ಕಾಂಗ್ರೆಸ್‌ನಿಂದ ರಾಜ್ಯ ನಾಯಕರಿಗೆ ಅಪಮಾನ

ಮೋದಿ
Advertisement

ಬೆಳಗಾವಿ: ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಕರ್ನಾಟಕದ ನಾಯಕರನ್ನು ಅಪಮಾನ ಮಾಡುತ್ತಲೇ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ವೀರೇಂದ್ರ ಪಾಟೀಲ ಮತ್ತು ಎಸ್. ನಿಜಲಿಂಗಪ್ಪನವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯನ್ನು ಕರ್ನಾಟಕದ ಜನ ಮರೆತಿರಲಾರರು. ಅಪಮಾನದ ಸರಣಿ ಈಗಲೂ ಮುಂದುವರೆದಿದ್ದು, ಕಳೆದ ದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪಕ್ಷ ನಡೆಸಿಕೊಂಡ ರೀತಿ ನಿಜಕ್ಕೂ ವಿಷಾದನೀಯ ಎಂದರು.
ಛತ್ತೀಸಗಡದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಸಿಲಿನಲ್ಲಿ ಬೆಂಡಾಗಿ ನಿಂತ ಖರ್ಗೆಯವರನ್ನು ಕಡೆಗಣಿಸಿ ಅವರ ಪಕ್ಕದಲ್ಲಿ ನಿಂತವರಿಗೆ ಕೊಡೆ ಹಿಡಿದಿದ್ದ ದೃಶ್ಯ ಕಂಡಾಗ ನಿಜಕ್ಕೂ ನನ್ನ ಮನಸು ಮರುಗಿತು. ರಾಜಕೀಯ ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ನನಗೆ ಗೌರವ ಅಭಿಮಾನ ಇದೆ ಎಂದು ಹೇಳಿದ ಮೋದಿ, ಖರ್ಗೆಯವರು ಕೇವಲ ನಾಮ್ ಕೆ ವಾಸ್ತೆ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ರಿಮೋಟ್ ಕಂಟ್ರೋಲ್ ಯಾರ ಕೈಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ಸಿಗರು ಮೋದಿಯವರ ಖಬ್ರ ಖುಲೇಗೇ ಅಂತಾರೆ, ಆದರೆ ದೇಶದ ಜನ ಫಿರ್ ಸೆ ಕಮಲ್ ಖಿಲೇಗಾ… ಎಂದು ಹೇಳುತ್ತಿದ್ದಾರೆ. ಜನಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಮತ್ತೊಮ್ಮೆ ರಾಜ್ಯದಲ್ಲಿ ಕಮಲ ಅರಳಲಿದೆ ಎಂದು ಸೂಚ್ಯವಾಗಿ ಹೇಳಿದರು.