ಸಾವರ್ಕರ್ ಟೀಕಿಸೋರು ಬ್ರಿಟಿಷ್ ಸಂತತಿಗೆ ಸೇರಿದವರು: ಚೈತ್ರಾ ಕುಂದಾಪುರ ವಾಗ್ದಾಳಿ

Advertisement

ಬಾಗಲಕೋಟೆ: ಸಾವರ್ಕರ್, ವಿವೇಕಾನಂದರ ಚಿಂತನೆ, ವಿಚಾರಗಳನ್ನು ಅರಿತು ಬೆಳೆಯುವ ಮಕ್ಕಳು ಮಾತ್ರವೇ ಭಾರತ ಮಾತೆಯನ್ನು ರಕ್ಷಿಸಬಲ್ಲರು ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.

ನಗರದ ಮಾರವಾಡಿಗಲ್ಲಿಯಲ್ಲಿ ನಾಡ ಹಬ್ಬ ಆಚರಣಾ ಸಮಿತಿಯಿಂದ‌ ಗಣೇಶೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಕುರಿತು ಅವರು ಉಪನ್ಯಾಸ ನೀಡಿದರು.

ದೇಶಕ್ಕಾಗಿ ಮಡಿದ, ದುಡಿದ ವೀರರನ್ನು ಸ್ಮರಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ. ಅದನ್ನು‌ ಮರೆತರೆ ಮುಂದಿನ ಪೀಳಿಗೆಗೆ ನಾವು‌ ಮುಖ ತೋರಿಸುವ ಯೋಗ್ಯತೆಯನ್ನೂ ಕಳೆದುಕೊಳ್ಳುತ್ತೇವೆ ಎಂದರು.

ಕೆಲ ಜೆಹಾದಿ ಶಕ್ತಿಗಳು, ಎಸ್ ಡಿಪಿಐ, ಪಿಎಫ್ಐ ಕುನ್ನಿಗಳು ಸಾವರ್ಕರ್ ಬ್ಯಾನರಗಳನ್ನು ಹರಿಯುತ್ತಿವೆ. ಬ್ಯಾನರ್ ಹರಿದ ಸ್ಥಳದಲ್ಲಿ ಮುಂದೆಂದೂ ಮುರಿಯೋಕೆ ಆಗದಂತೆ ಪ್ರತಿಮೆಗಳು ಸ್ಥಾಪನೆ ಆಗಲಿವೆ ಎಂಬ ಎಚ್ಚರಿಕೆಯನ್ನು ನೀಡಬೇಕಿದೆ ಎಂದರು.

ಪಠ್ಯದಲ್ಲಿ ಸದ್ಯ ಸಾವರ್ಕರ್ ಪಾಠವಿದೆ. ಆದರೆ ಅದನ್ನು ತೆಗೆಸಲು ಹಲವು ಶಕ್ತಿಗಳು ಕಾಯುತ್ತಿವೆ.ಹಾಗೊಂದು ವೇಳೆ ಮಕ್ಕಳು ಸಾವರ್ಕರ್ ಪಠ್ಯದಿಂದ ವಂಚಿತರಾದರೆ ಅವರಲ್ಲಿ ದೇಶಭಕ್ತಿ ಬೆಳೆಯುವುದು ಸಹ ಕಷ್ಟವಾಗಲಿದೆ ಎಂಬುದನ್ನು ಪಾಲಕರು ಅರಿಯಬೇಕೆಂದರು.

ದೇಶದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಆಗಬೇಕೆಂಬುದನ್ನು ಇಂದಿಗೂ ಎಲ್ಲರೂ ಹೇಳುತ್ತೇವೆ. ಅಂಥ ಬೋಸರಿಗೂ ದೇಶದ ಹೊರಗೆ ಸೈನ್ಯದ ಅಗತ್ಯವಿದೆ ಎಂದು ಸಾವರ್ಕರ್ ಮಾರ್ಗದರ್ಶನ ಮಾಡಿದ್ದರು ಅಂಥವರನ್ನು ಹೇಡಿ ಎನ್ನುತ್ತಿರುವವರು ಬ್ರಿಟಿಷ್ ಸಂತತಿ ಅವರು ಎಂದು ಟೀಕಿಸಿದರು.

ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ದೇಶಕ್ಕಾಗಿ ದುಡಿದವರನ್ನು ಟೀಕಿಸುವ ಕೆಟ್ಟ ಮನಸ್ಥಿತಿಗಳು ದೇಶದಲ್ಲಿರೋದು ಬೇಸರದ ಸಂಗತಿ.ಸಾವರ್ಕರರಂಥ ಮಹಾನ್ ದೇಶಭಕ್ತರ ಚಿಂತನೆಗಳನ್ನು ಅರಿಯುವ ಕೆಲಸವಾಗಬೇಕಿದೆ ಎಂದರು.

ಬುಡಾ ಸದಸ್ಯ ಜಯಂತ ಕುರಂದವಾಡ, ಮಹೇಶ ಕೋಳ್ವೇಕರ ಉಪಸ್ಥಿತರಿದ್ದರು. ಭಾಸ್ಕರ್ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು.