ಹೊಸ ಮದ್ಯದಂಗಡಿ ಬೇಡ ಆದಾಯಕ್ಕಿಂತ ಆರೋಗ್ಯ ಮುಖ್ಯ

Advertisement

ಹೊಸ ಮದ್ಯದಂಗಡಿ ಆರಂಭ ಎಂದರೆ ಅನಾಹುತಕ್ಕೆ ನೀಡಿದ ಆಹ್ವಾನ. ಅಬಕಾರಿ ಸುಂಕ ಹೆಚ್ಚಳದಿಂದ ಜನರ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕು.

ರಾಜ್ಯದಲ್ಲಿ ಈಗ ೧ ಸಾವಿರ ಹೊಸ ಮದ್ಯದಂಗಡಿ ಆರಂಭಿಸಲು ಸರ್ಕಾರ ಯೋಜಿಸಿದೆ. ಇದಕ್ಕೆ ಮಹಿಳೆಯರ ವಿರೋಧ ಕಂಡು ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ೫ ಉಚಿತ ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿತು. ಇದರಿಂದ ಲಾಭ ಆಗಿರುವುದು ಮಹಿಳೆಯರಿಗೆ ಎಂದು ಸರ್ಕಾರವೇ ಹೇಳಿದೆ. ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಒಟ್ಟು ೫೨ ಸಾವಿರ ಕೋಟಿ ರೂ. ವೆಚ್ಚ ಮಾಡಲು ಮುಂದಾಗಿದೆ. ಇದಕ್ಕಾಗಿ ಸರ್ಕಾರ ಸಾಲ ಮಾಡಬೇಕಿದೆ. ಇತರರ ಕ್ಷೇತ್ರಗಳಿಂದ ತೆರಿಗೆ ಸಂಗ್ರಹ ಹೆಚ್ಚಿಸಲು ಯೋಜಿಸಿದೆ. ಅದರಲ್ಲಿ ಅಬಕಾರಿ ಸುಂಕವೂ ಒಂದು. ಎಲ್ಲ ಮದ್ಯಗಳ ಮೇಲೆ ಶೇ.೨೦ ರಷ್ಟು ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಬರುವುದು ೩೬ ಸಾವಿರ ಕೋಟಿ ರೂ. ಆದರೆ ಸಮಾಜದ ಆರೋಗ್ಯದ ಮೇಲೆ ಆಗುವ ಪರಿಣಾಮ ಏನು ಎಂಬುದನ್ನು ಚಿಂತಿಸಬೇಕು. ಬಹುತೇಕ ಮಹಿಳೆಯರು ಉಳಿತಾಯ ಮಾಡಿದ ಎಲ್ಲ ಹಣ ಗಂಡಸರ ಕುಡಿತಕ್ಕೆ ಹೋಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸರ್ಕಾರ ಮದ್ಯದ ಮೂಲಕ ಹೆಚ್ಚು ಆದಾಯ ನಿರೀಕ್ಷಿಸಿದೆ ಎಂದರೆ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳ ಹಣವೇ ಮತ್ತೆ ಹಿಂತಿರುಗಿ ಮದ್ಯದ ಖರೀದಿ ಮೂಲಕ ಹಿಂದಕ್ಕೆ ಬರಲಿದೆ. ಆದರೆ ಗಂಡಸರ ಆರೋಗ್ಯ ಕೆಟ್ಟಲ್ಲಿ ಅದರಿಂದ ಪರಿತಪಿಸುವರು ಮತ್ತೆ ಮಹಿಳೆಯರೇ. ಹೀಗಿರುವಾಗ ಅಬಕಾರಿ ಸುಂಕ ಹೆಚ್ಚಳದಿಂದ ಪ್ರಯೋಜನವೇನೂ ಆಗುವುದಿಲ್ಲ.
ನಾವು ಈಗ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವುದು ಕೇವಲ ೧೪,೭೬೧ ಕೋಟಿರೂ. ಒಟ್ಟು ಆದಾಯದಲ್ಲಿ ಶೇ ೯ ಮಾತ್ರ. ಹೀಗಿರುವಾಗ ಅಬಕಾರಿ ಸುಂಕ ಹೆಚ್ಚಿನ ಆದಾಯವನ್ನು ತರುವುದಿಲ್ಲ. ಇಂದು ಗಾಂಧಿ ಜಯಂತಿ. ಗಾಂಧಿ ತತ್ವಗಳನ್ನು ಅನುಸರಿಸುವುದು ಕಷ್ಟ ಎಂದು ಅದನ್ನು ಕೈಬಿಟ್ಟಿದ್ದೇವೆ. ಆದರೂ ಮದ್ಯಪಾನಕ್ಕೆ ಆರ್ಥಿಕ ದೃಷ್ಟಿಯಿಂದಲಾದರೂ ಮಿತಿ ವಿಧಿಸುವುದು ಅಗತ್ಯ. ಸಂಪೂರ್ಣ ಮದ್ಯಪಾನ ನಿಷೇಧ ಕಷ್ಟಸಾಧ್ಯ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಹಿಂದೆ ನಿಜಲಿಂಗಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಯಶೋಧರ ದಾಸಪ್ಪ ಇದಕ್ಕಾಗಿ ಸಚಿವ ಪದವಿ ತ್ಯಜಿಸಿದರು. ಆದರೂ ಮದ್ಯಪಾನ ನಿಷೇಧ ಜಾರಿಗೆ ಬರಲಿಲ್ಲ. ಗುಜರಾತ್ ಮತ್ತು ಬಿಹಾರದಲ್ಲಿ ಮಾತ್ರ ಇದು ಜಾರಿಯಲ್ಲಿದೆ. ಎಲ್ಲ ರಾಜ್ಯಗಳೂ ಅಬಕಾರಿ ಸುಂಕದ ಮೇಲೆ ಹೆಚ್ಚಿನ ಸುಂಕ ವಿಧಿಸಿ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದು ಭಾವಿಸಿ ಅದರಂತೆ ತೆರಿಗೆ ಹೆಚ್ಚಿಸುತ್ತಿದೆ. ದೆಹಲಿ ಸರ್ಕಾರ ಅಬಕಾರಿ ಸುಂಕದ ಹೆಚ್ಚಳದಿಂದಲೇ ವಿವಾದಕ್ಕೆ ಗುರಿಯಾಗಿದೆ.
ಹಿಂದೆ ಎಲ್ಲ ಸರ್ಕಾರಗಳಿಗೆ ಅಬಕಾರಿ ಸುಂಕ ಪ್ರಮುಖ ಆದಾಯವಾಗಿತ್ತು. ಈಗ ಜಿಎಸ್‌ಟಿ, ಸಾರಿಗೆ, ರಿಯಲ್ ಎಸ್ಟೇಟ್ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ದಾರಿ ಮಾಡಿಕೊಟ್ಟಿವೆ. ಅಲ್ಲದೆ ಹೊಸ ವೃತ್ತಿಗಳು ತಲೆ ಎತ್ತುತ್ತಿರುವುದರಿಂದ ಸರ್ಕಾರ ಹೊಸ ಸಂಪನ್ಮೂಲ ಕಂಡುಕೊಳ್ಳಬೇಕಿದೆ. ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ದೇಹಕ್ಕೆ ಹಾನಿಕಾರಕ ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ. ಇವುಗಳಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಮತ್ತು ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬುದು ಅಂಕಿಅಂಶಗಳಿಂದ ಸಾಬೀತಾಗಿದೆ. ಶಿಕ್ಷಣದಿಂದ ಈ ಚಟಗಳು ಇಳಿಮುಖಗೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಸುಶಿಕ್ಷತರೇ ಹೆಚ್ಚು ಈ ಚಟಗಳಿಗೆ ಬಲಿಯಾಗುತ್ತಿರುವುದನ್ನು ನೋಡಿದರೆ ತಮ್ಮ ಶಿಕ್ಷಣ ಪದ್ಧತಿಯ ಬಗ್ಗೆ ಅನುಮಾನಗಳು ಮೂಡುತ್ತಿವೆ. ಇವುಗಳನ್ನು ನಿಷೇಧಿಸುವುದು ಕಷ್ಟ. ಅದರಿಂದ ಅಡ್ಡ ಪರಿಣಾಮಗಳು ಹೆಚ್ಚು. ಹೀಗಾಗಿ ಇವುಗಳನ್ನು ನಿಯಂತ್ರಣದಲ್ಲಿಡುವುದು ಅನಿವಾರ್ಯ. ಸರ್ಕಾರ ಇಂಥ ಕೆಟ್ಟ ಚಟಗಳಿಗೆ ಉತ್ತೇಜನ ನೀಡಬಾರದು. ಸಮಾಜದಲ್ಲಿ ಉತ್ತಮ ಹಾಗೂ ಆರೋಗ್ಯಕರ ಬೆಳವಣಿಗೆಗೆ ಕಾರಣವಾಗುವ ಚಟುವಟಿಕೆಗಳಿಗೆ ಸರ್ಕಾರ ಬೆಂಬಲ ನೀಡಬೇಕು. ಆದಾಯವೊಂದೇ ಗುರಿಯಾಗಬಾರದು. ಆಗ ಹಾವನ್ನು ಹೊಡೆದು ಹದ್ದಿಗೆ ಹಾಕಿದಂತಾಗುತ್ತದೆ. ದುಡಿಯುವ ವರ್ಗ ಚಟಗಳಿಗೆ ಬಲಿಯಾದಲ್ಲಿ ಇಡೀ ಸಮಾಜದ ಆರೋಗ್ಯ ಮಟ್ಟ ಕುಸಿಯುತ್ತದೆ. ಜಗತ್ತಿನಲ್ಲಿ ಯಾವ ಅರ್ಥಶಾಸ್ತçಜ್ಞರೂ ಮದ್ಯದಸುಂಕದಿಂದ ಸಮಾಜವನ್ನು ಕಟ್ಟಬಹುದು ಎಂದು ಹೇಳಿಲ್ಲ. ದುಬೈ ಹಣವಂತರ ಸ್ವರ್ಗ. ಅಲ್ಲೂ ಮದ್ಯ ಸೇವನೆಗೆ ಕಟ್ಟುನಿಟ್ಟಿನ ನಿಯಮ ಇದೆ.