ಶ್ರೀ ಸಿದ್ಧಾರೂಢರಿಗೆ ಕೌದಿ ಪೂಜೆ ನೆರವೇರಿಸಿದ ಭಕ್ತಸಮೂಹ

ಸಿದ್ದಾರೂಢ
Advertisement

ಹುಬ್ಬಳ್ಳಿ: ಇಲ್ಲಿನ ಶ್ರೀ ಸಿದ್ಧಾರೂಢಮಠದಲ್ಲಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಮಂಗಳವಾರ ಸಂಜೆ ಶ್ರೀ ಸಿದ್ಧಾರೂಢರಿಗೆ `ಕೌದಿ ಪೂಜೆ’ ನೆರವೇರಿಸುವ ಮೂಲಕ ಉತ್ಸವ ಸಮಾರೋಪಗೊಂಡಿತು.

ಶ್ರೀ ಸಿದ್ಧಾರೂಢರಿಗೆ ಅರ್ಪಿಸಲು ನಾಡಿನ ವಿವಿಧ ಭಾಗಗಳಿಂದ ಭಕ್ತರು ತಂದಿದ್ದ ಹಾಗೂ ಶ್ರೀಮಠದ ಟ್ರಸ್ಟ್ ಕಮೀಟಿ ತಯಾರಿಸಿದ್ದ ಕೌದಿಗಳನ್ನು ಶ್ರೀ ಸಿದ್ಧಾರೂಢರಿಗೆ ಹಾಗೂ ಅವರ ಶಿಷ್ಯರಾದ ಗುರುನಾಥರೂಢರಿಗೆ ಅರ್ಪಿಸಲಾಯಿತು. ವಿವಿಧ ಬಣ್ಣಗಳಲ್ಲಿ ರೂಪಗೊಂಡ ಹತ್ತಾರು ಕೌದಿಗಳನ್ನು ಆರೂಢರಿಗೆ ಅರ್ಪಿಸಿ ಭಕ್ತರು ಕೃತಾರ್ಥ ಭಾವನೆ ಹೊಂದಿದ್ದರು.

ಶ್ರೀ ಸಿದ್ಧಾರೂಢರು ಜಗತ್ತಿಗೆ ಸರಳ ಬದುಕಿನ ಸಾರ್ಥಕತೆಯ ಸಂದೇಶ ಸಾರಿದವರು. ಅವರು ಧಡಿ ಧೋತರ ಧರಿಸುತ್ತಿದ್ದರು. ಕೌದಿಯನ್ನು ಮಲಗುವಾಗ ಹೊದ್ದುಕೊಳ್ಳುತಿದ್ದರು. ಅಂತೆಯೇ ಶ್ರೀ ಸಿದ್ಧಾರೂಢರ ಸರಳ ಬದುಕಿನ ಪ್ರತೀಕವಾಗಿ ಕೌದಿಪೂಜೆಯನ್ನು ಶ್ರೀಮಠದ ಟ್ರಸ್ಟ್ ಕಮೀಟಿ ನೆರವೇರಿಸಿಕೊಂಡು ಬಂದಿದ್ದು, ಈ ಬಾರಿಯೂ ಟ್ರಸ್ಟ್ ಅಧ್ಯಕ್ಷ ಧರಣೇಂದ್ರ ಜವಳಿ ಅವರ ನೇತೃತ್ವದಲ್ಲಿ ಕೌದಿ ಪೂಜೆ ಕಾರ್ಯಗಳು ನಡೆದವು. ಟ್ರಸ್ಟ್ ವೈಸ್ ಚೇರಮನ್ ಡಾ.ಗೋವಿಂದ ಮಣ್ಣೂರ, ಧರ್ಮದರ್ಶಿಗಳಾದ ಕೆ.ಎಲ್.ಪಾಟೀಲ್ ಶಿವರುದ್ರಪ್ಪ ಉಕ್ಕಲಿ, ಗಣಪತಿ ಶಿ.ನಾಯಕ, ಮಹೇಶಪ್ಪ ಹನಗೋಡಿ, ಜಗದೀಶ ಲ.ಮಗಜಿಕೊಂಡಿ, ಡಿ.ಡಿ.ಮಾಳಗಿ, ಶಾಮಾನಂದ ಬಾ ಪೂಜೇರಿ, ಹನುಮಂತ ತಮ್ಮಾಜಿ ಕೊಟಬಾಗಿ, ಕೊಟ್ಟೂರೇಶ್ವರ ತೆರಗುಂಟ, ಪ್ರಕಾಶ ಸಿ.ಉಡಿಕೇರಿ ಹಾಗೂ ಮ್ಯಾನೇಜರ್ ಈರಣ್ಣ ತುಪ್ಪದ ಇದ್ದರು.

ಸಿದ್ದಾರೂಢ
ಹುಬ್ಬಳ್ಳಿ ಶ್ರೀ ಸಿದ್ಧಾರೂಢಮಠದಲ್ಲಿ ಮಂಗಳವಾರ ಸಂಜೆ ಶ್ರೀ ಸಿದ್ಧಾರೂಢರ ಶಿಷ್ಯರಾದ ಶ್ರೀ ಗುರುನಾಥರೂಢರಿಗೆ ಕೌದಿ ಪೂಜೆ ನೆರವೇರಿಸಿದ ನೋಟ
ಸಿದ್ದಾರೂಢ