ಪ್ಯಾನ್-ಆಧಾರ್ ಲಿಂಕ್‌ ಮಾಡಿಸಿಕೊಳ್ಳದಿದ್ದರೆ ಕಷ್ಟ

PAN
Advertisement

ಬಿ.ಅರವಿಂದ
ಹುಬ್ಬಳ್ಳಿ: ನಿಮ್ಮ ಪ್ಯಾನ್ ಕಾರ್ಡ್‌ ಆಧಾರ್‌ನೊಂದಿಗೆ ಲಿಂಕ್ ಆಗಿವೆಯೇ ಎಂದು ಕೂಡಲೇ ತಿಳಿದುಕೊಳ್ಳಿ. ಆಗಿರದಿದ್ದರೆ ಮಾಡಿಸಿಕೊಳ್ಳಿ. ಇಲ್ಲವಾದರೆ ಏಪ್ರಿಲ್ ಒಂದನೇ ತಾರೀಕಿನ ನಂತರ ಬ್ಯಾಂಕಿಂಗ್ ವಹಿವಾಟಿಗೆ ಪರಿತಾಪ ಪಡಬೇಕಾಗುತ್ತದೆ.
ಕೇಂದ್ರ ನೇರ ತೆರಿಗೆಗಳ ಇಲಾಖೆ (ಸಿಬಿಡಿಟಿ) ಈ ಮಹತ್ವದ ಸೂಚನೆಯನ್ನು ನೀಡಿದೆ. ವಾಣಿಜ್ಯೋದ್ಯಮದ ಪ್ರಮುಖ ಸ್ಥಳವಾಗಿರುವ ಹುಬ್ಬಳ್ಳಿಯಲ್ಲಿ ಲಿಂಕ್ ಬಗ್ಗೆ ಸಾರ್ವತ್ರಿಕ ನಿರ್ಲಕ್ಷ್ಯ ವ್ಯಾಪಕವಾಗಿದೆ. ಇಂತಹ ನಗರವಾಸಿಗಳಿಗೆ ಅನ್ವಯವಾಗುವಂತೆಯೇ ಈ ವಿಶೇಷ ಸೂಚನೆಯನ್ನು ನೀಡಲಾಗಿದೆ.
ಹೊಸ ತಲೆಮಾರಿನ ವಹಿವಾಟುದಾರರು ಪ್ಯಾನ್-ಆಧಾರ್‌ಗಳನ್ನು ಲಿಂಕ್ ಮಾಡಿಸಿಕೊಂಡಿದ್ದಾರೆ. ಇಲ್ಲವೇ ಬ್ಯಾಂಕ್ ಖಾತೆ ತೆಗೆಯುವಾಗಲೇ ಅವರ ಪ್ಯಾನ್‌ಗಳು ಆಧಾರ್‌ನೊಂದಿಗೆ ಸಹಜವಾಗಿ ಲಿಂಕ್ ಆಗಿವೆ. ಏಕೆಂದರೆ ನವ ತಲೆಮಾರಿನ ಆಧಾರ್ ಮತ್ತು ಪ್ಯಾನ್ ಎರಡೂ ಇತ್ತೀಚಿನದ್ದಾಗಿರುತ್ತವೆ. ಹೀಗಾಗಿ ಇವು ಸ್ವಾಭಾವಿಕವಾಗಿ ಲಿಂಕ್ ಆಗಿಯೇ ಇರುತ್ತವೆ. ಸಮಸ್ಯೆ ಇರುವುದು ಹತ್ತು ವರ್ಷಗಳಿಗೂ ಹಿಂದೆ ಆಧಾರ್ ಪಡೆದುಕೊಂಡ ಪ್ಯಾನ್ ಕಾರ್ಡ್‌ದಾರರಿಗೆ ಮಾತ್ರ. ಆದ್ದರಿಂದ ಈ ತಲೆಮಾರಿನವರು ಪ್ರತ್ಯೇಕವಾಗಿ ನೇರ ತೆರಿಗೆಗಳ ಇಲಾಖೆಯ ಪೋರ್ಟಲ್‌ಗೆ ಹೋಗಿ ಎರಡನ್ನೂ ಲಿಂಕ್ ಮಾಡಿಕೊಳ್ಳಲೇಬೇಕು. ಆಧಾರ್-ಪ್ಯಾನ್ ಸೇವಾ ಕೇಂದ್ರಗಳಲ್ಲೂ ನಿಗದಿತ ಶುಲ್ಕ ಭರ್ತಿ ಮಾಡಿ ಲಿಂಕೇಜ್ ಮಾಡಿಕೊಳ್ಳಬಹುದು’ ಎಂದು ಉತ್ತರ ವಲಯದ ಆದಾಯ ತೆರಿಗೆ ಅಧಿಕಾರಿಯೊಬ್ಬರು ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದ್ದಾರೆ. ಈಗಾಗಲೇ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನೂ ಈ ಪೋರ್ಟಲ್‌ನಲ್ಲಿ ಅರಿಯಬಹುದಾಗಿದೆ.
ಏನೇನು ಸಮಸ್ಯೆ…?
ಪ್ಯಾನ್ ನಿಷ್ಟ್ರೀಯವಾದಲ್ಲಿ ಬ್ಯಾಂಕ್ ಖಾತೆ ಆರಂಭ, ಹೂಡಿಕೆ, ಠೇವಣಿ, ಸಾಲ ಪಡೆದುಕೊಳ್ಳುವುದು, ಹಣಕಾಸಿನ ವಹಿವಾಟು ನಡೆಸುವುದು ಸೇರಿದಂತೆ ಬ್ಯಾಂಕ್ ಅವಲಂಬಿಸಿ ನಡೆಯುವ ಎಲ್ಲ ಪ್ರಕ್ರಿಯೆಗಳೂ ಸ್ಥಗಿತವಾಗುತ್ತವೆ. ಇಲ್ಲವೇ ಭಾರೀ ದಂಡವನ್ನು ಪ್ರತಿ ವಹಿವಾಟಿಗೂ ತೆರಬೇಕಾಗಲಿದೆ.
`ಹುಬ್ಬಳ್ಳಿ-ಧಾರವಾಡದಲ್ಲಿ ನಿತ್ಯ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ವಹಿವಾಟು ನಡೆಯುತ್ತದೆ. ವಹಿವಾಟುದಾರರೆಲ್ಲ ತೆರಿಗೆ ಪಾವತಿದಾರರಾಗಿದ್ದಾರೆ. ಲಿಂಕ್ ಆಗದೇ ಇದ್ದಲ್ಲಿ ತೆರಿಗೆ ಪಾವತಿಸಿದ ಹೆಚ್ಚುವರಿ ಹಣ ಮರಳಿ (ಐಟಿಆರ್) ಪಡೆಯಲಾಗದು. ಜೊತೆಗೆ, ಐಟಿಆರ್ ಸಲ್ಲಿಕೆ ಮಾಡುವುದಕ್ಕೂ ಆದಾಯ ತೆರಿಗೆ ಕಾಯ್ದೆಯ ಅನ್ವಯ ನಿಷೇಧ ವಿಧಿಸಬಹುದು. ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಬರುವುದಿಲ್ಲ’ ಎಂದು ಮೂಲಗಳು ಹೇಳಿವೆ.
ನೇರ ತೆರಿಗೆಗಳ ಪೋರ್ಟಲ್‌ನಲ್ಲಿ ಲಿಂಕ್ ಮಾಡಿಕೊಳ್ಳುವುದು ಅತ್ಯಂತ ಸರಳವಾಗಿದ್ದು, ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳಲ್ಲಿನ ವ್ಯಕ್ತಿಯ ಹೆಸರು ಏಕಪ್ರಕಾರವಾಗಿದ್ದರೆ ಕ್ಷಣಾರ್ಧದಲ್ಲಿ ಲಿಂಕ್ ಆಗುತ್ತದೆ. ಹೆಸರು ವ್ಯತ್ಯಾಸ ಇದ್ದಲ್ಲಿ ಮಾತ್ರ ಲಿಂಕ್ ಆಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಹತ್ತು ಸಾವಿರ ದಂಡ !
ಮಾರ್ಚ್ 31ರ ಒಳಗೆ ಲಿಂಕ್ ಮಾಡಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರ ಒಂದು ಸಾವಿರ ರೂಪಾಯಿ ದಂಡ ಶುಲ್ಕವನ್ನು ನಿಗದಿ ಮಾಡಿದೆ. ಒಂದು ವೇಳೆ ಈ ಗಡುವಿಗೆ ವಿಫಲವಾದಲ್ಲಿ ಏಪ್ರಿಲ್ ನಂತರ ಲಿಂಕ್ ಮಾಡಿಕೊಳ್ಳುವರಿಗೆ ಹತ್ತು ಸಾವಿರ ರೂಪಾಯಿ ದಂಡ ಶುಲ್ಕವನ್ನು ವಿಧಿಸುವ ಆಲೋಚನೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ನೇರ ತೆರಿಗೆಗಳ ಇಲಾಖೆಯಿಂದ ಇನ್ನಷ್ಟೇ ಮಾಹಿತಿ ಬರಬೇಕಾಗಿದೆ.