ಹೊಸ ಸಂವತ್ಸರಕ್ಕೆ ಒಸಗೆ

ಸಂಪಾದಕೀಯ
Advertisement

ಬಹುಹಂತದ ಅವಾಂತರದ ಜೊತೆಗೆ ಗಂಡಾಂತರಗಳಿಗೆ ಸಾಕ್ಷಿಯಾದ ಶುಭಕೃತ್ ನಾಮಸಂವತ್ಸರದ ಗುರುತುಗಳ ಹಂಗು ಉಳಿದಿರುವಾಗಲೇ ಪ್ರವೇಶಗೈಯ್ಯುತ್ತಿರುವ ಕ್ರೋಧಿ ನಾಮ ಸಂವತ್ಸರದ ಆಶಾಕಿರಣಗಳ ನಿರೀಕ್ಷೆಯ ನಡುವೆ ಜಗನ್ನಿಯಾಮಕ ಸೂರ್ಯ ದೇವನ ಪ್ರಕೋಪದಿಂದ ಲೋಕವೇ ನಲುಗುತ್ತಿರುವಾಗ ನಗುವಿನ ಸಂಭ್ರಮ ಬರುವುದೇ ಎಂಬುದು ದೊಡ್ಡ ಯಕ್ಷ ಪ್ರಶ್ನೆ. ಶುಭಕೃತ್ ನಾಮ ಸಂವತ್ಸರ ಒಂದು ರೀತಿಯಲ್ಲಿ ಗಾಳಿ ಗಂಟಲಿನ ಸಂವತ್ಸರ. ರಾಜಕೀಯದಿಂದ ಹಿಡಿದು ಸಾಮಾಜಿಕ ಎಲ್ಲ ಸ್ತರದ ಬೆಳವಣಿಗೆಗಳಲ್ಲಿ ಸಂವಾದದ ಜಾಗದಲ್ಲಿ ವಿವಾದವನ್ನು ಬಡಿದೆಬ್ಬಿಸಿ ವಿಷಾದದ ಛಾಯೆ ಮೂಡುವ ಮೊದಲೇ ಸಂಘರ್ಷದ ತಿದಿ ಒತ್ತಿದ ಪರಿಣಾಮವೆಂದರೆ ಎಲ್ಲೆಲ್ಲೂ ಕ್ಷೆಭೆ. ಶಾಸನದ ದೃಷ್ಟಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮರ್ಪಕವಾಗಿದ್ದರೂ ನಿಜಾರ್ಥದಲ್ಲಿ ಅದರ ತದ್ವಿರುದ್ಧದ ಅನುಭವ ಸಮಸ್ತರಿಗೂ ಆಗುತ್ತಿರುವ ಈ ಕಾಲದ ಮಹಿಮೆ ಅರಿಯಲು ಶೋಧನೆಯಷ್ಟೆ ಅಲ್ಲ ಆಳವಾದ ಸಂಶೋಧನೆಯೇ ಆಗಬೇಕು. ಕೊರೊನಾ ರೋಗದಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಾನವನೇ ಸೃಷ್ಟಿಸಿಕೊಂಡ ರೋಗಕ್ಕಿಂತಲೂ ಭೀಕರವಾದ ಸಮಸ್ಯೆಗಳು ಬದುಕಿನ ರಾಗವನ್ನೇ ಬದಲಾಯಿಸಿ ತಾಳಗಳನ್ನು ದಾಳಗಳನ್ನಾಗಿ ಮಾಡಿಕೊಂಡು ತಪ್ಪು-ಸರಿ ಹುಡುಕುವ ವಿಪರೀತ ಬುದ್ಧಿವಂತಿಕೆಯ ಸಹವಾಸ ಈ ಕ್ರೋಧಿ ನಾಮ ಸಂವತ್ಸರಕ್ಕೆ ಆಗದಿದ್ದರೆ ನಿಜವಾದ ಅರ್ಥದಲ್ಲಿ ಬಾಳು ಹಸನು.
ಲೋಕ ವ್ಯವಹಾರಕ್ಕೆ ಜನವರಿ ೧ ಹೊಸವರ್ಷದ ಆರಂಭ. ಆದರೆ, ಕರ್ನಾಟಕ ಹಾಗೂ ಮತ್ತಿತರ ರಾಜ್ಯಗಳಲ್ಲಿ ಮಹಾಚೈತ್ರದ ಪಾಡ್ಯವೇ ಹೊಸ ಸಂವತ್ಸರ. ವರ್ಷಕ್ಕೆ ವ್ಯವಹಾರದ ಗಂಟು. ನಂಬಿಕೆಗೆ ಬದುಕಿನ ಬ್ರಹ್ಮಗಂಟು. ಹೊಸವರ್ಷ ಆರಂಭ ಮನೆಯ ಹೊರಗಿನ ಸಂಭ್ರಮ. ಹೊಸ ಸಂವತ್ಸರ ಮನೆಯ ಒಳಗಿನ ಸಂಭ್ರಮ. ಚಾಂದ್ರಮಾನ ಯುಗಾದಿಯ ಈ ಸಂದರ್ಭದಲ್ಲಿ ಎಲ್ಲರನ್ನೂ-ಎಲ್ಲವನ್ನೂ ಒಳಗೊಂಡು, ಹೊರಗೊಂದು ನೀತಿ ಒಳಗೆ ಇನ್ನೊಂದು ನೀತಿ ಎಂಬುದನ್ನು ಮರೆತು ಅನುಭವ ಹಾಗೂ ಜಾಣ್ಮೆಯ ಮೂಲಕ ರೂಪುಗೊಂಡ ಬೇವು ಬೆಲ್ಲದ ಪರಿಕಲ್ಪನೆಯ ಹಿಂದಿರುವುದು ಅನುಭಾವದ ನೆಲೆ. ಕಾಂಚಾಣದ ಮೋಹಕ್ಕೆ ಯುಗಾದಿ ಹಬ್ಬದಲ್ಲಿ ಮಹತ್ವ ಕಡಿಮೆ. ಆದರೆ, ಭ್ರಾತೃತ್ವದ ಮೂಲಕ ಅಲೌಕಿಕ ಬದುಕಿನ ಕಡೆ ಹೆಜ್ಜೆಹಾಕುವ ಮನಸ್ಸನ್ನು ರೂಡಿಸಿಕೊಳ್ಳುವ ವಿಧಾನದಲ್ಲಿರುವುದು ಪರಂಪರೆಯ ಸತ್ವ ಮತ್ತು ಸತ್ಯಗಳ ಮಹತ್ವ. ಇದರ ಅಡಿಪಾಯದಲ್ಲಿ ವರ್ತಮಾನದ ವರಾತಗಳಿಗೆ ವಿಚಾರ ಮತ್ತು ವಿಹಾರದ ಮೂಲಕ ಕಂಡುಕೊಳ್ಳುವ ಪರಿಹಾರದ ಬೆಳಕು ಭವ್ಯ ಭವಿಷ್ಯದ ರೂಪುರೇಷೆಯನ್ನು ಸಿದ್ಧ ಮಾಡುವ ಕುಲುಮೆಯಾಗುವ ಬೆಳವಣಿಗೆಯಲ್ಲಿ ಆಧ್ಯಾತ್ಮಿಕ ದೃಷ್ಟಿಯ ಧಾರ್ಮಿಕ ದೃಷ್ಟಿ. ಧರ್ಮ ಎಂಬುದು ಬದುಕಿನ ವಿಧಾನ. ಇದಕ್ಕೆ ಖಚಿತ ಅಂಗರಚನೆ ಇಲ್ಲ. ಮನುಷ್ಯರ ಅನುಕೂಲಕ್ಕಾಗಿ ರೂಪಿಸಿಕೊಂಡ ಸಂಹಿತೆಗಳಿಗೆ ಸುಗ್ರೀವಾಜ್ಞೆಗಳ ರೂಪವನ್ನು ಕೊಟ್ಟಾಗ ಕರ್ಮಠತ್ವದ ಬಣ್ಣ ಮೆತ್ತಿಕೊಂಡು ಧಾರ್ಮಿಕ ಉದಾತ್ತ ಭಾವನೆಯೇ ಸಂಕುಚಿತವಾಗುವ ಅಪಾಯವನ್ನು ಮನಗಂಡರಷ್ಟೆ ಮನುಕುಲಕ್ಕೆ ಉಳಿಗಾಲ.
ಪ್ರಾಕೃತಿಕ ವಿಕೋಪಗಳು ದೇವರ ಆಟ ಎಂಬುದು ಒಂದು ಅರ್ಥದಲ್ಲಿ ಸರಿ ಇರಬಹುದು. ಆದರೆ, ಈಗ ನಾವೆಲ್ಲಾ ಅನುಭವಿಸುತ್ತಿರುವ ವಿಕೋಪಗಳಿಗೆ ಮನುಷ್ಯರಾದ ನಾವೇ ಕಾರಣ. ಇದೊಂದು ಸ್ವಯಂಕೃತಾಪರಾಧ. ಭೂಮಿಯ ಒಡಲ ಅಂತರ್ಜಲವನ್ನು ವಿಪರೀತವಾಗಿ ಮೇಲೆತ್ತುತ್ತಿರುವುದರಿಂದ ಕಡಾಣಿ ಕಳೆದುಕೊಂಡ ಬಂಡಿಯ ಚಕ್ರದಂತೆ ಭೂಮಿ ತನ್ನ ಅಕ್ಷದಿಂದ ವಾಲಿಕೊಂಡು ತಿರುಗುತ್ತಾ ಋತುಮಾನಗಳು ಪಲ್ಲಟವಾಗುತ್ತವೆ ಎಂಬುದು ಸೈಂಟಿಫಿಕ್ ಅಮೆರಿಕನ್ ವಿಜ್ಞಾನ ಪತ್ರಿಕೆಯ ಎಚ್ಚರಿಕೆಯ ವರದಿ. ಅಲಾಸ್ಕ, ಅಂಟಾರ್ಟಿಕಾದಲ್ಲಿ ಕರಗಿ ಹರಿಯುತ್ತಿರುವ ಹಿಮಗಡ್ಡೆ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಲೇ ಇದ್ದವು. ಆದರೆ, ಜಗತ್ತಿನ ಸರ್ಕಾರಗಳು ಇದರ ಬಗ್ಗೆ ಎಚ್ಚೆತ್ತುಕೊಳ್ಳದೆ ಅತಿವೇಗದಲ್ಲಿ ಓಡುವ ಕಾರು ಬೈಕುಗಳನ್ನು ತಯಾರಿಸಿ ಇಂಗಾಲಾಮ್ಲದ ಪ್ರಮಾಣ ಮುಗಿಲು ಮುಟ್ಟುವಂತೆ ಮಾಡಿದವು. ಇದರೆಲ್ಲದರ ಪರಿಣಾಮವೆಂದರೆ ವಿಪರೀತವಾಗಿ ಹೊಮ್ಮುತ್ತಿರುವ ಡಯಾಕ್ಸಿನ್ ವಿಷ ಉಸಿರುಗಟ್ಟಿಸುವ ವಾತಾವರಣದಲ್ಲಿದೆ. ಇದೆಲ್ಲವೂ ಕೂಡಾ ದೇವರ ಆಟ ಸುತರಾಂ ಅಲ್ಲ. ಇವೆಲ್ಲವೂ ಕೂಡಾ ನಮ್ಮ ಆಟವೇ. ಕನಿಷ್ಠ ಪಕ್ಷ ಕ್ರೋಧಿ ನಾಮ ಸಂವತ್ಸರದಲ್ಲಿ ಇಂತಹ ವಿಕೋಪಗಳ ತಡೆಗೆ ಮನಸ್ಸು ತಿರುಗುವಂತೆ ಮಾಡುವ ಬೆಳವಣಿಗೆ ಆರಂಭವಾದರೆ ನಿಜಕ್ಕೂ ಇದೊಂದು ಶುಭದ ಹಾಗೂ ಅಭಯದ ಸಂವತ್ಸರ.
ಸಂವತ್ಸರ ಎಂಬ ಹೆಸರುಗಳು ನಾರದ ಮುನಿಯ ಮಕ್ಕಳದು. ಶಾಂತಿಯ ರಾಯಭಾರಿಯಂತೆ ಪುರಾಣದಲ್ಲಿ ಬರುವ ನಾರದ ಮುನಿಗೆ ಅರವತ್ತು ಮಂದಿ ಪುತ್ರರು. ಈ ಪುತ್ರರ ಹೆಸರುಗಳೇ ಸಂವತ್ಸರಗಳು. ಕಳೆದ ಸಂವತ್ಸರ ಶುಭಕೃತುವಿದಾಗಿತ್ತು. ಈಗ ಕ್ರೋಧಿ ಮಹಾಶಯನದು. ಕ್ರೋಧಿಯ ಅರ್ಥ ಕ್ಷದ್ರ ಎಂಬ ಭಾವನೆ ಇರಬಹುದು. ಆದರೆ, ಕ್ಷದ್ರದ ನಿವಾರಣೆಗೆ ಈ ಸಂವತ್ಸರ ಸಾಕ್ಷಿಯಾಗಲಿದೆ ಎಂಬ ಅಪರಿಮಿತ ವಿಶ್ವಾಸ ಹಾಗೂ ಸದಾಶಯದೊಂದಿಗೆ ಬೇವು ಬೆಲ್ಲದ ಸವಿಯೊಡನೆ ಯುಗಾದಿ ಹಬ್ಬದ ಮೂಲಕ ಲೋಕ ಕಲ್ಯಾಣದ ಕಾಯಕದಲ್ಲಿ ಭಾಗಿಯಾಗುವುದು ಒಂದರ್ಥದಲ್ಲಿ ವರ್ತಮಾನದ ವರಾತವೇ.