ಚುನಾವಣೆಯಿಂದ ಹಿಂದಕ್ಕೆ ಸರಿಯಲ್ಲ: ನಾಮಪತ್ರ ಸಲ್ಲಿಕೆ: ರಘು ಆಚಾರ್ ಭೇಟಿ ಮಾಡಿದ ವೀರೇಂದ್ರ ಪಪ್ಪಿ

ರಘೂ ಆಚಾರ್‌
Advertisement

ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರೇಂದ್ರಪಪ್ಪಿ ಶುಕ್ರವಾರ ಟಿಕೆಟ್ ವಂಚಿತ ಮಾಜಿ ಎಂಎಲ್ಸಿ ರಘುಆಚಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆಯಲ್ಲಿ ರಘುಆಚಾರ್ ಸ್ಪರ್ಧೆ ಮಾಡುವುದು ಖಚಿತ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಖಡಕ್ ಆಗಿ ಹೇಳುವ ಮೂಲಕ ವೀರೇಂದ್ರ ಪಪ್ಪಿ ನಡೆಸಿದ ಸಂಧಾನ ವಿಫಲವಾದಂತಾಗಿದೆ.
ಇಂದು ಬೆಳಿಗ್ಗೆ ವೀರೇಂದ್ರ ಮನೆಗೆ ಆಗಮಿಸಿದ ವೇಳೆಯಲ್ಲಿ ರಘು ಆಚಾರ್ ನಗುಮುಖದಿಂದಲೇ ಬರಮಾಡಿಕೊಂಡರು. ಸುಮಾರು ಹೊತ್ತು ಮಾತುಕತೆ ನಡೆಸಿದರು. ವೀರೇಂದ್ರ, ಟಿಕೆಟ್ ನನಗೆ ಸಿಕ್ಕಿದೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಇದಕ್ಕೆ ರಘುಆಚಾರ್ ಕಾಂಗ್ರೆಸ್ ನಾಯಕರು ಟಿಕೆಟ್ ಕೊಡುವುದಾಗಿ ಹೇಳಿದ ಮೇಲೆ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಈಗ ಎಲ್ಲಾ ತಯಾರಿ ನಡೆದಿದೆ. ಅರ್ಧ ದಾರಿಯಲ್ಲಿ ಕೈ ಬಿಟ್ಟಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದರು. ಇದಕ್ಕೆ ವೀರೇಂದ್ರ ಅವರು, ನಿಮಗೆ ಟಿಕೆಟ್ ಸಿಕ್ಕಿದ್ದರೆ ನಾನು ಬೆಂಬಲ ಕೊಡುತ್ತಿದ್ದೆ. ನೀವು ನನಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ರಘು ಆಚಾರ್ ಒಪ್ಪಲಿಲ್ಲ. ಕೊನೆಗೆ ವೀರೇಂದ್ರ ಪಪ್ಪಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವಾಪಾಸ್ ಬಂದರು.
ಎಲ್ಲರ ಮನೆಗೆ ಭೇಟಿ: ರಘು ಆಚಾರ್ ಭೇಟಿ ಬಳಿಕ ವೀರೇಂದ್ರ ಮಾತನಾಡಿ, ರಘುಆಚಾರ್ ರಾಜ್ಯ ಮಟ್ಟದ ನಾಯಕರು. ನಾನು ಹೀಗಾಗಿ ಅವರ ಭೇಟಿಗೆ ಬಂದಿದ್ದೆ. ಅವರು ಕೂಡಾ ಕೆಲವೊಂದು ಸಲಹೆ ಸೂಚನೆ ನೀಡಿದ್ದಾರೆ. ಅವರು ಕೂಡಾ ನನಗೆ ಬೆಂಬಲ ನೀಡುತ್ತಾರೆ. ಇದೇ ರೀತಿಯಲ್ಲಿ ನಾನು ಎಲ್ಲಾ ಕಾಂಗ್ರೆಸ್ ನಾಯಕರ ಮನೆಗೆ ಭೇಟಿ ನೀಡಿ ಬೆಂಬಲ ಕೋರುತ್ತೆನೆ ಎಂದರು.
ಇವೇ ವೇಳೆಯಲ್ಲಿ ರಘು ಆಚಾರ್ ಮಾತನಾಡಿ, ವೀರೇಂದ್ರ ಪಪ್ಪಿ ಅಭ್ಯರ್ಥಿ ಅವರಿಗೂ ಒಳ್ಳೆಯದು ಆಗಲಿ. ನಾವಿಬ್ಬರೂ ಆತ್ಮೀಯ ಸ್ನೇಹಿತರು. ಸಂಬಂಧವೇ ಬೇರೆ ಚುನಾವಣೆಯೇ ಬೇರೆ. ಸ್ನೇಹಿತರು ಮನೆಗೆ ಬರಬಾರದೆ. ಸ್ನೇಹಿತರಾದರೂ ಚುನಾವಣೆಯಲ್ಲಿ ನಾವು ಎದುರಾಳಿಗಳು. ಇದು ವಿಪರ್ಯಾಸ. ನಾನು ನಾಮಪತ್ರ ಸಲ್ಲಿಕೆ ಮಾಡುವುದು ಪಕ್ಕಾ. ಎಲೆಕ್ಷನ್ ಟಿಪ್ಸ್ ಮಾತ್ರ ಪಪ್ಪಿಗೆ ನೀಡಿದ್ದೇನೆ. ಒಂದೇ ಮನೆಯಲ್ಲಿ ಎರಡು ಪಕ್ಷ ಇಲ್ವ. ೩೦ ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.