ಭಯೋತ್ಪಾದಕ ಕೃತ್ಯಕ್ಕೆ ಹವಾಲಾ ಜಾಲದಿಂದ ಫಂಡಿಂಗ್

NIA
Advertisement

ಮಂಗಳೂರು: ಭಯೋತ್ಪಾದಕ ಕೃತ್ಯಕ್ಕೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ಜಾಲವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬೇಧಿಸಿದೆ.
ಗಲ್ಫ್ ರಾಷ್ಟ್ರಗಳಿಂದ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳಕ್ಕೆ ಪೂರೈಕೆಯಾಗುತ್ತಿದ್ದ ಹಣವನ್ನು ಸದ್ದಿಲ್ಲದೆ ವಿಧ್ವಂಸಕ ಕೃತ್ಯಕ್ಕಾಗಿ ಇಸ್ಲಾಮಿಕ್ ಭಯೋತ್ಪಾದಕರಿಗೆ ಪೂರೈಸುತ್ತಿದ್ದ ಜಾಲವನ್ನು ಎನ್‌ಐಎ ಅಧಿಕಾರಿಗಳು ಬಯಲಿಗೆಳೆದಿದ್ದು, ಈಗಾಗಲೇ ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನಿಂದ ಆರು ಮಂದಿಯನ್ನು ಬಂಧಿಸಿದ್ದಾರೆ.
ಕಳೆದ ವರ್ಷದ ಜುಲೈ ೧೨ ರಂದು ಬಿಹಾರದ ಪಾಟ್ನಾಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ ವೇಳೆ ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸುತ್ತಿದ್ದಾಗ ಫುಲ್ವಾರಿ ಶರೀಫ್‌ನಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವುದು, ದೇಶ ವಿರೋಧಿ ಚಟುವಟಿಕೆಯಲ್ಲಿ ನಿರತರಾಗಿರುವುದು ಮತ್ತು ೨೦೪೭ರಲ್ಲಿ ದೇಶವನ್ನು ಇಸ್ಲಾಮಿಕ್ ಆಗಿಸುವ ಹುನ್ನಾರ ಹೊಂದಿರುವ ಪುಸ್ತಕ, ಕರಪತ್ರಗಳು ಪತ್ತೆಯಾಗಿದ್ದವು, ಇದರ ಹಿಂದೆ ಬಿದ್ದು ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು ಹಣ ಪೂರೈಕೆಯ ಜಾಲವನ್ನು ಪತ್ತೆ ಮಾಡಿದ್ದಾರೆ.
ಪಿಎಫ್‌ಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಆರೋಪಿಗಳು ಹೊರ ದೇಶಗಳಿಂದ ಪೂರೈಕೆ ಆಗುತ್ತಿದ್ದ ಅಕ್ರಮ ಹಣವನ್ನು ಸದ್ದಿಲ್ಲದೆ ವಿವಿಧ ಮೂಲಗಳ ಮೂಲಕ ಪಿಎಪ್‌ಐ ನಾಯಕರಿಗೆ ಮತ್ತು ದೇಶದ್ರೋಹಿ ಕೃತ್ಯಗಳಿಗೆ ಸರಬರಾಜು ಮಾಡುತ್ತಿದ್ದರು. ಎನ್‌ಐಎ ಅಧಿಕಾರಿಗಳು ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಮಂಜೇಶ್ವರದಲ್ಲಿ ಕಾರ್ಯಾಚರಣೆ ನಡೆಸಿದ್ದು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಎರಡು ಜಿಲ್ಲೆಗಳ ಎಂಟು ಕಡೆಗಳಲ್ಲಿ ದಾಳಿ ಕಾರ್ಯ ನಡೆದಿದ್ದು, ಈ ವೇಳೆ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದರು.
ಪಾಟ್ನಾದ ಫುಲ್ವಾರಿ ಶರೀಫ್ ಮತ್ತು ಮೋತಿಹಾರಿ ಪ್ರದೇಶದಲ್ಲಿ ಸೆರೆಸಿಕ್ಕಿದ್ದ ಪಿಎಫ್‌ಐ ಕಾರ್ಯಕರ್ತರನ್ನು ವಿಚಾರಣೆ ನಡೆಸಿದಾಗ ಭಯಾನಕ ವಿಚಾರಗಳು ಹೊರಬಂದಿದ್ದವು. ಭಯೋತ್ಪಾದಕ ಕೃತ್ಯ ಎಸಗಲು ತರಬೇತಿ ನೀಡುತ್ತಿದ್ದ ವಿಚಾರವೂ ಹೊರಬಂದಿದೆ. ಇದಕ್ಕೆ ಸಂಬಂಧಿಸಿ ಫುಲ್ವಾರಿ ಶರೀಫ್‌ನಲ್ಲಿ ಏಳು ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳಿಗೆ ಹಣಕಾಸು ಪೂರೈಕೆ ಸಂಬಂಧಿಸಿ ಕೇರಳ, ತಮಿಳುನಾಡಿನಲ್ಲಿ ಈ ಹಿಂದೆ ಎನ್‌ಐಎ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ, ಬೇನಾಮಿ ಬ್ಯಾಂಕ್ ಖಾತೆಗಳಿಗೆ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನಿಂದ ಹಣ ಪೂರೈಕೆ ಆಗುತ್ತಿರುವುದನ್ನು ಬೆನ್ನತ್ತಿದ ಅಧಿಕಾರಿಗಳಿಗೆ ಪಾಣೆಮಂಗಳೂರಿನ ನಂದಾವರದ ನಾಲ್ವರು ಯುವಕರ ಕೃತ್ಯದ ಬಗ್ಗೆ ಶಂಕೆ ಮೂಡಿತ್ತು. ಈ ಕುರಿತು ನಿಗೂಢವಾಗಿ ತನಿಖೆ ನಡೆಸುತ್ತಿದ್ದ ಎನ್‌ಐಎ ಅಧಿಕಾರಿಗಳಿಗೆ ಇಕ್ಬಾಲ್ ಎಂಬಾತ ದುಬೈನಲ್ಲಿದ್ದು ಹಣ ಸಂಗ್ರಹ ಮಾಡುತ್ತಿರುವುದು ಮತ್ತು ಈ ಹಣವನ್ನು ಇತರ ನಾಲ್ವರು ಸಹಚರರಿಗೆ ಪೂರೈಕೆ ಮಾಡುತ್ತಿದ್ದುದು ಗಮನಕ್ಕೆ ಬಂದಿತ್ತು.
ಇಕ್ಬಾಲ್ ಎಂದಿನಂತೆ ದುಬೈನಿಂದ ಊರಿಗೆ ಮರಳಿರುವುದು ತಿಳಿಯುತ್ತಲೇ ಎನ್‌ಐಎ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಬಳಿಕ ನಾಲ್ವರನ್ನು ಬಂಟ್ವಾಳದ ಐಬಿಯಲ್ಲಿರಿಸಿ ವಿಚಾರಣೆ ನಡೆಸಿದ್ದು, ಬಳಿಕ ಖಚಿತ ಸಾಕ್ಷ್ಯಗಳೊಂದಿಗೆ ದೆಹಲಿಗೆ ಕರೆದೊಯ್ದಿದ್ದಾರೆ. ಇದೇ ವೇಳೆ ಇನ್ನೊಂದು ತನಿಖಾ ತಂಡ ಕಾಸರಗೋಡಿನ ಮಂಜೇಶ್ವರದಲ್ಲಿ ದಾಳಿ ನಡೆಸಿ ಒಬ್ಬನನ್ನು ಬಂಧಿಸಿದೆ.
ಇಕ್ಬಾಲ್ ಮತ್ತು ಆತನ ಸಹಚರರು ದುಬೈನಲ್ಲಿ ಅಕ್ರಮವಾಗಿ ಸಂಗ್ರಹ ಮಾಡುತ್ತಿದ್ದ ನಿಧಿಯನ್ನು ಭಾರತದ ವಿವಿಧ ಬ್ಯಾಂಕುಗಳ ಮೂಲಕ ಪಿಎಫ್‌ಐ ನಾಯಕರು ಮತ್ತು ಬಿಹಾರದಲ್ಲಿ ಸೆರೆಸಿಕ್ಕಿರುವ ಆರೋಪಿಗಳ ಖಾತೆಗಳಿಗೆ ರವಾನೆ ಮಾಡುತ್ತಿರುವುದನ್ನು ಎನ್‌ಐಎ ಪತ್ತೆ ಮಾಡಿದೆ.