ಮುರುಘಾ ಶ್ರೀಗಳಿಗೆ ಅನಾರೋಗ್ಯ: ವಿಚಾರಣೆ ಮುಂದೂಡಿಕೆ

ಮುರುಘಾ ಶ್ರೀ
Advertisement

ಚಿತ್ರದುರ್ಗ: ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ(ಪೋಕ್ಸೊ) ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಶಿವಮೂರ್ತಿ ಶರಣರು ತೀವ್ರ ಜ್ವರದಿಂದ ಬಳಲುತ್ತಿರುವುದರಿಂದ ದೋಷಾರೋಪ ನಿಗದಿಯ ವಿಚಾರಣೆಯನ್ನು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾರ್ಚ್‌ 30ಕ್ಕೆ ಮುಂದೂಡಿದೆ.
ಕಳೆದ ಮೂರು ‌ದಿನಗಳಿಂದ ಜ್ವರದಿಂದ ಶರಣರು ಬಳಲುತ್ತಿದ್ದಾರೆ. ಸೋಮವಾರ ರಾತ್ರಿ 101 ಡಿಗ್ರಿ ಜ್ವರ ಇತ್ತು. ಜಿಲ್ಲಾಸ್ಪತ್ರೆ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.
ಮಂಗಳವಾರ ದೋಷರೋಪ ನಿಗದಿ ವೇಳೆ ಶರಣರನ್ನು ವಿಡಿಯೋ‌ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಇದಕ್ಕೂ‌ ಮೊದಲು ವಕೀಲರು ಶರಣರ ಆರೋಗ್ಯ ‌ಸರಿ ಇಲ್ಲದ ಬಗ್ಗೆ‌ ವೈದ್ಯಕೀಯ ವರದಿ‌ ಸಲ್ಲಿಸಿದ್ದರು.
ಆರೋಪಿ ಅನಾರೋಗ್ಯಗೊಂಡಾಗ ದೋಷರೋಪ ನಿಗದಿಪಡಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಬಿ.ಕೆ. ಕೋಮಲ 30ಕ್ಕೆ ಮುಂದೂಡಿದರು.
ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮೊದಲ ಪ್ರಕರಣದ ದೋಷಾರೋಪ ನಿಗದಿ ಮಂಗಳವಾರ ನಡೆಯಬೇಕಿತ್ತು. ಶಿವಮೂರ್ತಿ ಶರಣರಿಗೆ ಅನಾರೋಗ್ಯ ಉಂಟಾಗಿದ್ದರಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲು ವಿನಾಯಿತಿ ನೀಡುವಂತೆ ವಕೀಲರು ಮನವಿ ಮಾಡಿಕೊಂಡಿದ್ದರು. ಅದರಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದಾಗ ಶರಣರ ಆರೋಗ್ಯ ‌ಸರಿ ಇಲ್ಲದಿರುವುದನ್ನು ಕಂಡು ಮುಂದೂಡಿದರು ಎಂದು ಶರಣರ ಪರ ವಕೀಲರು ತಿಳಿಸಿದ್ದಾರೆ.