಕು. ನೀರಿನ ನಿರ್ವಹಣೆ ಮಾಡಿದರೆ ಕೊನೆ ಭಾಗಕ್ಕೂ ನೀರು ತಲುಪಿಸಬಹುದು. ನಮ್ಮ ಸರ್ಕಾರ ಎಲ್ಲಾ ಭಾಗಗಳಿಗೂ ನೀರು ಒದಗಿಸಿದೆ. ಕುಣಿಗಲ್ ಭಾಗದಲ್ಲಿ ನೀರನ್ನು ಕಾಲುವೆ ಮೂಲಕ ನೀಡಬೇಕಿದೆ. ಹೇಮಾವತಿ ಕಾಲುವೆಗಳ ಆಧುನೀಕರಣ ಹಾಗೂ ವಿಸ್ತರಣೆಯನ್ನು ಮಾಡಬೇಕಿದೆ. ಮಾರ್ಕಾಂಡಳ್ಳಿ ಅಣೆಕಟ್ಟೆಯಿಂದ ಮಂಗಳ ಜಲಾಶಯಕ್ಕೆ ನೀರು ಒದಗಿಸಲು ಬಹಳ ದಿನಗಳ ಬೇಡಿಕೆ ಇದೆ. ಅದಕ್ಕೆ ಫೀಡರ್ ಚಾನಲ್ ನಿರ್ಮಿಸಲು ಮಾಧುಸ್ವಾಮಿಯವರು ಮಂಜೂರಾತಿ ಮಾಡಿಸಿದ್ದಾರೆ. ಇಲ್ಲಿ ಯಾರಿಗೂ ಅಡಿಗಲ್ಲು ಹಾಕಲು ಬಿಡುವುದಿಲ್ಲ ಎನ್ನುತ್ತಾರೆ. ಇದು ಪ್ರಜಾಪ್ರಭುತ್ವ. ಸ್ವಂತ ಆಸ್ತಿಯಲ್ಲ. ಕಾಲುವೆಗೆ ಅಡಿಗಲ್ಲು ಹಾಕಲು ನಾನೇ ಬರುತ್ತೇನೆ ಎಂದರು.
ತುಮಕೂರಿನಲ್ಲಿ 1000 ಎಕರೆಯ ಕೈಗಾರಿಕಾ ಟೌನ್:
ಕುಣಿಗಲ್ ಸ್ಟಡ್ ಫಾರ್ಮ್ ಬಗ್ಗೆ ಈ ಭಾಗದ ಜನನಾಯಕರೊಂದಿಗೆ ಚರ್ಚಿಸಿ, ಕುಣಿಗಲ್ ನಲ್ಲಿ ದೊಡ್ಡ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಅದರಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದಂತಹ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ಕೃಷಿ, ತೋಟಗಾರಿಕೆ, ತೆಂಗು , ಅಡಿಕೆಗೆ ಬೆಳೆಗೆ ಖ್ಯಾತಿ ಹೊಂದಿರುವ ತುಮಕೂರು ಔದ್ಯೋಗೀಕರಣದಲ್ಲೂ ಮುಂದಿದೆ. ತುಮಕೂರಿನಲ್ಲಿ 1000 ಎಕರೆಯ ಕೈಗಾರಿಕಾ ಟೌನ್ ಸ್ಥಾಪಿಸಲಾಗುತ್ತಿದೆ. ಈ ಭಾಗವನ್ನು ವಿಶೇಷ ಹೂಡಿಕಾ ಪ್ರದೇಶ ಯೋಜನೆ ಮಾಡಿ, ಈ ಭಾಗದಲ್ಲಿ ಬರುವ ಕೈಗಾರಿಕೆಗಳಿಗೆ ಎಲ್ಲ ಅನುಮೋದನೆಗಳನ್ನು ನೀಡಲಾಗುವುದು, ಇದರಿಂದ ಉದ್ಯೋಗಳಿಗೂ ಅನುಕೂಲ ಕಲ್ಪಿಸಿದಂತಾಗುತ್ತದೆ. ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ನಂ.1 ಜಿಲ್ಲೆಯಾಗಲಿದೆ. ಕೆಲವೇ ವರ್ಷಗಳಲ್ಲಿ ತುಮಕೂರು ವಾಣಿಜ್ಯವಾಗಿ ಬೆಳೆಯಲಿದೆ. ಕುಣಿಗಲ್ನಲ್ಲಿ ಯಾವುದೇ ಪೈಪೋಟಿ ಇಲ್ಲ. ಈ ಭಾಗದ ಅಭಿವೃದ್ಧಿಗೆ ಇಲ್ಲಿನ ಜನನಾಯಕರ ಕೊಡುಗೆಯನ್ನು ಪರಿಗಣಿಸಲಾಗುವುದು. ತುಮಕೂರು ಜಿಲ್ಲೆಯಲ್ಲಿ ಭಾಜಪ ಕಮಲವನ್ನು ಅರಳಿಸಬೇಕೆಂದು ಜನರಿಗೆ ಕರೆ ನೀಡಿದರು.