ಕನ್ನಡದಲ್ಲಿ ವಾದ ಮಂಡನೆ ನಾಡು ನುಡಿ ಅಭಿಮಾನದ ಸಂಕೇತ: ಸಭಾಪತಿ ಹೊರಟ್ಟಿ

ಹೊರಟ್ಟಿ
Advertisement

ಹುಬ್ಬಳ್ಳಿ : ಭಾವಿ ವಕೀಲರು ಕನ್ನಡದಲ್ಲಿ ವಾದ ಮಂಡನೆಯ ಪ್ರಾವೀಣ್ಯತೆ ಪಡೆದುಕೊಳ್ಳಬೇಕು. ಕನ್ನಡದಲ್ಲಿ ವಾದ ಮಂಡನೆ ಮಾಡುವುದು ನಾಡು ನುಡಿ ಅಭಿಮಾನದ ಸಂಕೇತ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ – 2023 ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯದಲ್ಲಿ ಕನ್ನಡದಲ್ಲಿ ವಾದ ಮಂಡನೆ ಮಾಡುವುದರಿಂದ ಎಲ್ಲರಿಗಿಂತ ಕಕ್ಷಿದಾರರಿಗೆ ಹೆಚ್ಚು ಅನುಕೂಲವಾಗುತ್ತದೆ. ಪ್ರಕರಣ ಕುರಿತ ವಿಷಯ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕನ್ನಡದಲ್ಲಿ ವಾದ ಮಂಡನೆ ಆರಂಭಿಕವಾಗಿ ಕಷ್ಟವಾಗಬಹುದು. ಆದರೆ, ಅಸಕ್ತಿಯಿಂದ ರೂಢಿಸಿಕೊಂಡರೆ ಸಾಧ್ಯವಾಗುತ್ತದೆ. ಕನ್ನಡ ಉಳಿಸಿ ಬೆಳೆಸುವ ಕಾರ್ಯ ಕಾನೂನು ವಿದ್ಯಾರ್ಥಿಗಳು ಭವಿಷ್ಯದ ವೃತ್ತಿ ಜೀವನದಲ್ಲೂ ಅನುಸರಿಸಬೇಕು ಎಂದರು. ಕನ್ನಡ ಉಳಿಸಿ ಬೆಳೆಸಲು ಸರ್ಕಾರ ತೀರ್ಮಾನ ಮಾಡಿದೆ. ಆಡಳಿತ ವ್ಯವಸ್ಥೆ, ಶಿಕ್ಷಣ, ಸಾರ್ವಜನಿಕ ಫಲಕ ಪ್ರದರ್ಶನ ಸೇರಿದಂತೆ ಎಲ್ಲ ಕಡೆ ಕನ್ನಡವೇ ಮೊದಲು ಎಂಬ ನಿರ್ಧಾರ ಮಾಡಿದೆ. ಎಲ್ಲರೂ ಸಹಕರಿಸಬೇಕು ಎಂದರು.
ಆಘಾತಕಾರಿ ಸಂಗತಿ :
ನಿನ್ನೆ ಮುಗಿದ ಅಧಿವೇಶನ ವೇಳೆಯಲ್ಲಿ ಕನ್ನಡ ಜಾರಿ ಕುರಿತು ಚರ್ಚೆ ನಡೆಯಿತು. ಕಡತದಲ್ಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಆಘಾತವಾಯಿತು. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ 23 ಕ್ಕೆ ಇಳಿದಿದೆ. ಹೀಗಾದರೆ ಭಾಷೆ ಉಳಿವು ಹೇಗೆ ಸಾಧ್ಯ. ಕನ್ನಡಿಗರೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು ಎಂದು ಕಳವಳ ವ್ತಕ್ತಪಡಿಸಿದರು. ತಮಿಳುನಾಡಿನಲ್ಲಿ, ಮಹಾರಾಷ್ಟ್ರದಲ್ಲಿ, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಅಲ್ಲಿನ ಮಾತೃ ಭಾಷೆಗೆ ಆದ್ಯತೆ. ಇಂಗ್ಲಿಷ್ ಫಲಕ ಕಾಣಸಿಗುವುದು ವಿರಳ. ಆದರೆ, ನಮ್ಮಲ್ಲಿ ತದ್ವಿರುದ್ಧ. ಯಾಕೆಂದರೆ ನಾವು ಬಹಳ ಉದಾರಿಗಳು. ಬರೀ ಉದಾರಿಗಳಾದರೆ ಕನ್ನಡ ಉಳಿಸಿ ಬೆಳೆಸುವವರು ಯಾರು ಎಂದು ಪ್ರಶ್ನಿಸಿದರು. ಇಂಥ ಸನ್ನಿವೇಶದಲ್ಲಿ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಆಯೋಜನೆ ನಿಜವಾಗಿಯೂ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.ಅಧ್ಯಕ್ಷತೆವಹಿಸಿದ್ದ ಕಾನೂನು ವಿವಿ ಕುಲಪತಿ ಡಾ.ಸಿ.ಬಸವರಾಜು ಮಾತನಾಡಿ, ಉತ್ತಮ ವಕೀಲರನ್ನು ರೂಪಿಸುವುದು ವಿವಿಯ ಕರ್ತವ್ಯ. ಸಮಾಜ ಪರಿವರ್ತನೆ, ಏಳ್ಗೆಯಲ್ಲಿ ವಕೀಲರ ಪಾತ್ರ ಮಹತ್ವದ್ದು. ಈ ದಿಶೆಯಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಅದರ ಭಾಗವಾಗಿ ಈ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯೂ ಒಂದು ಎಂದರು.
ರಾಜ್ಯದ 48 ಕಾನೂನು ಕಾಲೇಜಿಗಳಿಂದ ವಿದ್ಯಾರ್ಥಿಗಳು ಈ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು. ಕಾನೂನು ವಿವಿ ಕುಲಸಚಿವ ( ಆಡಳಿತ ವಿಭಾಗ) ಮೊಹಮದ್ ಜುಬೇರ್, ಮೌಲ್ಯಮಾಪನ ವಿಭಾಗಸ ಕುಲಸಚಿವರಾದ ಡಾ.ರತ್ನಾ ಆರ್. ಭರಮಗೌಡರ ವೇದಿಕೆಯಲ್ಲಿದ್ದರು. ಕಾನೂನು ವಿವಿ ಡೀನ್ ಡಾ.ಜಿ.ಬಿ ಪಾಟೀಲ ಸ್ವಾಗತಿಸಿದರು.