ಬಿಜೆಪಿಯದು ಅನೈತಿಕ ಸರ್ಕಾರ: ಸಿದ್ದರಾಮಯ್ಯ

siddu
Advertisement

ಬಾಗಲಕೋಟೆ: ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬಂತೆ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪಂದನೆ ಇಲ್ಲದೆ ಶಾಸಕರು ಬೇಸತ್ತಿದ್ದರು. ಅತ್ತ ಬಿಜೆಪಿ ಅವರು ಅಧಿಕಾರ ರಚಿಸಲು ಸಿದ್ಧರಾಗಿದ್ದರು. ಆ ಕಾರಣದಿಂದಾಗಿ ಬಿಜೆಪಿ ಆಪರೇಷನ್ ಕಮಲ ಮಾಡಿಕೊಂಡು ಅನೈತಿಕ ಸರ್ಕಾರ ರಚಿಸಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಜಿಲ್ಲೆಯ ಜಮಖಂಡಿ, ಮುಧೋಳ, ತೇರದಾಳ ಕ್ಷೇತ್ರಗಳಲ್ಲಿ ನಡೆದ ಪ್ರಜ್ಞಾಧ್ವನಿ ಸಮಾವೇಶದಲ್ಲಿ ಭಾಗಿಯಾದ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೋಮುವಾದಿ ಸರ್ಕಾರವನ್ನು ಅಧಿಕಾರಕ್ಕೆ ತರಲೇಬಾರದು ಎಂಬ ಕಾರಣಕ್ಕಾಗಿ ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಿತು. ಆದರೆ ಕುಮಾರಸ್ವಾಮಿಯಿಂದ ಶಾಸಕರಿಗೆ ಸ್ಪಂದನೆ ಇರಲಿಲ್ಲ. ಅತ್ತ ಯಡಿಯೂರಪ್ಪ ಸರ್ಕಾರ ರಚಿಸಲು ದುಡ್ಡು ಹಿಡ್ಕೊಂಡು ನಿಂತಿದ್ದರು. 25 ಕೋಟಿ ರೂ.ಗಳಂತೆ ನೀಡಿ ಶಾಸಕರನ್ನು ಖರೀದಿಸಿದರು ಎಂಬ ಗಂಭೀರ ಆರೋಪ ಮಾಡಿದರು.
ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂಬಂತೆ ನಮ್ಮ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರು ಇದನ್ನು ಆಪರೇಷನ್ ಕಮಲ ಎಂದರೂ ಅದೊಂದು ಅನೈತಿಕ ಸರ್ಕಾರ ಎಂದು ಅಸಮಾಧಾನ ಹೊರಹಾಕಿದರು.