೫೯ ಜನರ ಮೇಲೆ ಪ್ರಕರಣ ದಾಖಲು

Advertisement

ಬಾಗಲಕೋಟೆ: ಕಲಾದಗಿಯಲ್ಲಿ ಶನಿವಾರದಂದು ನಡೆದ ರಂಭಾಪುರಿ ಶ್ರೀಗಳವರ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ೫೯ ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಬಾಗಲಕೋಟ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದ್ದಾರೆ.
ರವಿವಾರ ಮಧ್ಯಾಹ್ನ ಸ್ಥಳಿಯ ಶ್ರೀ ಗುರುಲಿಂಗೇಶ್ವರ ಮಠಕ್ಕೆ ಆಗಮಿಸಿ ಮಠವನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ಪಡೆದ ನಂತರ ‘ಸಂಯುಕ್ತ ಕರ್ನಾಟಕ’ದೊಂದಿಗೆ ಮಾತನಾಡಿದ ಅವರು ಶ್ರೀಗಳವರ ಸುಗಮ ಸಂಚಾರಕ್ಕೆ ಅಡೆತಡೆಮಾಡಿ ಕಾನೂನು ಕೈಗೆ ತೆಗೆದುಕೊಂಡಿದ್ದು, ಚಪ್ಪಲಿ ಎಸೆತ, ಸಂಘಟಿತರಾಗಿ ಪ್ರತಿಭಟನೆ ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಪ್ರಕರಣದ ತನಿಖೆಯಲ್ಲಿ ಕಂಡು ಬಂದಲ್ಲಿ ಇನ್ನಷ್ಟು ಜನರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ಇನ್ಯಾರದೆ ಪ್ರತಿ ದೂರು ಈವರೆಗೂ ದಾಖಲಾಗಿಲ್ಲ. ಶ್ರೀಮಠದ ಪೀಠಾದಿಪತಿ ನೇಮಕ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯ ಸದ್ಯಕ್ಕೆ ನೀಡಿರುವ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಮೀರಿ ಯಾರೇ ನಡೆದುಕೊಂಡು ಅಶಾಂತಿ ಉಂಟು ಮಾಡಿದರೆ ಕಾನೂನು ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದಲ್ಲಿ ಸಧ್ಯ ಪರಿಸ್ಥಿತಿ ಶಾಂತವಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಬಳಿ ಸೂಕ್ತ ಪೋಲಿಸ್ ಬಂದೂಬಸ್ತ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಿವೈಎಸ್ಪಿ ಪಂಪನಗೌಡರ, ಸಿಪಿಐ ಎಚ್.ಆರ್.ಪಾಟೀಲ, ಸ್ಥಳೀಯ ಠಾಣಾಧಿಕಾರಿ ಆರ್.ಎಲ್. ಮನ್ನಾಬಾಯಿ ಈ ಸಂದರ್ಭದಲ್ಲಿದ್ದರು.