ಹಾಸನ ಕ್ಷೇತ್ರ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ: ಕುಮಾರಸ್ವಾಮಿ

ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಶ್ರೀ ಸಿದ್ಧಾರೂಢಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.
Advertisement

ಹುಬ್ಬಳ್ಳಿ : ಹಾಸನ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಸಾಮಾನ್ಯ ಕಾರ್ಯಕರ್ತ ಆ ಕ್ಷೇತ್ರದಲ್ಲಿ ಗೆದ್ದು ಬರುವ ವಿಶ್ವಾಸವಿದೆ. ಹೀಗಾಗಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುವ ಚಿಂತನೆ ಇದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರ ಪೂರ್ವ ಕ್ಷೇತ್ರದಲ್ಲಿ ಪ್ರಚಾರ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದುವರೆ ವರ್ಷ ಹಿಂದಿನಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ. ಹಾಸನ ಕ್ಷೇತ್ರಸ ಬಿಜೆಪಿ ಶಾಸಕ ಸವಾಲು ಹಾಕಿದ್ದರು. ಆ ಸವಾಲಿಗೆ ನಾನು ಸಾಮಾನ್ಯ ಕಾರ್ಯಕರ್ತನನ್ನೇ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಹೇಳಿದ್ದೆಮ ಅಂತಹ ಸಾಮರ್ಥ್ಯ ಇರುವ ಅಭ್ಯರ್ಥಿ ಇದ್ದಾರೆ ಎಂದರು.
ಈಗ ಹಾಸನ ಕ್ಷೇತ್ರಕ್ಕೆ ಟಿಕೆಟ್ ಕೊಡಿ ಎಂದು ನಮ್ಮ ಕುಟುಂಬದವರು ಕೇಳುತ್ತಿದ್ದಾರೆ. ಕೆಲವರು ದೇವೇಗೌಡರ ಕುಟುಂಬವನ್ನು ಹಾಳು ಮಾಡಲು ಇಂತಹ ಪಾಠ ಮಾಡಿ ಕಳಿಸುತ್ತಿದ್ದಾರೆ. ನಾನು ಈ ರಾಜ್ಯದ ಮುಖ್ಯಮಂತ್ರಿಯಾದವ. ಎಲ್ಲಿ ಏನು ನಡೆಯುತ್ತದೆ ಎಂಬುದು ಗೊತ್ತಾಗುವುದಿಲ್ಲವೇ? ಆ ಕಾರಣಕ್ಕಾಗಿಯೇ ನಾನು ಶಕುನಿಗಳು ಎಂಬ ಪದವನ್ನು ನಿನ್ನೆ ಬಳಸಿದ್ದೇನೆ ಎಂದರು.
ನಮ್ಮ ಪಕ್ಷದಲ್ಲಿ ಕಡವಲ ಹಾಸನ ಕ್ಷೇತ್ರಕ್ಕೆ ಮಾತ್ರ ಟಿಕೆಟ್ ಹಂಚಿಕೆ ಈಚೆಗೆ ಗೊಂದಲ ಸೃಷ್ಟಿಯಾಗಿದೆ. ಆದರೆ, ಬಿಜೆಪಿ, ಕಾಂಗ್ರೆಸ್ ನಲ್ಲಿ ನೂರಾರು ಕ್ಷೇತ್ರಗಳಲ್ಲಿ ಈ ತರಹ ಗೊಂದಲಗಳಿವೆ. ನಮ್ಮದು ಬರೀ ಒಂದು ಹಾಸನ, ಸಿಂಹಾಸನ. ಬೇರೆ ಪಕ್ಷಗಳಲ್ಲಿ ನೂರಾರು ಹಾಸನಗಳಿವೆ ಎಂದರು.
ನಮ್ಮ ಪಕ್ಷಕ್ಕೆ ಸ್ಟಾರ್ ಪ್ರಚಾರಕರು ನಮ್ಮ ಪಕ್ಷದ ಕಾರ್ಯಕರ್ತರೇ. ಅವರಿದ್ದರೆ ಸಾಕು ಪಕ್ಷ ಗಟ್ಟಿಯಾಗಿರುತ್ತದೆ ಎಂದು ಹೇಳಿದರು. ಎಐಎಂಐಎಂ ಪಕ್ಷದವರು ರಾಜ್ಯದ ನಾಲ್ಕು ಕಡೆ ಹೊಂದಾಣಿಕೆ ಪ್ರಸ್ತಾಪ ಇಟ್ಟಿದ್ದಾರೆ. ಯಾವ ಕ್ಷೇತ್ರ ಕೊಡಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಇನ್ನೂ ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಗಿದಿಲ್ಲ. ಅದು ಮುಗಿದ ಮೇಲೆ ಯಾರು ನಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂಬುದು ನಿರ್ಧಾರ ಆಗುತ್ತದೆ. ಅನೇಕರು ಈಗಾಗಲೇ ಸಂಪರ್ಕದಲ್ಲಿದ್ದಾರೆ. ನಮ್ಮ ಪಕ್ಷಕ್ಕೆ ಸೂಕ್ತವಾದ, ಗೆಲ್ಲಬಹುದಾದ ಅಭ್ಯರ್ಥಿ ಎಂದೆನಿಸಿದರೆ ಅಂಥವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತೇನೆ ಎಂದರು.