ಒಂದು ವಿಶೇಷ ಪ್ರಸಂಗ

Advertisement

ನಾನು ಶಾಲೆಯನ್ನು ಬಿಡುವ ತೀರ್ಮಾನ ಮಾಡಿದ ಮೇಲೆ ಒಂದು ವಿಶೇಷ ಘಟನೆ ನಡೆಯಿತು.
ನಮ್ಮ ಶಾಲೆ ನಗರದಿಂದ ಬಹಳ ದೂರವಿದ್ದುದರಿಂದ ಮತ್ತು ಭದ್ರತೆಯ ದೃಷ್ಟಿಯಿಂದ ಯಾರು ಬೇಕಾದರೂ ಒಂದು ಹೋಗುವ ಸಾಧ್ಯತೆ ಇಲ್ಲದಿದ್ದುದರಿಂದ ನಾವೊಂದು ದ್ವೀಪವೇ ಆಗಿದ್ದೆವು. ಹೊರಗೆ ನಡೆದ ವಿಷಯಗಳು ನಮಗೆ ತಿಳಿಯುವುದು ಎಷ್ಟೋ ದಿನಗಳಾದ ನಂತರ. ಆದರೆ ಜುಲೈ ೩೧, ೨೦೦೦ ರ ದಿನ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ನಮ್ಮ ಮುಖ್ಯ ಪ್ರವೇಶ ದ್ವಾರದ ಭದ್ರತಾ ಸಿಬ್ಬಂದಿಯ ನಾಯಕ ನಮ್ಮ ಕ್ಯಾಂಪಸ್ ಡೈರೆಕ್ಟರ್‌ರಿಗೆ ಫೋನ್ ಮಾಡಿ ಬಂದು ವಿಶೇಷ ವಿಷಯವನ್ನು ಹೇಳಿದ. ಅವರು ತಕ್ಷಣ ನನಗೆ ಫೋನ್ ಮಾಡಿ ಬೆಟ್ಟಿಯಾಗಲು ಕೇಳಿದರು. ಅವರ ಮನೆ, ನನ್ನ ಮನೆಯ ಕೆಳಗೇ ಇದ್ದದ್ದು. ಏನೋ ವಿಶೇಷವಿರಬೇಕೆಂದು ಕೂಡಲೇ ಅವರ ಮನೆಗೆ ಹೋದೆ. ಅವರ ಮುಖದಲ್ಲಿ ಆತಂಕ ಕಾಣುತ್ತಿತ್ತು. “ಸರ್, ಈಗ ತಾನೇ ಸೆಕ್ಯೂರಿಟಿ ಚೀಫ್ ಫೋನ್ ಮಾಡಿದ್ದ. ರಸ್ತೆಯಲ್ಲಿ ತುಂಬ ಪೋಲೀಸ್ ವಾಹನಗಳು ಓಡಾಡುತ್ತಿವೆಯಂತೆ ಒಬ್ಬ ಎಸ್.ಪಿ.ಯವರು ಬಂದು ಯಾರನ್ನೂ ಶಾಲೆಯ ಆವರಣದಲ್ಲಿ ಬಿಡದಂತೆ ತಾಕೀತು ಮಾಡಿದ್ದಾರೆ. ಅದು ಒಂದು ರೀತಿಯ ಕರ್ಫ್ಯೂ ಇದ್ದ ಹಾಗೆ. ನಿನ್ನೆ ರಾತ್ರಿ ಡಾ. ರಾಜಕುಮಾರ್‌ರವರನ್ನು ಕ್ರೂರಿ ವೀರಪ್ಪನ್ ಅಪಹರಿಸಿಕೊಂಡು ಹೋಗಿದ್ದಾನಂತೆ. ಏನಾಗಿದೆಯೋ ತಿಳಿಯದು. ಬಹುಶ: ಗಲಾಟೆಯಾಗಬಹುದು. ನಾವು ತುಂಬ ಎಚ್ಚರವಾಗಿರಬೇಕಲ್ಲವೆ?” ಎಂದರು. ನನಗೆ ಅಘಾತವಾಯಿತು. ನಾನೊಬ್ಬ ರಾಜಕುಮಾರ್‌ರ ಅಪ್ಪಟ ಅಭಿಮಾನಿ. ಅದರಲ್ಲೂ ಅವರ ಪೌರಾಣಿಕ, ಧಾರ್ಮಿಕ ಚಿತ್ರಗಳ ನಟನೆ ನನಗೆ ಬಹಳ ಇಷ್ಟ. ಅಂಥವರನ್ನು, ಅಂಥ ವಿನಯಶೀಲ, ಯಾರನ್ನೂ ಎದುರುಹಾಕಿಕೊಳ್ಳದ ವ್ಯಕ್ತಿಯನ್ನು, ಈ ಕಾಡುಗಳ್ಳ ಹೇಗೆ, ಯಾಕೆ ಅಪಹರಿಸಿದ? ಈ ಅಪಹರಣದಿಂದ ಅವನಿಗೇನು ಲಾಭ? ರಾಜಕುಮಾರ್ ಇರುವುದು ಅತ್ಯಂತ ಭದ್ರತೆ ಇರುವ ಸದಾಶಿವನಗರದ ಬಂಗಲೆಯಲ್ಲಿ. ಅಲ್ಲಿಗೆ ವೀರಪ್ಪನ್ ಹೇಗೆ ಹೋದ? ತಲೆ ಬಿಸಿಯಾಯಿತು. ಆಗ ನನಗೆ ರಾಜಕುಮಾರ್ ತಮ್ಮ ಗಾಜನೂರಿನ ಮನೆಗೆ ಹೋದದ್ದು, ಅಲ್ಲಿಂದ ಅಪಹರಣವಾದದ್ದು ತಿಳಿದಿರಲಿಲ್ಲ. ದೇವರೇ, ರಾಜಕುಮಾರ್ ಕ್ಷೇಮವಾಗಿ ಮರಳಿ ಬರಲಿ ಎಂದು ಮನಸ್ಸಿನಲ್ಲಿಯೇ ಪ್ರಾರ್ಥನೆ ಮಾಡಿದೆ. ಎರಡು ಕಾರಣಕ್ಕೆ ಅವರು ಸುರಕ್ಷಿತವಾಗಿ ಮರಳಿ ಬರುವುದು ಅವಶ್ಯವಾಗಿತ್ತು. ಮೊದಲನೆಯದು, ಅವರೊಬ್ಬ ಮೇರು ನಟ, ಶ್ರೇಷ್ಠ ಕಲಾವಿದ, ಮಾನವತಾವಾದಿ, ಅವರಿಗೆ ತೊಂದರೆಯಾಗಬಾರದು. ಎರಡನೆಯದು, ಅವರಿಗೇನಾದರೂ ಆದರೆ ತಮಿಳುನಾಡು ಮತ್ತು ಕರ್ನಾಟಕಗಳೆರಡೂ ಹೊತ್ತಿ ಉರಿದು ಹೋಗುತ್ತಿದ್ದವು. ಅದಾಗಲೇ ಕಾವೇರಿ ನೀರಿನ ಹಂಚಿಕೆಯ ವಿಷಯವಾಗಿ ಎರಡೂ ಕಡೆಗೂ ಮನಸ್ಸು ಕಲಕಿ ಹೋಗಿ ಗಲಾಟೆಗಳಾಗಿದ್ದವು. ವೀರಪ್ಪನ್ ತಮಿಳಿನವನು, ರಾಜಕುಮಾರ್ ಕನ್ನಡದವರು. ಅವರಿಗೆ ಅಪಾಯವಾದರೆ ದೊಡ್ಡ ಪ್ರಮಾಣದ ಅನಾಹುತ ಖಚಿತ.
ನಾನು ತಕ್ಷಣ ಆಫೀಸಿಗೆ ಬಂದು ಮಾಡಬೇಕಾದ್ದನ್ನು ಪಟ್ಟಿ ಮಾಡಿದೆ. ಅಂದಿನ ದಿನದ ಕಾರ್ಯಕ್ರಮದ ಪಟ್ಟಿ ನೋಡಿದೆ. ನಗರದಿಂದ ಬರಬೇಕಾದ್ದ ಅತಿಥಿಗಳಿಗೆಲ್ಲ ಫೋನ್ ಮಾಡಿ ಬರದಿರಲು, ಅಂತೆಯೇ ಮೊದಲೇ ಶಾಲೆಗೆ ಬರಲು ಪರವಾನಗಿ ತೆಗೆದುಕೊಂಡಿದ್ದ ಪಾಲಕರಿಗೂ ವಿಷಯ ತಿಳಿಸಲು ನಮ್ಮ ಸಂಪರ್ಕಾಧಿಕಾರಿಗೆ ಸೂಚನೆ ನೀಡಿದೆ. ತಕ್ಷಣ ನಮ್ಮ ಶಾಲೆಯಲ್ಲಿ ತಮಿಳುನಾಡಿಗೆ ಸೇರಿದ ಎಷ್ಟು ಮಕ್ಕಳಿದ್ದಾರೆ ಎಂಬ ಪಟ್ಟಿ ಮಾಡಿಸಿದೆ. ಅದರಲ್ಲಿ ಕೆಲವರ ಹಿರಿಯರು ರಾಜಕಾರಣಿಗಳು, ಸಿನಿಮಾನಟರು. ಶಾಲೆಗೆ ನಿತ್ಯವೂ ಹಾಲು, ತರಕಾರಿ, ಹಣ್ಣುಗಳನ್ನು ತರುವವರ, ಬೇರೆ ವಸ್ತುಗಳನ್ನು ಪೂರೈಸುವವರ ಗುರುತುಚೀಟಿಗಳನ್ನು ಸರಿಯಾಗಿ ಪರೀಕ್ಷಿಸಿ, ಅವರು ಫೋಟೋಗಳನ್ನು ತೆಗೆದಿರಿಸಿಕೊಳ್ಳಲು ಆಜ್ಞೆ ನೀಡಿದ್ದಾಯಿತು. ಶಾಲೆಯಲ್ಲಿ ಮಕ್ಕಳಿಗೆ ಈ ವಿಷಯವನ್ನು ಹೇಳುವುದೇ ಬೇಡ ಎಂದು ನಿರ್ಧಾರ ಮಾಡಿದೆವು. ಆದರೆ ಸೂರ್ಯನನ್ನು ಮುಚ್ಚಿಡಲು ಸಾಧ್ಯವೇ? ಅದೇ ದಿನ ಬೆಳಿಗ್ಗೆ ಅಸೆಂಬ್ಲಿಯಲ್ಲಿ ಪ್ರಾರ್ಥನೆಯಾದ ನಂತರ ‘ಇಂದಿನ ಸುದ್ದಿ’ ಯನ್ನು ಒಬ್ಬ ಹುಡುಗ ಓದಿದ. ಅವನು ಅಮೇರಿಕೆಯಿಂದ ಬಂದವನು. ಅವನ ಮಾತೃಭಾಷೆ ಗುಜರಾತಿ. ಆದ್ದರಿಂದ ಯಾವ ಭಾವಾವೇಶವಿಲ್ಲದೆ “ನಿನ್ನೆ ರಾತ್ರಿ ಕನ್ನಡದ ಮೇರುನಟ ರಾಜಕುಮಾರ್‌ರನ್ನು ತಮಿಳುನಾಡಿನ ಕುಖ್ಯಾತ ದಂತಚೋರ ವೀರಪ್ಪನ್ ಅಪಹರಣ ಮಾಡಿದ್ದಾನೆ”. ಇದೇ ಇಂದಿನ ಮೊದಲ ಸುದ್ದಿ, ವಿದ್ಯಾರ್ಥಿಗಳಲ್ಲಿ ಪ್ರತಿಕ್ರಿಯೆ ನಿರೀಕ್ಷಿಸಿದಂತೆಯೇ ಇತ್ತು. ಬಹಳಷ್ಟು ವಿದ್ಯಾರ್ಥಿಗಳು ಬೇರೆ ದೇಶಗಳಿಂದ, ರಾಜ್ಯಗಳಿಂದ ಬಂದವರು. ಅವರಿಗೆ ರಾಜಕುಮಾರ್ ಬಗ್ಗೆ ಗೊತ್ತಿಲ್ಲ, ಕನ್ನಡದ ಮಕ್ಕಳು ಮಾತ್ರ “ಹೋ!” ಎಂದು ಕಿರುಚಿದರು. ಯಾವುದನ್ನು ನಾವು ಯಾರಿಂದ ಮುಚ್ಚಿಡಬೇಕು ಎಂದಿದ್ದೆವೋ, ಅದು ಅವರಿಂದಲೇ ಬಹಿರಂಗವಾಗಿತ್ತು. ಸಂಜೆ, ನಾವು ನಮ್ಮ ಮನೆಗಳಲ್ಲಿ ಟಿ.ವಿ. ನೋಡುತ್ತಿದ್ದೆವು. ದಿನಕ್ಕೊಂದು ಸುದ್ದಿ, ಸುದ್ದಿಗೊಂದು ತಿರುವು. ಹಾಗಾಯಿತಂತೆ, ಹೀಗಾಯಿತಂತೆ ಎಂದು ಕಲ್ಪನೆಯ ಪತಾಕೆಗಳನ್ನು ಕೆಲವರು ಹಾರಿಸಿದರೆ, ಮತ್ತೆ ಕೆಲವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಂತೆ, “ನೋಡುತ್ತಿರಿ, ಇದು ಹೀಗೇ ಆಗುತ್ತದೆ” ಎಂದು ತೀರ್ಮಾನ ಕೊಡುತ್ತಿದ್ದರು.
ನಮ್ಮ ಕ್ಯಾಂಪಸ್ ನಿರ್ದೇಶಕರು ತಮಿಳಿನವರು, ನಾನು ಕನ್ನಡದವನು. ನಾವಿಬ್ಬರೂ ನಿತ್ಯ ರಾತ್ರಿ ಬೆಟ್ಟಿಯಾಗಿ, ಶಾಲೆಯ ಮತ್ತು ಇತರ ವಿಷಯಗಳನ್ನು ಚರ್ಚಿಸುತ್ತಿದ್ದೆವು. ನಾವಿಬ್ಬರೂ ಒಂದು ವಿಷಯದ ಬಗ್ಗೆ ಆಶ್ಚರ್ಯಪಡುತ್ತಿದ್ದೆವು. ನಕ್ಕೀರನ್ ಪತ್ರಿಕೆಯ ಗೋಪಾಲನ್ ಮೇಲಿಂದ ಮೇಲೆ ಕಾಡಿನೊಳಗೆ ಹೋಗಿ ವೀರಪ್ಪನ್‌ನನ್ನು ಆತ್ಮೀಯ ಸಂಬಂಧಿಯಂತೆ ಹೋಗಿ ಬೆಟ್ಟಿಯಾಗಿ ಬರುತ್ತಾನೆ. ಆದರೆ ನಮ್ಮ ಎರಡೂ ರಾಜ್ಯದ ಪೋಲೀಸರಿಗೆ ಮಾತ್ರ ಯಾಕೆ ಸಿಗುವುದಿಲ್ಲ? ದಿನಗಳು ಕಳೆದಂತೆ ಕರ್ನಾಟಕದ ಪರಿಸ್ಥಿತಿ ಹದಗೆಡುತ್ತಿತ್ತು. ಅದಕ್ಕೆ ಪುಷ್ಟಿಕೊಡುವಂತೆ ಚಿಕ್ಕ ಪುಟ್ಟ ರಾಜಕಾರಣಿಗಳ, ಸ್ವಘೋಷಿತ ಕನ್ನಡ ರಕ್ಷಕರ, ವೀರಾವೇಶದ ಮಾತುಗಳು ಇದ್ದವು.
ಒಂದು ದಿನ ಹುಡುಗನೊಬ್ಬ ಬಂದು, “ಸರ್, ನಿಮಗೆ ಗೊತ್ತಾ?” ಎಂದು ಪಿಸುಮಾತಿನಲ್ಲಿ ಕೇಳಿದ. “ಏನಪ್ಪಾ ಅದು?” ಎಂದು ಕೇಳಿದೆ.
“ಸರ್, ವೀರಪ್ಪನ್ ಮತ್ತು ರಾಜಕುಮಾರ ಇಬ್ಬರೂ ನಮ್ಮ ಕ್ಯಾಂಪಸ್‌ನಲ್ಲೇ ಇದ್ದಾರೆ”
“ಹೌದೇ?”
“ಹೌದು ಸರ್, ಅದಕ್ಕೇ ನಮ್ಮ ಕ್ಯಾಂಪಸ್‌ನಲ್ಲಿ ಯಾರನ್ನೂ ಬಿಡುತ್ತಿಲ್ಲ. ಯಾರನ್ನೂ ಹೊರಗೆ ಕೂಡ ಕಳುಹಿಸುತ್ತಿಲ್ಲ. ಅವರಿರುವುದು ನಮ್ಮ ಡಿ.ಜಿ. ರೂಮಿದೆಯಲ್ಲ, ಅಲ್ಲಿ”
“ನಿನಗೆ ಹೇಗೆ ಗೊತ್ತು ಇದು?”
“ಸರ್, ನಿನ್ನೆ ರಾತ್ರಿಯೇ ಅಲ್ಲಿ ಬೋರ್ಡ್ ಹಾಕಿದ್ದಾರೆ”. “ಯಾರಿಗೂ ಪ್ರವೇಶವಿಲ್ಲ” ಎಂದು. ನೀವು ನೋಡಿಲ್ಲವೇ?”
ನನಗೆ ಭಾರೀ ನಗೆ ಬಂತು. ನಮ್ಮದು ನೂರಾ ಎಪ್ಪತ್ತು ಎಕರೆಯಷ್ಟು ದೊಡ್ಡ ಕ್ಯಾಂಪಸ್ಸು. ಎಲ್ಲ ಕಡೆಯೂ ಭದ್ರತೆ. ಹೀಗೊಂದು ಗಾಳಿಸುದ್ದಿಯನ್ನು ಯಾರೋ ಹಾರಿಸಿದ್ದು ನನಗೆ ತಿಳಿದಿತ್ತು. ಸಾಮಾನ್ಯವಾಗಿ ಇಂಥ ಬಾಲವಿಲ್ಲದ ಸುದ್ದಿಗಳು ಹೊರಡುವುದು ಅಡುಗೆಮನೆಯಲ್ಲಿ ಕೆಲಸಮಾಡುವ, ಊಟ ಬಡಿಸುವ ಹುಡುಗರಿಂದ. ನಾನು ಅದನ್ನು ನಿರ್ಲಕ್ಷ್ಯ ಮಾಡಿದ್ದೆ. ಅವನು ಯಾವನೋ ಮಕ್ಕಳಿಗೂ ಹೇಳಿಬಿಟ್ಟಿದ್ದಾನೆ. ಇದಕ್ಕೆ ಈಗ ಇನ್ನೊಂದು ವಿಷಯವೂ ಹೊಂದಿಕೆಯಾಯಿತು. ನಮ್ಮ ಇಡೀ ಆವರಣಕ್ಕೆ ವಿದ್ಯುತ್ ಪೂರೈಕೆಗೆ ಬೃಹತ್ ಜೆನರೆಟರ್‌ಗಳು ಇದ್ದವು. ಅವು ದೊಡ್ಡ ಗೋಡೌನ್ ತರಹದ ಕಟ್ಟಡಗಳು. ಅದಕ್ಕೆ ಡಿ.ಜಿ. ರೂಮ್ ಎಂದು ಹೆಸರು. ಅದರೊಳಗೆ ಏನೇನೋ ವಿದ್ಯುತ್ ಉಪಕರಣಗಳಿದ್ದುದರಿಂದ ಮತ್ತು ಜನರೇಟರ್‌ಗಳಿಗೆ ಯಾರಾದರೂ ಅಡಚಣೆ ಮಾಡಬಾರದೆಂದು ಕ್ಯಾಂಪಸ್ ನಿರ್ದೇಶಕರು ಅಲ್ಲಿ ಮೂರು-ನಾಲ್ಕು ಕಡೆಗೆ “NO ENTRY” “ಯಾರಿಗೂ ಪ್ರವೇಶವಿಲ್ಲ” ಎಂದು ಬರೆಯಿಸಿ ಕಟ್ಟಿಸಿದ್ದರು. ಈ ಹುಡುಗ ಅದನ್ನೇ ನೋಡಿ ವೀರಪ್ಪನ್ ಮತ್ತು ರಾಜಕುಮಾರ್‌ರವರ ರಕ್ಷಣೆಗೆ ಈ ಪರಿಯ ವ್ಯವಸ್ಥೆ ಮಾಡಿದ್ದಾರೆ ಎಂದು ನಂಬಿದ್ದ.
ಕೊನೆಗೆ ರಾಜಕುಮಾರ್ ಪ್ರಸಂಗ ಸುಖಾಂತವಾಯಿತು. ಕ್ಯಾಂಪಸ್ಸಿನಲ್ಲಿದ್ದ ಕನ್ನಡದ ಮಕ್ಕಳು, ಶಿಕ್ಷಕರು, ಕೆಲಸಗಾರರು ಸಂಭ್ರಮಾಚರಣೆ ಮಾಡಿದರು.
ಆದಾಗಿ ೨೨ ವರ್ಷಗಳ ನಂತರವೂ ಈ ಘಟನೆಯ ನೆನಪು ನನಗೆ ಬೆರಗನ್ನು ಹುಟ್ಟಿಸುತ್ತದೆ. ಒಂದು ಪ್ರಮುಖ ಘಟನೆ, ದೂರದ ಒಂದು ಪುಟ್ಟ ವ್ಯವಸ್ಥೆಯನ್ನು ಹೇಗೆ, ಯಾವ ಪ್ರಮಾಣದಲ್ಲಿ ತಟ್ಟಬಹುದಲ್ಲ? ಯಾವ ರೀತಿಯ ತಲ್ಲಣಗಳನ್ನು, ಚಿಂತನೆಗಳನ್ನು ಹುಟ್ಟುಹಾಕಬಲ್ಲದಲ್ಲ? ನಿಜವಾಗಿಯೂ ವಿಶ್ವವೊಂದು ಅಂಗೈಯಲ್ಲಿನ ಆಟಿಕೆಯಾಗಿದೆ.