೧೯ರಂದು ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಶ್ರೀ ಕೃಷ್ಣ
Advertisement

ಹುಬ್ಬಳ್ಳಿ: ರಾಯಾಪುರದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಆ.೧೯, ೨೦ ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು ಎಂದು ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.೧೯ರಂದು ಬೆಳಿಗ್ಗೆ ೮ ರಿಂದ ರಾತ್ರಿ ೯ರವರೆಗೆ ನಿರಂತರವಾಗಿ ಅರ್ಚನೆ ಮತ್ತು ಆರತಿಗಳು ದೇವಸ್ಥಾನದ ಮುಖ್ಯ ಸಭಾಂಗಣದಲ್ಲಿ ಜರುಗಲಿವೆ ಎಂದರು.
ನಸುಕಿನ ಜಾವ ೪.೩೦ಕ್ಕೆ ಶ್ರೀಕೃಷ್ಣ-ಬಲರಾಮರಿಗೆ ಮಂಗಳಾರತಿ ಮಾಡಲಾಗುವುದು. ಬಳಿಕ ಶ್ರೀಕೃಷ್ಣ-ಬಲರಾಮರಿಗೆ ವಿಶೇಷವಾಗಿ ಅಲಂಕಾರ ಮಾಡಿ ೭.೩೦ಕ್ಕೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬೆಳಿಗ್ಗೆ ೧೧ ರಿಂದ ರಾತ್ರಿ ೮.೩೦ರ ವರೆಗೆ ಲಡ್ಡುಗೋಪಾಲನಿಗೆ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು. ಶ್ರೀಕೃಷ್ಣ ಬಲರಾಮರಿಗೆ ೧೦೮ ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಗುವುದು. ನೈವೇದ್ಯದ ನಂತರ ಭಕ್ತಾದಿಗಳಿಗೆ ಭಕ್ಷ್ಯಗಳನ್ನು ದರ್ಶನಕ್ಕಾಗಿ ಇಟ್ಟು, ದಿನದ ಕೊನೆಗೆ ಪ್ರಸಾದ ವಿತರಿಸಲಾಗುವುದು ಎಂದು ಹೇಳಿದರು.
ರಾತ್ರಿ ೯.೩೦ಕ್ಕೆ ಕೃಷ್ಣ-ಬಲರಾಮರಿಗೆ ಮಹಾ ಅಭಿಷೇಕ ಪ್ರಾರಂಭವಾಗಲಿದ್ದು, ಅಭಿಷೇಕವನ್ನು ಸುವಾಸನೆ ಭರಿತ ನೀರು, ಹಾಲು, ಮೊಸರು, ತುಪ್ಪ, ಜೇನುತುಪ್ಪ, ವಿವಿಧ ರೀತಿಯ ಹಣ್ಣಿನ ರಸಗಳಿಂದ ಮತ್ತು ಪರಿಮಳಯುತವಾದ ವಿವಿಧ ಹೂವುಗಳಿಂದ ಸಿದ್ಧಪಡಿಸಲಾಗುವುದು. ಈ ವೇಳೆ ಕೃಷ್ಣನ ಆರಾಧಕರು ಮಂತ್ರ ಪಠಣೆ, ಪ್ರಾರ್ಥನೆ ಮತ್ತು ದೇವರ ಸ್ತೋತ್ರಗಳನ್ನು ಪ್ರಸ್ತುತಪಡಿಸುವರು. ಮಹಾ ಅಭಿಷೇಕವು ಮಂಗಳಾರತಿಯೊಂದಿಗೆ ಮಧ್ಯರಾತ್ರಿ ೧೨ಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.
ಆ.೨೦ರಂದು ಇಸ್ಕಾನ್ ಸಂಸ್ಥಾಪಕ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ೧೨೬ನೇ ಪ್ರಾಕಟ್ಯ ದಿನ ಆಚರಿಸಲಾಗುವುದು. ಅಂದು ಪ್ರಭುಪಾದರ ಉತ್ಸವ ಮೂರ್ತಿಗೆ ಭವ್ಯ ಅಭಿಷೇಕ ನೆರವೇರಿಸಲಾಗುವುದು. ಅಂದು ಮಧ್ಯಾಹ್ನ ೧೨ರವರೆಗೆ ಭಕ್ತಾದಿಗಳು ಉಪವಾಸ ಆಚರಿಸಿ ಪ್ರಭುಪಾದರ ನೈವೇದ್ಯಕ್ಕೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸುತ್ತಾರೆ. ನೂರಾರು ಭಕ್ತರು ತಮ್ಮ ಮನೆಗಳಲ್ಲಿ ತಯಾರಿಸಿ ತಂದ ಸುಮಾರು ೪೦೦೦ ಭಕ್ಷ್ಯಗಳನ್ನು ಇಸ್ಕಾನ್ ಮಂದಿರದ ಸಾಂಸ್ಕೃತಿಕ ಭವನದಲ್ಲಿ ನೈವೇದ್ಯಕ್ಕೆ ಇಡಲಾಗುವುದು. ನೈವೇದ್ಯದ ನಂತರ ಪ್ರಸಾದವನ್ನು ಭಕ್ತರಿಗೆ ಹಂಚಲಾಗುವುದು ಎಂದು ಹೇಳಿದರು. ರಾಮಗೋಪಾಲದಾಸ ಇದ್ದರು.

ಶ್ರೀ ಕೃಷ್ಣ