ಚುನಾವಣಾ ಆಯುಕ್ತರ ನೇಮಕಕ್ಕೆ ಸಮಿತಿ

ಸುಪ್ರೀಂ ಕೋರ್ಟ್‌
Advertisement

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ನೇಮಕಕ್ಕೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು, ಚುನಾವಣಾ ಆಯುಕ್ತರ ನೇಮಕಕ್ಕೆ ಹೊಸ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಪ್ರಧಾನಮಂತ್ರಿ, ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳು ಇರುತ್ತಾರೆ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಈ ನೇಮಕಾತಿಗಳಿಗೆ ಸಂಸತ್ತು ಕಾನೂನು ರಚಿಸುವವರೆಗೆ ಈ ನಿಯಮವು ಮುಂದುವರಿಯುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿ ಕುಮಾರ್ ಅವರು ಇದ್ದರು. ಐವರು ನ್ಯಾಯಮೂರ್ತಿಗಳ ಸರ್ವಾನುಮತದ ತೀರ್ಪಿನಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಆಯ್ಕೆ ಮಾಡುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈಗ ಚಾಲ್ತಿಯಲ್ಲಿ ಇರುವ ವ್ಯವಸ್ಥೆಯಲ್ಲಿ ಕಾರ್ಯದರ್ಶಿ, ಮುಖ್ಯಕಾರ್ಯ ದರ್ಶಿ ದರ್ಜೆಯ ಅಧಿಕಾರಿಗಳನ್ನು ಚುನಾವಣಾ ಆಯುಕ್ತ ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡುವಂತೆ ಕೇಂದ್ರ ಸಚಿವ ಸಂಪುಟವು ಶಿಫಾರಸು ಮಾಡುತ್ತದೆ. ಆ ಶಿಫಾರಸಿನಂತೆ ರಾಷ್ಟ್ರಪತಿಯು ಆಯುಕ್ತರನ್ನು ನೇಮಕ ಮಾಡುತ್ತಾರೆ. ಅರ್ಜಿಯ ವಿಚಾರಣೆ ವೇಳೆ ಪೀಠವು, ‘ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿರಬೇಕು’ ಎಂದು ಅಭಿಪ್ರಾಯಪಟ್ಟಿದೆ. “ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಐತಿಹಾಸಿಕ ತೀರ್ಪಿನಲ್ಲಿ ಭವಿಷ್ಯದಲ್ಲಿ ಎಲ್ಲಾ ಚುನಾವಣಾ ಆಯುಕ್ತರ ನೇಮಕಾತಿಗಳನ್ನು ಕೇವಲ ಸರ್ಕಾರದಿಂದ ಮಾಡಬಾರದು, ಬದಲಿಗೆ ಪಿಎಂ, ಲೋಪಿ ಮತ್ತು ಸಿಜೆಐ ಒಳಗೊಂಡ ಸಮಿತಿಯಿಂದ ಮಾಡಬೇಕೆಂದು ನಿರ್ದೇಶಿಸಿದೆ” ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.