27ರಂದು ಅಂತಿಮ ತೀರ್ಮಾನ ಎಂದ ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿ
Advertisement

ಬೆಳಗಾವಿ(ಅಥಣಿ): ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಆದ್ದರಿಂದ ನಾನು ಮಾ. 27ರಂದು ಎಲ್ಲ ಸಮುದಾಯದವರ ಒಪ್ಪಿಗೆ ಪಡೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ನೀವು ಯಾವತ್ತೂ ನನ್ನ ಬೆಂಬಲವಾಗಿ ನಿಲ್ಲಿ ಎಂದು ಮುಸ್ಲಿಂ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮನವಿ ಮಾಡಿದರು.
ಅಥಣಿ ಪಟ್ಟಣದ ನೂರಾಣಿ ಹಾಲ್‌ನಲ್ಲಿ ಮುಸ್ಲಿಂ ಸಮುದಾಯದ ಭವನದಲ್ಲಿ ಮುಸ್ಲಿಂ ಮುಖಂಡರ ಸಭೆ ಕರೆದು ಮಾಧ್ಯಮದವರ ಜೊತೆ ಮಾತನಾಡಿದರು. ನಾನು ಮನೆಯಲ್ಲಿ ಸುಮ್ಮನೆ ಕುಳಿತಿದ್ದೆ. ಆದರೆ, ಕೆಲವರು ನನ್ನನ್ನು ಕೂರಲು ಬಿಡುತ್ತಿಲ್ಲ. ಹಾಗಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಅಭಿಪ್ರಾಯ ನನಗೆ ಮುಖ್ಯ. ನನಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಬರುವ 27ರ ಒಳಗಾಗಿ ತಾಲೂಕಿನ ಎಲ್ಲ ಸಮುದಾಯದ ಮುಖಂಡರ ಸಭೆ ಕರೆಯುತ್ತೇನೆ. ಅವರು ಅಥಣಿಯಿಂದ ಚುಣಾವಣೆ ಸ್ಪರ್ಧೆ ಮಾಡು ಎಂದರೆ ನಾನು ಪಕ್ಷದ ಟಿಕೆಟ್ ಕೇಳುತ್ತೇನೆ ಎಂದರು.
ಜನರು ಟಿಕೆಟ್ ಕೇಳು ಎಂದರೆ ನಾನು ಬಿ ಫಾರಂ ಕೇಳುತ್ತೇನೆ. ಪಕ್ಷದ ವರಿಷ್ಠರು ಬೇಡ ಎಂದರೆ ನಾನು ಅವರ ಮಾರ್ಗದಲ್ಲಿ ನಡೆಯುತ್ತೇನೆ. ಅಥಣಿ ತಾಲೂಕಿನ ಮುಸ್ಲಿಂ ಸಮುದಾಯ ನನ್ನ ಹೃದಯದಲ್ಲಿ ಅಚ್ಚೊತ್ತಿದೆ. ಎಲ್ಲಾ ಸಮುದಾಯದ ಒಪ್ಪಿಗೆ ಪಡೆದುಕೊಂಡು ಪಕ್ಷಕ್ಕೆ ತಿಳಿಸುತ್ತೇನೆ. ನೂರಕ್ಕೆ ನೂರರಷ್ಟು ಪಕ್ಷ ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಲಕ್ಷ್ಮಣ ಸವದಿ ನುಡಿದರು.
ಹಲವರು ನೀವು ಚುನಾವಣೆಗೆ ನಿಲ್ಲುತ್ತೀರಾ ಎಂದು ಕೇಳುತ್ತಿದ್ದಾರೆ. ಆದರೆ, ಈ ವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ನನಗೆ ಟಿಕೆಟ್ ಬೇಕು ಎಂದು ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.