ಜಾತಿ ರಾಜಕಾರಣಕ್ಕಿಂತ ನೀತಿ ರಾಜಕಾರಣವಿರಲಿ

madar channayya
Advertisement

ಸೆಟ್ಟಿ ಎಂಬೆನೆ ಸಿರಿಯಾಳನ? ಮಡಿವಾಳನೆಂಬೆನೆ ಮಾಚಯ್ಯನ? ಡೋಹರನೆಂಬೆನೆ ಕಕ್ಕಯ್ಯನ? ಮಾದಾರನೆಂಬೆನೆ ಚನ್ನಯ್ಯನ? ಆನು ಹಾರುವನೆಂದೆಡೆ ಕೂಡಲ ಸಂಗಯ್ಯ ನಗುವನಯ್ಯ
ಯಾರನ್ನೂ ಹುಟ್ಟಿನ ಆಧಾರದಿಂದ ಗುರುತಿಸಬಾರದು. ಹಾಗೊಂದು ವೇಳೆ ಶಿವಭಕ್ತರಾದ ಶಿರಿಯಾಳನನ್ನು ಸೆಟ್ಟಿಯೆಂದರೆ ಮಾಚಯ್ಯನನ್ನು ಮಡಿವಾಳನೆಂದರೆ ಕಕ್ಕಯ್ಯನನ್ನು ಡೋಹರನೆಂದರೆ ಚನ್ನಯ್ಯನನ್ನು ಮಾದಾರನೆಂದರೆ ನಾನು ಬ್ರಾಹ್ಮಣನೆಂದು ಬೀಗಿದರೆ ಕೂಡಲಸಂಗಮದೇವ ನಗುವನು ಎನ್ನುತ್ತ ಜಾತಿಯ ಭೂತವನ್ನು ಮನಸ್ಸಿನಿಂದ ತೆಗೆದು ಹಾಕುವ ಮೂಲಕ ಇತರರಿಗೆ ಜಾತಿಗಿಂತ ನೀತಿ ಮುಖ್ಯವೆಂದು ಬಸವಣ್ಣ ಹೇಳಿದ್ದಾರೆ.
ಪ್ರಸ್ತುತ ಜಾತಿ ವ್ಯವಸ್ಥೆಯನ್ನು ಕಂಡೆ ಬಸವಣ್ಣನವರು ಒಂಬೈನೂರು ವರ್ಷಗಳ ಹಿಂದೆಯೇ ಮೇಲಿನ ವಚನದ ಮೂಲಕ ಎಚ್ಚರಿಸಿದ್ದಾರೇನೊ ಎನಿಸುತ್ತದೆ. ಬಸವಣ್ಣನವರಾದಿಯಾಗಿ ಇಂದಿನ ದಿನಮಾನದವರೆಗೆ ಅದೆಷ್ಟೋ ದಾರ್ಶನಿಕರು ಈ ಜಾತಿ ಪಿಡುಗನ್ನು ನಿವಾರಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ವಿಪರ್ಯಾಸವೆಂಬಂತೆ ಜಾತಿ ಎಂಬುದು ಒಂದು ವ್ಯವಸ್ಥೆಯಾಗಿ ಗಟ್ಟಿಯಾಗುತ್ತಲೇ ಹೋಗುತ್ತದೆ. ಹಾಗೆಂದು ಕೈ ಕಟ್ಟಿ ಕುಳಿತರೆ ಸಾಲದು.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕನಕ, ಫುಲೆಯರಾದಿಯಾಗಿ ಹೇಳಿದ ಸಂದೇಶಗಳನ್ನು ತುಕ್ಕು ಸರಿಸಿ ಕೇವಲ ಜಯಂತಿಗಳನ್ನು ಮಾಡುತ್ತ ಅವರನ್ನೂ ಕೂಡ ಒಂದೊಂದು ಜಾತಿಗೆ ಸೀಮಿತಗೊಳಿಸುವ ಕಾರ್ಯ ಮಾಡುತ್ತಿದ್ದೇವೆ. ಈ ಎಲ್ಲಾ ದಾರ್ಶನಿಕರು ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ನಿವಾರಿಸಿ ಸಂಸ್ಕಾರವಂತ ಸಮಾಜವನ್ನು ನಿರ್ಮಿಸುವ ಸಂಕಲ್ಪವಾಗಿತ್ತು.
ಆದರೆ ಇಂದು ನಾವು ಹೊರಟಿರುವ ದಾರಿಯೇ ಬೇರೆ ವಿಜ್ಞಾನ ತಂತ್ರಜ್ಞಾನ ಆಧುನಿಕತೆ ಇತ್ಯಾದಿಗಳ ಬಗ್ಗೆ ಉದಾತ್ತ ಭಾವನೆಗಳನ್ನು ಹೊಂದಿದ್ದೇವೆ. ಆದರೆ ಸಾಮಾಜಿಕ ವ್ಯವಸ್ಥೆಯ ಮಾತುಗಳು ಬಂದಾಗ ನನ್ನ ಧರ್ಮ ನನ್ನ ಜಾತಿಗಳೆಂಬ ಚೌಕಟ್ಟಿಗೆ ಸೀಮಿತವಾಗುತ್ತಿದೇವೆ ಇದೇ ಕಾರಣಕ್ಕೆ ಬಸವಾದಿಗಳು 12ನೇ ಶತಮಾನದಲ್ಲಿಯೇ ಜಾತಿ ಕುಲಗಳನ್ನು ಪ್ರಶ್ನಿಸಿದ್ದಾರೆ.
ಪ್ರಸ್ತುತ ನಮ್ಮ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ವೇದಿಕೆಗಳಲ್ಲಿ ಸದಾ ದಾರ್ಶನಿಕರ ಮಾತುಗಳನ್ನು ಹೇಳುವ ನಾವುಗಳು ಇಂದು ಚುನಾವಣೆಗಳು ಬಂದಾಗ ಪ್ರತಿಯೊಬ್ಬರೂ ಜಾತಿ ಲೆಕ್ಕಾಚಾರಗಳನ್ನು ನೀಡುತ್ತೇವೆ. ನಮ್ಮದು ಭವ್ಯ ಪ್ರಜಾಪ್ರಭುತ್ವ. ಇಲ್ಲಿ ಜಾತಿಗಿಂತ ನೀತಿ ಮುಖ್ಯವಾಗಬೇಕು. ಇದನ್ನೇ ಬಸವಾದಿ ಶರಣರು ಹೇಳಿದ್ದಾರೆ. ಆದುದರಿಂದ ಜಾತಿ ರಾಜಕಾರಣಕ್ಕಿಂತ ನೀತಿ ರಾಜಕಾರಣಕ್ಕೆ ಬದ್ಧರಾಗೋಣ.