ಬಿಜೆಪಿ ಯಾವತ್ತೂ ಜನಾಶೀರ್ವಾದಿಂದ ಅಧಿಕಾರಕ್ಕೆ ಬಂದಿಲ್ಲ….

Advertisement

ಕಲಬುರಗಿ: ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಇವರು ಯಾವತ್ತೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ. ಎರಡು ಬಾರಿಯೂ ಆಪರೇಷನ್ ಕಮಲದ ಅನೈತಿಕ ದಾರಿ ಹಿಡಿದೇ ಅಧಿಕಾರಕ್ಕೆ ಬಂದಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆಪರೇಷನ್ ಕಮಲಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಆಪರೇಷನ್ ಎಂಬ ಹೆಸರು ಕೇಳಿರಲಿಲ್ಲ, ರಾಜ್ಯದಲ್ಲಿ ಈ ಆಪರೇಷನ್ ಕಮಲ ಆರಂಭವಾದದ್ದು ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರರಿಂದ ಎಂದು ವಾಗ್ದಾಳಿ ನಡೆಸಿದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ, ನಾವು 80 ಸ್ಥಾನಗಳಲ್ಲಿ ಗೆದ್ದಿದ್ದೆವು. ಆದರೆ ಶೇಕಡಾವಾರು ಮತದಲ್ಲಿ ನಾವು ಬಿಜೆಪಿಗಿಂತ ಶೇ. 2% ಹೆಚ್ಚು ಮತಗಳಿಸಿದ್ದೆವು. ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣಕ್ಕೆ ಬರೀ 38 ಸ್ಥಾನಗಳನ್ನುಗಳಿಸಿದ್ದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ವೆಸ್ಟೆಂಡ್ ಹೋಟೆಲ್‌ನಲ್ಲಿ ಉಳಿದುಕೊಂಡು ಸಚಿವರು, ಶಾಸಕರನ್ನು ಭೇಟಿ ಮಾಡದ ಕಾರಣಕ್ಕೆ ಕೇವಲ 14 ತಿಂಗಳಿಗೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು. ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಈ ಮಾತು ಕುಮಾರಸ್ವಾಮಿ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ ಎಂದು ಕುಮಾರಸ್ವಾಮಿ ವಿರುದ್ಧವೂ ಟೀಕಿಸಿದರು.
ಇಂದು ಬೆಲೆಯೇರಿಕೆ ಗಗನ ಮುಟ್ಟಿದೆ. ಹಿಂದೆ 450 ರೂ ಇದ್ದ 50 ಕೆ.ಜಿ ಡಿಎಪಿ ಬೆಲೆ ಇಂದು 1450 ರೂ. ಆಗಿದೆ. ನರೇಂದ್ರ ಮೋದಿ ಅವರು ರೈತರ ಆದಾಯವನ್ನು ಡಬಲ್ ಮಾಡಿದ್ರಾ? ಮೋದಿಜಿ ಕ್ಯೂಂ ಜೂಟ್ ಬೋಲ್ ಲಿಯಾ ಆಪ್? ಎಂದು ಕೇಳಿದೆ. ಈ ಭಾಗದಲ್ಲಿ ಬೆಳೆದ ತೊಗರಿ ಬೇಳೆಗೆ ನೆಟೆರೋಗ ಬಂದು ಬೆಳೆನಷ್ಟವಾಗಿದೆ. ಈ ಬಗ್ಗೆ ಸದನದಲ್ಲಿ ಕೃಷಿ ಸಚಿವರನ್ನು ರೈತರ ಕಷ್ಟ ಕೇಳಲು ಅವರ ಜಮೀನುಗಳಿಗೆ ಭೇಟಿ ನೀಡಿದ್ರಾ? ಎಂದು ಕೇಳಿದ್ರೆ ನನಗೆ ಹುಷಾರಿಲ್ಲ, ಅದಕ್ಕೆ ಹೋಗಲಿಲ್ಲ ಎಂದರು. ಆರೋಗ್ಯ ಚನ್ನಾಗಿಲ್ಲ, ಜನರ ಕೆಲಸ ಮಾಡಲು ಆಗಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಅಲ್ವಾ? ಇವತ್ತಿನವರೆಗೆ ಒಂದು ರೂಪಾಯಿ ಬೆಳೆ ನಷ್ಟ ಪರಿಹಾರ ಕೊಟ್ಟಿಲ್ಲ ಎಂದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿರುವಾಗ 72,000 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ರು, ನಾನು ಮುಖ್ಯಮಂತ್ರಿಯಾಗಿರುವಾಗ ರಾಜ್ಯದ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 50 ಸಾವಿರವರೆಗಿನ 8,165 ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಮೋದಿ ಅವರಾಗಲೀ, ಬೊಮ್ಮಾಯಿ, ಯಡಿಯೂರಪ್ಪ ಅವರಾಗಲೀ ಒಂದು ರೂಪಾಯಿ ಸಾಲಮನ್ನಾ ಮಾಡಿದ್ದಾರ? ಎಂದು ಪ್ರಶ್ನಿಸಿದರು.
ನ ಖಾವೂಂಗ, ನ ಖಾನೆದೂಂಗ ಎನ್ನುವ ಮೋದಿ ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಒಂದೂವರೆ ವರ್ಷ ಆದರೂ ಯಾಕೆ ಏನೂ ಕ್ರಮ ಕೈಗೊಂಡಿಲ್ಲ. ಎನ್‌ಒಸಿ ಬಿಡುಗಡೆ ಮಾಡಲು 10% ಲಂಚ ನಿಗದಿ ಮಾಡಿದ್ದಾರೆ. ಒಂದು ಕೆಲಸಕ್ಕೆ 40% ಲಂಚ, 18% ಜಿಎಸ್‌ಟಿ, ಗುತ್ತಿಗೆದಾರರ ಲಾಭ ಕಳೆದು ಉಳಿಯುವುದು 20% ಮಾತ್ರ. ಇದರಲ್ಲಿ ಗುಣಮಟ್ಟದ ಕೆಲಸ ಆಗುತ್ತಾ? ಇದೇ ಕಾರಣಕ್ಕೆ ನಾನು ಈ ಸರ್ಕಾರವನ್ನು ಅಲಿಬಾಬಾ ಮತ್ತು 40 ಮಂದಿ ಕಳ್ಳರ ಕೂಟಕ್ಕೆ ಹೋಲಿಸಿದ್ದು ಎಂದರು.

ಮಾತಿನಂತೆ ನಡೆದುಕೊಳ್ಳುತ್ತೇವೆ…’
ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಸಿಮೆಂಟ್, ಕಬ್ಬಿಣ, ಹಾಲು, ಮೊಸರು, ಔಷಧಿ ಇವುಗಳ ಬೆಲೆ ಮಿತಿಮೀರಿದೆ. ಇದನ್ನೇ ಅಚ್ಚೇದಿನ್ ಎಂದು ಕರೆಯಬೇಕಾ ಮೋದಿಜೀ? ಅಗತ್ಯವಸ್ತುಗಳ ಮೇಲೆ ಜಿಎಸ್‌ಟಿ ಹಾಕಿ ಬಡವರ ರಕ್ತ ಹೀರುತ್ತಿದ್ದಾರೆ ಇಂಥವರಿಗೆ ಮತ ಹಾಕ್ತೀರ? ಈ ಬೆಲೆಯೇರಿಕೆಯಿಂದ ನೊಂದಿರುವ ಬಡ ಜನರಿಗೆ ನೆರವಾಗಲು ನಮ್ಮ ಪಕ್ಷವು ಮುಂದೆ ಅಧಿಕಾರಕ್ಕೆ ಬಂದಾಗ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ಸಹಾಯಧನ ನೀಡುತ್ತದೆ. ಇದಕ್ಕೆ ನಾನು ಡಿ.ಕೆ ಶಿವಕುಮಾರ್ ಅವರು ಸಹಿ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಈ ಬಗ್ಗೆ ಅನುಮಾನವೇ ಬೇಡ ಎಂದರು.
ಬಿ.ಆರ್. ಪಾಟೀಲರನ್ನು ಸೋಲಿಸಿದ್ದಕ್ಕೆ ಬೇಸರ….
ಆಳಂದದ ಮಾಜಿ ಶಾಸಕ ಬಿ.ಆರ್. ಪಾಟೀಲ್ ನನ್ನ ಆತ್ಮೀಯ ಗೆಳೆಯ, ಹೋರಾಟದ ಮೂಲಕ ರಾಜಕಾರಣ ಮಾಡಿಕೊಂಡು ಬಂದವರು, ಸಮಾಜದ ಯಾವುದೇ ವರ್ಗದ ಜನರಿಗೆ ಅನ್ಯಾಯವಾದರೂ ಅದರ ವಿರುದ್ಧ ಧ್ವನಿಯೆತ್ತುವ ಮನುಷ್ಯ. ಇಂಥವರನ್ನು ಆಳಂದದ ಪ್ರಬುದ್ಧ ಮತದಾರರು ಸೋಲಿಸಿದ್ದಾರಲ್ಲ ಎಂದು ಬೇಸರವಾಗುತ್ತಿದೆ. ಇವರ ವಿರುದ್ಧ ಗೆದ್ದವರು ರಾಜಕೀಯ ಜ್ಞಾನವೇ ಇಲ್ಲದ, ವ್ಯಾಪಾರಿ ಮನೋಭಾವದವರು. ಜನರ ಕಷ್ಟ ಸುಖದ ಅರಿವು ಕೂಡ ಅವರಿಗೆ ಇಲ್ಲ. ಬಿ.ಆರ್‌ಸ ಪಾಟೀಲ್ ಅವರ ಜೊತೆ ರಾಜಕಾರಣ ಪ್ರವೇಶ ಮಾಡಿದ ನಾನು ಮುಖ್ಯಮಂತ್ರಿ ಆದರೂ ಪಾಟೀಲರು ಮಂತ್ರಿ ಕೂಡ ಆಗಿಲ್ಲ. ಕೈ, ಬಾಯಿ ಸ್ವಚ್ಛ ಇರುವ ಪಾಟೀಲರು ಸೋಲಬೇಕೇ? ಬಿ.ಆರ್. ಪಾಟೀಲರ ಸೋಲು ಇಡೀ ಕ್ಷೇತ್ರದ ಜನರ ಸೋಲಾಗುತ್ತದೆ. ಯಾವ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಪಾಟೀಲರು ಸೋಲಬಾರದು. ಬಿ.ಆರ್. ಪಾಟೀಲ್ ಒಬ್ಬ ಸರಳ, ಸಜ್ಜನ, ಪ್ರಾಮಾಣಿಕ, ಜನಪರ ಚಿಂತನೆಯ ವ್ಯಕ್ತಿ. ಇವರಿಗೆ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಇವರ ಎದುರಾಳಿ ಎಲ್ಲಾ ರೀತಿ ಅನೈತಿಕ ಚಟುವಟಿಕೆಗಳ ಮೂಲಕ ಹಣ ಸಂಪಾದನೆ ಮಾಡಿದ್ದಾರೆ. ಅದನ್ನು ಖರ್ಚು ಮಾಡುತ್ತಾರೆ. ಆದರೆ ಪ್ರಾಮಾಣಿಕರನ್ನು ಗುರುತಿಸಿ ಮತ ನೀಡಬೇಕಿರುವುದು ಜನರ ಕರ್ತವ್ಯ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿ.ಆರ್ ಪಾಟೀಲರಿಗೆ ಉಜ್ವಲ ಭವಿಷ್ಯವಿದೆ ಎಂಬುದಂತೂ ನಿಜ.