14 ನಿಮಿಷದಲ್ಲಿ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸ್ವಚ್ಛ!

Advertisement

ಹುಬ್ಬಳ್ಳಿ: ಅಂತಿಮ ನಿಲ್ದಾಣದಲ್ಲಿ ವಂದೇಭಾರತ್ ಎಕ್ಸ್ ಪ್ರೆಸ್ ಅನ್ನು ೧೪ ನಿಮಿಷಗಳಲ್ಲಿ ಸ್ವಚ್ಛಗೊಳಿಸುವ -೧೪ ಮಿನಿಟ್ಸ್ ಮಿರಾಕಲ್ ಯೋಜನೆಯನ್ನು ಧಾರವಾಡ ರೈಲು ನಿಲ್ದಾಣದಲ್ಲಿ ರವಿವಾರ ಆರಂಭಿಸಲಾಯಿತು. ರೈಲು ಸಂಖ್ಯೆ ೨೦೬೬೨ ಧಾರವಾಡ- ಕೆ.ಎಸ್.ಆರ್. ಬೆಂಗಳೂರು ವಂದೇಭಾರತ್ ಎಕ್ಸ್ ಪ್ರೆಸ್ ಅನ್ನು ಕೇವಲ ೧೪ ನಿಮಿಷಗಳಲ್ಲಿ ಸಮಗ್ರವಾಗಿ ಸ್ವಚ್ಛಗೊಳಿಸಲಾಯಿತು. ಈ ಯೋಜನೆಯನ್ನು ಭಾರತೀಯ ರೈಲ್ವೆಯಾದ್ಯಂತ ೩೦ ವಂದೇಭಾರತ್ ರೈಲುಗಳಿಗೆ ೩೦ ನಿಲ್ದಾಣಗಳಲ್ಲಿ ಜಾರಿಗೆ ತರಲಾಗಿದ್ದು, ಇದರಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ ರೈಲು ಸಂಖ್ಯೆ ೨೦೭೦೪ ಯಶವಂತಪುರ – ಕಾಚಿಗೂಡ ವಂದೇಭಾರತ್ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ ೨೦೬೦೮ ಮೈಸೂರು- ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ವಂದೇಭಾರತ್ ಎಕ್ಸ್ ಪ್ರೆಸ್ ಗಳು ಸಹಾ ಸೇರಿವೆ.
ಭಾರತೀಯ ರೈಲ್ವೆಯು ಅಭಿವೃದ್ಧಿ ಪಡಿಸಿರುವ ಈ ನವೀನ ಕಾರ್ಯವಿಧಾನವು ಕೇವಲ ೧೪ ನಿಮಿಷಗಳಲ್ಲಿ ಸಮಗ್ರ ಸ್ವಚ್ಛತೆಯನ್ನು ಖಚಿತಪಡಿಸುತ್ತದೆ. ಇದು ದಕ್ಷತೆ, ಸ್ವಚ್ಛತೆ ಮತ್ತು ಪ್ರಯಾಣಿಕರ ತೃಪ್ತಿಗಾಗಿ ಭಾರತೀಯ ರೈಲ್ವೆಯ ಬದ್ಧತೆಯನ್ನು ತೋರಿಸುತ್ತದೆ. ಇದು ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುತ್ತದೆ ಮತ್ತು ರೈಲ್ವೆ ಸ್ವಚ್ಛತೆಯಲ್ಲಿ ಒಂದು ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.
ಧಾರವಾಡದಲ್ಲಿ ೧೪ ನಿಮಿಷದಲ್ಲಿ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪ್ರಧಾನ ಮುಖ್ಯ ಯಾಂತ್ರಿಕ ಇಂಜಿನಿಯರ್ ವಿ.ಕೆ. ಅಗರವಾಲ್, ಹುಬ್ಬಳ್ಳಿ ವಿಭಾಗೀಯ ಅಧಿಕಾರಿ ಹರ್ಷ ಖರೆ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷಕುಮಾರ ವರ್ಮಾ, ವರಿಷ್ಠ ವಿಭಾಗೀಯ ಯಾಂತ್ರಿಕ ಇಂಜಿನಿಯರ್ ಆಂಜನೇಯಲು ಇದ್ದರು.