ಸಣ್ಣ ಮಳೆಗೆ ದಶಪಥ ಹೆದ್ದಾರಿ ಜಲಾವೃತ: ಅಪಘಾತ, ವಾಹನ ಸವಾರರ ಪರದಾಟ

ದಶಪಥ
Advertisement

ಬೆಂಗಳೂರು: ಇತ್ತಿಚಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿನ್ನೆ ರಾತ್ರಿ ಸುರಿದ ವರ್ಷದ ಮೊದಲ ಸಣ್ಣ ಮಳೆಗೆ ಮತ್ತೆ ಜಲಾವೃತಗೊಂಡಿದೆ. ಹೆದ್ದಾರಿ ಹೊಂದಿಕೊಂಡಂತಿರುವ ರಾಮನಗರ ಜಿಲ್ಲೆಯ ಸಂಗನಬಸವನದೊಡ್ಡಿ ಬಳಿ ಜಲಾವೃತವಾಗಿದೆ. ಹೆದ್ದಾರಿಯಲ್ಲಿನ ಕೆಳಸೇತುವೆಯಲ್ಲಿ ನೀರು ನಿಂತಿರುವ ಪರಿಣಾಮ ಸರಣಿ ಅಪಘಾತಗಳಾಗಿದ್ದು, ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಹೆದ್ದಾರಿಯಲ್ಲಿ ಕೆಲ ಕಾಲ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ. ಇಷ್ಟು ಸಣ್ಣ ಮಳೆಗೆ ಹೆದ್ದಾರಿಯ ಸ್ಥಿತಿ ಹೀಗಾದರೆ ಮಳೆಗಾಲದಲ್ಲಿ ಇನ್ನೇನು ಗತಿ, ಅಧಿಕಾರಿಗಳು ಮಳೆ ನೀರು ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಮಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೆ ಶುಕ್ರವಾರ ಸಂಜೆ ಸುರಿದ ಸಾಧಾರಣ ಮಳೆಗೆ ರಸ್ತೆ ಜಲಾವೃತಗೊಂಡಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೆ ಹೆದ್ದಾರಿ ಉದ್ಘಾಟನೆ ಮಾಡಿರುವುದು ವಾಹನ ಸವಾರರನ್ನು ಕೆರಳಿಸಿದೆ. ನಮ್ಮ ವಾಹನಗಳಿಗೆ ಆಗುವ ನಷ್ಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರಿಸಿಕೊಡುತ್ತಾರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.