ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತೆ ನಾಪತ್ತೆ!

ಮಾಡಾಳ
Advertisement

ದಾವಣಗೆರೆ: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಮತ್ತೆ ಕಾಣೆಯಾಗಿದ್ದಾರೆ!

ಸೋಮವಾರ ಬೆಳಿಗ್ಗೆ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೩೫೧ ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಪಾಲ್ಗೊಂಡಿದ್ದ ಮಾಡಾಳು ಇದೇ ವೇಳೆ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಆದರೆ, ಯಾರೋ ಷಡ್ಯಂತ್ರ ಮಾಡಿ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ ಎಂದು ಕಣ್ಣೀರು ಸುರಿಸಿದ್ದರು.

ಕಾರ್ಯಕ್ರಮದ ತರುವಾಯ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಮತ್ತೆ ನಾಪತ್ತೆಯಾಗಿದ್ದು, ಯಾರ ಕೈಗೂ ಸಿಕ್ಕಿಲ್ಲ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಪ್ರಶಾಂತ್ ಮಾಡಾಳ್ ರೆಡ್ ಹ್ಯಾಂಡ್ ಆಗಿ ೪೦ ಲಕ್ಷ ರೂಪಾಯಿಗೂ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದರು. ಆ ಬಳಿಕ ಪುತ್ರನ ಮನೆಯಲ್ಲಿ ೬.೨೦ ಕೋಟಿ ರೂಪಾಯಿ ಸಿಕ್ಕಿತ್ತು. ಲೋಕಾಯುಕ್ತ ವರದಿ ನೀಡುವವರೆಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿತ್ತು. ಆದರೆ, ಇಂದು ಹೈಕೋರ್ಟ್ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ.