ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ: ಜೆ.ಪಿ.ನಡ್ಡಾ

ಜೆ ಪಿ ನಡ್ಡಾ
ಜೆ ಪಿ ನಡ್ಡಾ
Advertisement

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಅಭಿವೃದ್ಧಿಗೆ ಗರಿಷ್ಠ ಕೊಡುಗೆ ಕೊಟ್ಟಿದ್ದಾರೆ. ಇಲ್ಲಿನ ಜನೋತ್ಸಾಹ, ಭಾರಿ ಕರತಾಡನ ಗಮನಿಸಿದರೆ ಬೊಮ್ಮಾಯಿಯವರ ಗೆಲುವು ನಿಶ್ಚಿತವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ಶಿಗ್ಗಾವಿಯಲ್ಲಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಾಮಪತ್ರ ಸಲ್ಲಿಕೆ ಹಿನ್ನೆಲೆ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ವಿಕಾಸದ ಗಂಗಾನದಿ ಹರಿಯುವಂತಾಗಲು ಕಮಲದ ಚಿಹ್ನೆಗೆ ಮತ ಕೊಡಿ ಎಂದು ಅವರು ಮನವಿ ಮಾಡಿದರು.

ಕರ್ನಾಟಕದಲ್ಲಿ ವಿಕಾಸದ ಸ್ಥಿರತೆ ಇರಬೇಕು ಎಂಬುದು ಚುನಾವಣೆಯ ವಿಷಯ ಎಂದ ಅವರು, ಮೋದಿಜಿ ಅವರ ಆಶೀರ್ವಾದ ಮುಂದುವರಿಯಲು ಮತ್ತು ಅಭಿವೃದ್ಧಿಯನ್ನು ಮುಂದುವರಿಸಲು ಬಿಜೆಪಿಯನ್ನೇ ಗೆಲ್ಲಿಸಿ ಎಂದು ವಿನಂತಿಸಿದರು.

ಕಾಂಗ್ರೆಸ್ ಎಂದರೆ ಕಮಿಷನ್, ಭ್ರಷ್ಟಾಚಾರ, ಅಪರಾಧೀಕರಣದ ಪಕ್ಷ. ಕಾಂಗ್ರೆಸ್ ಮುಖಂಡರು ನೇತಾರರಾಗಿ ಉಳಿದಿಲ್ಲ. ಅವರು ಎಟಿಎಂ ಚಲಾಯಿಸುವ ವ್ಯಕ್ತಿಗಳಾಗಿದ್ದಾರೆ ಎಂದು ಟೀಕಿಸಿದರು.

ಮೋದಿಯವರು ಕಳುಹಿಸಿದ ಅಭಿವೃದ್ಧಿಗೆ ಸಂಬಂಧಿಸಿದ ಹಣವನ್ನು ದೆಹಲಿ ಕಾಂಗ್ರೆಸ್‍ಗೆ ವರ್ಗಾಯಿಸುವ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಬೇಕೇ ಎಂದು ಪ್ರಶ್ನಿಸಿದರು.

ಕರ್ನಾಟಕಕ್ಕೆ ಮೋದಿಜಿ ಅವರು ಕಳುಹಿಸಿದ ಹಣ ಸಮರ್ಪಕವಾಗಿ ಬಳಕೆಯಾಗಲು ಇಲ್ಲಿ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆಯಲು ಕಮಲದ ಚಿಹ್ನೆಯನ್ನು ಬೆಂಬಲಿಸಿ ಎಂದು ಕೋರಿದರು. ರಸ್ತೆಗಳ ನಿರ್ಮಾಣ, ಅಭಿವೃದ್ಧಿ, ತುಮಕೂರಿನಲ್ಲಿ ಹೆಲಿಕಾಪ್ಟರ್ ನಿರ್ಮಾಣದ ಕೈಗಾರಿಕೆ ಆರಂಭಿಸಿದ್ದನ್ನು ವಿವರಿಸಿದ ಅವರು, ವಿಮಾನನಿಲ್ದಾಣಗಳ ನಿರ್ಮಾಣ, ವಂದೇ ಭಾರತ್ ರೈಲುಗಳ ಆರಂಭಕ್ಕೆ ಕಮಲದ ಚಿಹ್ನೆಗೆ ಮತ ಕೊಡಿ ಎಂದು ತಿಳಿಸಿದರು.

ಇದಕ್ಕೂ ಮೊದಲು ಶಿಗ್ಗಾವಿಯಲ್ಲಿ ಸಿಎಂ ಬಸರಾಜ ಬೊಮ್ಮಾಯಿಯೊಂದಿಗೆ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಿತ್ರನಟ ಕಿಚ್ಚ ಸುದೀಪ್, ಸಚಿವರಾದ ಬಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲ ಇದ್ದರು