ಚುನಾವಣೆಗೆ ಸ್ಪರ್ಧಿಸುವುದಂತೂ ಖಚಿತ

ಸವಿತಾಬಾಯಿ ಮಲ್ಲೇಶ್ ನಾಯ್ಕ್
Advertisement

ದಾವಣಗೆರೆ: ಬರುವ ಚುನಾವಣೆಯಲ್ಲಿ ಮಾಯಕೊಂಡಕ್ಕೆ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ತಮಗೆ ಕೊಡದ ಪಕ್ಷದಲ್ಲಿ ತಾವು ಪಕ್ಷೇತರ ಅಥವಾ ಇತರೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಸವಿತಾಬಾಯಿ ಮಲ್ಲೇಶ್ ನಾಯ್ಕ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಮಾಯಕೊಂಡಕ್ಕೆ ತಮಗೆ ಸಿಗಬೇಕಾದ ಟಿಕೆಟ್‌ನ್ನು ಕೆಲವರು ಕುತಂತ್ರದಿಂದ ತಮ್ಮ ಚಾರಿತ್ರ್ಯ ಹರಣ ಮಾಡುವ ಮೂಲಕ ತಪ್ಪಿಸಿದ್ದಾರೆ. ತಾವು ಕಳೆದ ಮೂರುವರೆ ವರ್ಷಗಳಿಂದ ಮಾಯಕೊಂಡ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದರಿಂದ ಅಲ್ಲಿನ ಜನರು ತಮ್ಮ ಬಗ್ಗೆ ಒಲವು ವ್ಯಕ್ತಪಡಿಸಿದ್ದು ನನ್ನನ್ನೇ ಚುನಾವಣೆಗೆ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ವಿವಿಧ ಪಕ್ಷಗಳ ನಾಯಕರು ಕೂಡ ನನ್ನನ್ನು ಸಂಪರ್ಕಿಸಿದ್ದಾರೆ. ನಾನು ಪಕ್ಷೇತರವಾಗಿ ಅಥವಾ ಇತರೆ ಪಕ್ಷದಿಂದ ಸ್ಪರ್ಧಿಸುವುದು ಖಚಿತ ಎಂದರು.
ನಮ್ಮ ದೇಶದಲ್ಲಿ ಹೆಣ್ಣನ್ನು ದೇವತೆಗೆ ಹೋಲಿಸಿ ಪೂಜ್ಯನೀಯವಾಗಿ ಕಾಣಲಾಗುತ್ತದೆ ಎನ್ನುತ್ತಾರೆ. ಹೆಣ್ಣಿಗೆ ಪೂಜಿಸುವುದು ಬೇಡ ಆಕೆಗೆ ಬೇಕಿರುವುದು ಗೌರವ. ಆದರೆ, ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಘೋಷಣೆ ಆಗಿರುವ ಅಭ್ಯರ್ಥಿ ಕೇವಲ ರಾಜಕೀಯಕ್ಕೋಸ್ಕರ ಒಂದು ಹೆಣ್ಣಿನ ಗೌರವಕ್ಕೆ ಕುಂದು ತಂದು ಟಿಕೆಟ್ ಪಡೆದುಕೊಂಡಿದ್ದಾರೆ. ಇಂಥವರು ಗೆದ್ದರೆ ಕ್ಷೇತ್ರದಲ್ಲಿರುವ ೯೭,೦೦೦ ಮಹಿಳೆಯರು ಸುರಕ್ಷಿತವಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬಡ ಕುಟುಂಬದಿಂದ ಬಂದ ನಮಗೆ ಗೌರವವೇ ಮುಖ್ಯ. ಆದರೆ, ಘೋಷಣೆಯಾಗಿರುವ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಅವರು ರಾಜಕೀಯಕ್ಕಾಗಿ ನನ್ನ ಚಾರಿತ್ರ್ಯ ಹರಣ ಮಾಡಿ ರಾಜಕಾರಣ ಮಾಡಿದರು. ಇದರಿಂದ ನಾನು ಸಾಕಷ್ಟು ನೊಂದಿದ್ದು, ನನ್ನ ತಾಯಿ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು, ನನ್ನ ವೈವಾಹಿಕ ಜೀವನದ ಮೇಲೂ ಇದು ಸಾಕಷ್ಟು ಪರಿಣಾಮ ಬೀರಿತು ಎಂದು ಕಣ್ಣೀರು ಹಾಕಿದರು.
ನಾನು ಜನಸೇವೆ ಮಾಡಬೇಕೆಂದೆ ರಾಜಕೀಯಕ್ಕೆ ಬಂದವಳು. ಇಂಥ ಸಾವಿರ ಜನರು ಬಂದರೂ ನಾನು ಚುನಾವಣೆಗೆ ನಿಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ ಕಾಂಗ್ರೆಸ್‌ನ ಕೆಲವು ನಾಯಕರು, ಕ್ಷೇತ್ರದ ಜನರು ನನಗೆ ಬೆಂಬಲಿಸಿದ್ದು, ನಮ್ಮ ಮನೆಗೆ ಬಂದು ಸಂತೈಸುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಇವಕ್ಕೆಲ್ಲ ನಾನು ಸೊಪ್ಪು ಹಾಕದೆ ಚುನಾವಣೆಗೆ ನಿಲ್ಲುವುದು ೧೦೦ರಷ್ಟು ನಿಶ್ಚಿತ ಎಂದರು.
ನಿತಿನ್, ತೇಜಸ್, ಚಂದ್ರಬಾಯಿ, ಸುನೀಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.