ಕರ್ತವ್ಯ ಲೋಪ: 7 ಶಿಕ್ಷಕರ ಅಮಾನತು

Advertisement

ಬೆಳಗಾವಿ: ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ವೇಳೆ ಏ. 3ರಂದು ತಾಲೂಕಿನ ಹಿರೇಬಾಗೇವಾಡಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ಲೋಪ‌ ಎಸಗಿದ ಏಳು ಶಿಕ್ಷಕರನ್ನು ಅಮಾನತು ಮಾಡಿ ಬೆಳಗಾವಿ ಡಿಡಿಪಿಐ ಬಾವರಾಜ ನಾಲತವಾಡ ಗುರುವಾರ ಆದೇಶ ಹೊರಡಿಸಿದ್ದಾರೆ
ಕೆ.ಕೆ.‌ ಕೊಪ್ಪ‌ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಎಸ್.ಎಸ್. ಕರವಿನಕೊಪ್ಪ, ವಿ.ಎಸ್. ಬೀಳಗಿ, ಎಲ್.ಆರ್. ಮಹಾಜನಶೆಟ್ಟಿ, ಎಂ.ಎಸ್.‌ ಅಕ್ಕಿ,‌ ಎ.ಎಚ್‌. ಪಾಟೀಲ, ಇದ್ದಲಹೊಂಡ ಶಾಲೆ‌ ಶಿಕ್ಷಕ ಎನ್.ಎಂ. ನಂದಿಹಳ್ಳಿ‌ಹಾಗೂ ಸುಳೇಭಾವಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿ ಎಸ್.ಸಿ. ಧೂಳಪ್ಪನವರ ಅವರನ್ನು ಅಮಾನತು ಮಾಡಲಾಗಿದೆ.

ಧಾರವಾಡ ಶಿಕ್ಷಣ ಇಲಾಖೆ‌ ಆಪರ‌ ಆಯುಕ್ತರು ಗಣಿತ ಪರೀಕ್ಷೆಯ ದಿನದಂದು ಪರೀಕ್ಷಾ ಕೇಂದ್ರಕ್ಕೆ‌ಭೇಟಿ ನೀಡಿದ್ದರು.‌ಈ ವೇಳೆ ಕೊಠಡಿ ಮೇಲ್ವಿಚಾರಕರು ಮಕ್ಕಳನ್ನು ಸರಿಯಾಗಿ ತಪಾಸಣೆ ಮಾಡದೇ ಇರುವುದು ಮತ್ತು ಪೋಲಿಸ್ ವ್ಯವಸ್ಥೆ ಸರಿಯಾಗಿ ಮಾಡದೇ ಇರುವುದು, ಶಾಲಾ ಕೊಠಡಿಯ ಹಿಂದುಗಡೆ ಜನ ಓಡಾಡುತ್ತಿರುವುದು, ನಕಲು ಚೀಟಿಗಳನ್ನು ಕೊಠಡಿಯೊಳಗೆ ಎಸೆಯುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ತಿಳಿಸಲಾಗಿದೆ.