21ರಂದು ಮುದೇನೂರಿನಲ್ಲಿ ಮಹಿಳಾ ಸಾರಥ್ಯದ ಪಾರ್ವತಿ ರಥೋತ್ಸವ

Advertisement

ಶ್ರೀಕಾಂತ ಶೇಖರಯ್ಯ ಸರಗಣಾಚಾರಿ
ಕುಷ್ಟಗಿ: ನಾಡಿನಾದ್ಯಂತ ಜರಗುವ ಜಾತ್ರೆಯಲ್ಲಿ ಪುರುಷರೇ ತೇರು ಎಳೆಯುವ ಪ್ರತೀತಿ ಅನಾದಿ ಕಾಲದಿಂದಲೂ ಸಹ ನಡೆದುಕೊಂಡು ಬರುತ್ತಿದ್ದು, ಆದರೆ ಈ ಗ್ರಾಮದಲ್ಲಿ ಮಾತ್ರ ಪುರುಷರು ಒಂದು ದಿನ ತೇರು ಎಳೆದರೆ, ಇನ್ನೂ ಒಂದು ದಿನ ಅಂದರೆ ೧೦೦ ವರ್ಷಗಳಿಂದ ಮಹಿಳೆಯರು ತೇರು ಎಳೆಯುವ ಮೂಲಕ ಪುರುಷ, ಮಹಿಳೆ ಎಂಬ ಭೇದ-ಭಾವ ಇಲ್ಲದೆ ಸಮನಾಗಿ ಕಾಣುವಂತಹ ಗ್ರಾಮ ಎಂಬ ಹೆಗ್ಗಳಿಕೆಗೆ ಮುದೇನೂರು ಪಾತ್ರವಾಗಿದೆ.
ತಾಲೂಕಿನ ಮುದೇನೂರು ಗ್ರಾಮದ ಉಮಾಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವ ಇಂಥದ್ದೊಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಗಲಿದೆ.
ಫೆ. 21ರಂದು ಪ್ರಾರಂಭವಾಗುವ ಈ ಜಾತ್ರೆ 3 ದಿನ ನಡೆಯುತ್ತದೆ. ಮೊದಲ ದಿನವಾದ ಫೆ. 21ರಂದು ಮಹಾರಥೋತ್ಸವ ಜರುಗುತ್ತದೆ. ಇದನ್ನು ಎಲ್ಲೆಡೆಯಂತೆ ಪುರುಷರೇ ಎಳೆಯುತ್ತಾರೆ, ಫೆ. ೨೨ರಂದು ಸುಮಂಗಲೆಯರಿಂದ ಪಾರ್ವತಿ ರಥೋತ್ಸವ ಹಾಗೂ ಧರ್ಮಸಭೆ ನಡೆಯಲಿದ್ದು, ಇದನ್ನು ಸಂಪೂರ್ಣವಾಗಿ ಮಹಿಳೆಯರೇ ಎಳೆಯುತ್ತಾರೆ. ಅಲ್ಲದೇ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಮಹಿಳೆಯರು ಕೇವಲ ರಥ ಎಳೆಯುವುದಲ್ಲದೇ ಡೊಳ್ಳು ಬಡಿಯುವುದು, ನಂದಿಕೋಲು ಕುಣಿತ, ದೇವರ ಗುಡಿಯಲ್ಲಿ ಲಿಂಗದೀಕ್ಷ, ಅಯ್ಯಾಚಾರ ನಡೆಯುವುದು ವೀರಗಾಸೆ, ಡೊಳ್ಳುಕುಣಿತ ಮತ್ತು ಹುಟ್ಟಿಹಾಳ ಭಕ್ತರಿಂದ ಹಾಗೂ ಬೆಂಗಳೂರಿನಲ್ಲಿರುವ ಮುದೇನೂರ ಭಕ್ತರಿಂದ ಹೂವಿನ ಹಾರ ತರುವುದು ಹಾಗೂ ಬಳೂಟಗಿ ಗ್ರಾಮದ ಸದ್ಭಕ್ತರಿಂದ ನಂದಿಕೋಲು, ಪೂಜೆ, ರಥದ ಪೂಜೆ ಸೇರಿದಂತೆ ನಡೆಯುತ್ತದೆ. ಎಲ್ಲವೂ ಮಹಿಳೆಯರೇ ಮಾಡುತ್ತಾರೆ. ಈ ವಿಶಿಷ್ಟ ಸಂಪ್ರದಾಯವನ್ನು ಮುದೇನೂರು ಗ್ರಾಮಸ್ಥರು ಸುಮಾರು 100 ವರ್ಷಗಳ ಹಿಂದೆಯೇ ಉಮಾ ಚಂದ್ರಮೌಳೇಶ್ವರ ದೇವಸ್ಥಾನ ಸ್ವಾಮಿಗಳಾಗಿದ್ದ ಡಾ. ಚಂದ್ರಶೇಖರ ಸ್ವಾಮಿಗಳು ಪ್ರಾರಂಭಿಸಿದ್ದಾರೆ. ಇಂದಿಗೂ ನಡೆದುಕೊಂಡು ಬಂದಿದೆ.

ಮಹಿಳೆಯರಿಗೆ ಆದ್ಯತೆ:
ಪ್ರಸ್ತುತ ದಿನಮಾನಗಳಲ್ಲಿ ಮಹಿಳೆ ಪುರುಷನಿಗೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಸಾಮರ್ಥ್ಯ ತೋರುತ್ತಲೇ ಬಂದಿದ್ದಾಳೆ. ಪುರುಷರಿಗೆ ಮೀಸಲಾಗಿರುವ ಸಕಲ ರಂಗಗಳಲ್ಲಿಯೂ ಮಹಿಳೆಯರು ಸೈ ಎನಿಸಿಕೊಂಡಿದ್ದಾರೆ. ಆದರೆ ಈ ಹಿಂದೆಲ್ಲ ಇಂಥ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ಇರಲಿಲ್ಲ. ಆದರೀಗ ಸ್ತ್ರೀಯರೊಂದಿಗೆ ಇಡೀ ಸಮಾಜವೇ ಬದಲಾಗಿದೆ. ಮಹಿಳೆಯರನ್ನು ಮನೆಯಿಂದ ಹೊರಕಳುಹಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪುರುಷರಷ್ಟೇ ಮಹಿಳೆಗೆ ಸಮಾನ ಅವಕಾಶ ನೀಡಿದ ಧಾರ್ಮಿಕ ಕ್ಷೇತ್ರವೊಂದು ಮುದೇನೂರು ಗ್ರಾಮದ ಉಮಾಚಂದ್ರಮೌಳೇಶ್ವರ ಮಠ ಸಾಕ್ಷಿಯಾಗಿದೆ.
ಫೆ. 23ರಂದು ಗೌರಿ ರಥೋತ್ಸವ:
ಶ್ರೀಮಠದ ರಥೋತ್ಸವದ ಮೂರನೇ ದಿನವಾದ ಫೆ. 23ರಂದು ಗೌರಿ ರಥೋತ್ಸವ ಕುಮಾರಿಯರು ಇದನ್ನು ನಡೆಸಿಕೊಡುತ್ತಾರೆ ಎನ್ನುವುದು ಜಾತ್ರೆಯ ಮತ್ತೊಂದು ವಿಶೇಷ, ಬಾಲಕಿಯರೇ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಆದರೆ, ಮಕ್ಕಳಿಗೆ ಸಮಸ್ಯೆಯಾಗುತ್ತದೆಂದು ಮಹಿಳೆಯರು ಕೈ ಜೋಡಿಸುತ್ತಾರೆ. ಆದರೆ, ಪುರುಷರು ಇದನ್ನು ದೂರದಿಂದ ನೋಡುತ್ತಾರೆ.
ಫೆ. 21ರಂದು ಜಾತ್ರೆ:

ತಾಲೂಕಿನ ಮುದೇನೂರು ಗ್ರಾಮದ ಉಮಾಚಂದ್ರಮೌಳೇಶ್ವರ ಮಾಂಗಲ್ಯ ಮಂದಿರದ ಲಿ.ಡಾ. ಚಂದ್ರಶೇಖರ ಮಹಾಸ್ವಾಮಿಗಳು, ಲಿ. ಶಶಿಧರ ಮಹಾಸ್ವಾಮಿಗಳವರ ದಿವ್ಯ ಪ್ರಕಾಶದಲ್ಲಿ ಜೋಗೂರುನ ಮರುಳಸಿದ್ಧ ದೇವರು ದಿವ್ಯ ಸಾನಿಧ್ಯದಲ್ಲಿ ಫೆ. 21ರಂದು ಮಹಾ ರಥೋತ್ಸವ, ಧರ್ಮಸಭೆ. ಉಚಿತ ಆರೋಗ್ಯ ತಪಾಸಣಾ ಶಿಬಿರ. ಫೆ. 22ರಂದು ಸುಮಂಗಲೆ ಮಹಿಳೆಯರಿಂದ ಪಾರ್ವತಿ ರಥೋತ್ಸವ, ಧರ್ಮಸಭೆ.
ಫೆ. 23ರಂದು ಕುಮಾರಿಯರಿಂದ ಗೌರಿ ರಥೋತ್ಸವ, ಎತ್ತುಗಳಿಂದ ೧.೨ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಜರುಗುವುದು. ಫೆ ೨೨ರಂದು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಸಂಜೆ ಕೊಪ್ಪಳದ ಶ್ರೀ ಅಭಿನವ ಮೇಲೋಡಿಸ್ ಆರಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮ. ಫೆ. 23ರಂದು ಕಾಮಿಡಿ ಕಿಲಾಡಿಗಳಿಂದ ಹಾಸ್ಯ ಹಾಗೂ ರಸಮಂಜರಿ ಕಾರ್ಯಕ್ರಮ. ಫೆ. ೨೪ರಂದು ಶ್ರೀ ಮಠದ ವಿಜಯ ಚಂದ್ರಶೇಖರ ಮಹಾಸ್ವಾಮಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.