ಕಾಂಗ್ರೆಸ್ ಲಿಂಗಾಯತರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ

ನಳಿನ್‌ಕುಮಾರ್ ಕಟೀಲ್
Advertisement

ಮಂಗಳೂರು: ಬಿಜೆಪಿ ಮಾತ್ರ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುತ್ತದೆ. ಬೇರೆ ಯಾವ ಪಕ್ಷಕ್ಕೂ ಆ ತಾಕತ್ತಿಲ್ಲ, ಇದ್ದರೆ ಘೋಷಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್ ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ. ಕಾಂಗ್ರೆಸ್‌ಗೆ ಬಹಳ ಕ್ಷೇತ್ರದಲ್ಲಿ ಅಭ್ಯರ್ಥಿ ಕೊರತೆ ಇದೆ. ಡಿಸೆಂಬರ್‌ನಲ್ಲೇ ಅವರು ಆಯ್ಕೆ ಪ್ರಕ್ರಿಯೆ ಆರಂಭಿಸಿದರೂ ಈವರೆಗೆ ಆಗಿಲ್ಲ. ನಾವು ಹತ್ತು ದಿವಸದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮುಗಿಸಿದ್ದೇವೆ. ನಾಲ್ಕು ತಿಂಗಳಾದರೂ ಅವರಿಗೆ ಅಭ್ಯರ್ಥಿ ಕೊರತೆಯಿದೆ, ನಮ್ಮ ಬಂಡುಕೋರರಾಗಿ ಹೊರ ಬರುವ ಅಭ್ಯರ್ಥಿಗಳನ್ನು ಕಾಯುತ್ತಿದ್ದಾರೆ. ಕಾಂಗ್ರೆಸ್‌ನ ಹೀನಾಯ ಸ್ಥಿತಿ ನೋಡಿ ಬೇಜಾರಾಗುತ್ತಿದೆ ಎಂದರು.
ಬಿ.ಎಲ್. ಸಂತೋಷ್ ವಿರುದ್ಧ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಹಿರಿಯರ ಮನವೊಲಿಕೆ ನಂತರವೂ ಬಿಜೆಪಿ ಬಿಟ್ಟಿದ್ದಾರೆ. ಕೊನೆಯ ತನಕ ಪ್ರಯತ್ನ ಆಗಿದೆ, ರಾಷ್ಟ್ರೀಯ ನಾಯಕರು ಮನೆ ಬಾಗಿಲಿಗೆ ಹೋದರೂ ಗೌರವ ಕೊಡದೇ ಹೋಗಿದ್ದಾರೆ. ನಮ್ಮಲ್ಲಿ ಪಾರ್ಲಿಮೆಂಟರಿ ಬೋರ್ಡ್, ಎಲೆಕ್ಷನ್ ಕಮಿಟಿ ನಿರ್ವಹಣೆ ಮಾಡಿ ಅಭ್ಯರ್ಥಿ ಆಯ್ಕೆ ಆಗುತ್ತದೆ. ಯಾರೇ ಒಬ್ಬರು ನಮ್ಮಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲ್ಲ. ಎಲ್ಲಾ ಒಮ್ಮತದ ಅಭಿಪ್ರಾಯದ ಮೇಲೆ ಚುನಾವಣಾ ಪ್ರಕ್ರಿಯೆ ನಡೆಯುತ್ತದೆ. ಸಂತೋಷ್ ಅವರು ನಮ್ಮ ಸಂಘಟನಾ ಕಾರ್ಯದರ್ಶಿ, ಅವರು ಸಂಘಟನೆ ಕಾರ್ಯ ಮಾಡುತ್ತಾರೆ ಎಂದರು.
ಪುತ್ತೂರಿನಲ್ಲಿ ಬಿಜೆಪಿ ವಿರುದ್ಧ ಹಿಂದೂ ಮುಖಂಡ ಅರುಣ್ ಪುತ್ತಿಲ ಬಂಡಾಯ ವಿಚಾರದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಆದರೆ ಪುತ್ತೂರು ಬಿಜೆಪಿ ಭದ್ರಕೋಟೆ, ಇಲ್ಲಿ ಬಿಜೆಪಿ ಜಯ ಸಾಧಿಸುತ್ತೆ. ಬಿಜೆಪಿ ಗೆಲ್ಲುತ್ತದೆ. ಕಾರ್ಯಕರ್ತರು ರಾಷ್ಟ್ರೀಯ ವಿಚಾರಧಾರೆ ಜೊತೆ ಕೈ ಜೋಡಿಸ್ತಾರೆ. ಬಿಜೆಪಿ ಯಾವುದನ್ನೂ ವಿರೋಧಿಸಲ್ಲ, ನಮಗೆ ಗೆಲುವಾಗುತ್ತೆ ಎಂದರು.