ಸರ್ಕಾರದಿಂದ ಯೋಜನೆಗಳ ಹೊಳೆಯೇ ಹರಿಯುತ್ತಿದೆ: ಸವದಿ

Advertisement

ಬಾಗಲಕೋಟ: ಸಸಾಲಟ್ಟಿ ಏತ ನೀರಾವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಾರಣ. ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳೊಂದಿಗೆ ಕ್ಷೇತ್ರದ ಚಿತ್ರಣ ಬದಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಾಕಷ್ಟು ಅನುದಾನ ನೀಡುವ ಮೂಲಕ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಿ ಯೋಜನೆಗಳ ಹೊಳೆಯೇ ಹರಿಸಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ಪ್ರಶಂಸೆ ವ್ಯಕ್ತಪಡಿಸಿದರು.
ರಸ್ತೆಗಾಗಿ ಕ್ಷೇತ್ರದಲ್ಲಿ 600 ಕೋಟಿ ರೂ.ಗಳಷ್ಟು ಅನುದಾನ ಬಳಕೆಯಾಗಿದೆ. 41 ಕೋಟಿ ರೂ.ಗಳಲ್ಲಿ ಕಿನಾಲ್ ರಸ್ತೆ, 60 ಕೋಟಿ ರೂ.ಗಳಲ್ಲಿ ರೈತರ ಜಮೀನು ರಸ್ತೆ ಸುಧಾರಣೆ, 180 ಕೋಟಿ ರೂ.ಗಳಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ 187 ಕಾಮಗಾರಿ ಮೂಲಕ ನೇಕಾರ ಕ್ಷೇತ್ರವಾಗಿರುವ ತೇರದಾಳಕ್ಕೆ ನೇಕಾರ ಸಮ್ಮಾನ್ ಯೋಜನೆಯಡಿ 60 ಕೋಟಿ ರೂ.ಗಳಷ್ಟು 1.5 ಲಕ್ಷ ನೇಕಾರರಿಗೆ ತಲಾ 5 ಸಾವಿರ ರೂ.ಗಳಷ್ಟು ಖಾತೆಗೆ ನೇರವಾಗಿ ಜಮೆಯಾಗಿದೆ.
ಅಲ್ಲದೆ ಉಚಿತ ವಿದ್ಯುತ್, 2 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲನೇಕಾರರಿಗೆ ಸಹಕಾರಿಯಾಗಿದ್ದು, ಇದೀಗ ಜವಳಿ ಪಾರ್ಕ್ ಜೊತೆಗೆ ನೇಕಾರರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಅತ್ಯಂತ ಸ್ತುತ್ಯಾರ್ಹವಾದುದು ಎಂದು ಸವದಿ ಸಂತಸಪಟ್ಟರು.
ಕ್ಷೇತ್ರದ 4 ಗ್ರಾಮಗಳಲ್ಲಿ ಪದವಿಪೂರ್ವ ಮಹಾವಿದ್ಯಾಲಯ ನಿರ್ವಹಣೆ ಜೊತೆಗೆ ನೆರೆಯ ಜಮಖಂಡಿಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.ಕ್ಷೇತ್ರಾದ್ಯಂತ ದೇವಸ್ಥಾನ ಹಾಗು ಸಮುದಾಯ ಭವನಗಳ ನಿರ್ಮಾಣಕ್ಕೆ 37.5 ಕೋಟಿ ರೂ.ಗಳಷ್ಟು ಹಣ ಬಿಡುಗಡೆಗೊಳಿಸಿ ಶೇ.90 ರಷ್ಟು ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಸವದಿ ಹೇಳಿದರು. ಮುಂದಿನ ವಾರದಲ್ಲಿ ಕುಲಹಳ್ಳಿ-ಹುನ್ನೂರ ಹಾಗು ವೆಂಕಟೇಶ್ವರ ಏತ ನೀರಾವರಿಗೆ ಸಚಿವ ಗೋವಿಂದ ಕಾರಜೋಳರಿಂದ ಉದ್ಘಾಟನೆಗೊಳ್ಳಲಿದೆ ಎಂದರು.