ಸದ್ಭಾವದ ಕರ್ಮಗಳೆಲ್ಲ ಪರಮ ಪಾವನ

ಗುರುಬೋಧೆ
Advertisement

ಯಾವಾಗಲೂ ಎಲ್ಲರ ಎಲ್ಲ ಸಂಗತಿಗಳ ಮತ್ತು ಎಲ್ಲದರ ಬಗ್ಗೆ ಉತ್ತಮ ವಿಚಾರಗಳನ್ನು ಹೊಂದಿರುವುದು ಸದ್ಭಾವ ಎಂದು ಕರೆಯಲ್ಪಡುತ್ತದೆ. ಮನುಷ್ಯನ ದೇಹದ ಮತ್ತು ಮನಸ್ಸಿನ ಎಲ್ಲ ಆರೋಗ್ಯಕರ ಬೆಳವಣಿಗೆಗೆ ಇದು ಅತ್ಯಂತ ಮುಖ್ಯ. ಅಂತೆಯೇ ವೀರಶೈವ ಧರ್ಮಗ್ರಂಥವಾದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ

ಭಾವನಾವಿಹಿತಂ ಕರ್ಮ ಪಾವನಾದಪಿ ಪಾವನಂ |
ತಸ್ಮಾದ್ ಭಾವನಯಾ ಯುಕ್ತಂ ಪರಧರ್ಮಂ ಸಮಾಚರೇತ್ ||

ಎಂದು ತಿಳಿಸಲಾಗಿದೆ. ಸದ್ಭಾವದಿಂದ ಮಾಡುವ ಸತ್ಕರ್ಮವು ಪರಮ ಪವಿತ್ರವಾದುದು. ಆದ್ದರಿಂದ ಪ್ರತಿಯೊಂದು ಕರ್ಮವನ್ನು ಸದ್ಭಾವದಿಂದ ಕೂಡಿಕೊಂಡು ಆಚರಿಸಬೇಕು. ಇದು ಈ ಸೂಕ್ತಿಯ ತಾತ್ಪರ್ಯ. ಧಾರ್ಮಿಕವಾಗಿ ನಾವು ಯಾವ ಕರ್ಮವನ್ನು ಮಾಡುತ್ತೇವೆ ಎನ್ನುವುದಕ್ಕಿಂತ ಯಾವ ಭಾವದಿಂದ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಏಕೆಂದರೆ ನಮಗೆ ನಮ್ಮ ಕರ್ಮಕ್ಕೆ ಅನುಗುಣವಾದ ಫಲವನ್ನು ನೀಡುವಾಗ ಕೇವಲ ನಾವು ಯಾವ ಕರ್ಮವನ್ನು ಮಾಡಿದ್ದೇವೆ ಎಂಬುದನ್ನು ಮಾತ್ರ ಪರಿಗಣಿಸುವುದಿಲ್ಲ. ಬದಲಾಗಿ, ಯಾವ ಭಾವದಿಂದ ಮಾಡಿದ್ದೇವೆ ಎಂಬುದೂ ಕೂಡ ಪರಿಗಣಿಸಲ್ಪಡುತ್ತದೆ. ಹಲವಾರು ಬಾರಿ ಪಿಡಿಸಿ ಭಿಕ್ಷೆ ಬೇಡುವ ಭಿಕ್ಷುಕರಿಗೆ ನಾವು ಕ್ರೋಧದಿಂದ “ತೆಗೆದುಕೊಂಡು ಹಾಳಾಗಿ ಹೋಗು” ಎಂದು ಬೈದು ಸಿಟ್ಟಿನಿಂದ ನೀಡಿದರೆ ಅದು ದಾನ ಆಗುವುದಿಲ್ಲ. ಕೊಡುವ ಕರ್ಮ ಪೂರ್ಣವಾಗಿರುತ್ತದೆ ಆದರೆ ಅದರ ಹಿಂದಿನ ಭಾವ ಕ್ರೋಧ ಪೂರ್ಣವಾಗಿರುವುದರಿಂದ ಅದು ಉತ್ತಮ ಫಲವನ್ನು ನೀಡುವುದಿಲ್ಲ. ಇದಕ್ಕೆ ಬದಲಾಗಿ ನಮ್ಮ ಕೈಲಾದುದನ್ನು ಕೊಡುತ್ತಾ “ಇದರಿಂದ ನಿನ್ನ ಜೀವನ ಸಂತೋಷವಾಗಲಿ” ಎಂದು ಹಾರೈಸಿ ನೀಡಿದರೆ ಅದು ನಿಜವಾದ ದಾನವಾಗುತ್ತದೆ. ಹೀಗೆ ಭಾವಶುದ್ಧಿಯಿಂದ ಕರ್ಮಶುದ್ಧಿಯೂ ಇರುತ್ತದೆ. ಯಾವುದೇ ಕ್ರಿಯೆ ಮಾಡಲಿ ಅದರಲ್ಲಿ ಒಳ್ಳೆಯ ಭಾವನೆ ಇದ್ದರೆ ಅದು ಸಾರ್ಥಕತೆ ಪಡೆಯುತ್ತದೆ. ಅದಕ್ಕಾಗಿಯೇ ಯದ್ಭಾವಂ ತದ್ಭವತಿ ಎಂದೂ ಕೂಡ ಆರ್ಯೋಕ್ತಿ ಇದೆ. ಭಾವನೆಗಳು ಹೇಗೆ ಇರುತ್ತವೆಯೋ ಹಾಗೇಯೇ ಆಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿ ಒಳ್ಳೆಯ ಭಾವನೆ ಮತ್ತು ಒಳ್ಳೆಯ ಮನಸ್ಸಿನಿಂದ ಕಾರ್ಯಗಳನ್ನು ಮಾಡುವದರಿಂದ ಒಳ್ಳೆಯ ಫಲಿತವನ್ನೇ ಪಡೆಯಬಹುದಾಗುತ್ತದೆ. ಅದು ಪವಿತ್ರವೂ ಆಗಿರುತ್ತದೆ.