ಬಿಜೆಪಿ ಅಭ್ಯರ್ಥಿಗೆ ನಾಮಪತ್ರ ತಿರಸ್ಕಾರ ಭೀತಿ

ಸವದತ್ತಿ
Advertisement

ಬೆಳಗಾವಿ: ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರದಲ್ಲಿ ಗೊಂದಲವಿದ್ದು, ಇಂದುಬೆಳಗ್ಗೆ 10ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಚುನಾವಣಾಧಿಕಾರಿ ಡಾ.ರಾಜೀವ್ ಕೂಲೇರ್ ಅವರು ನೋಟಿಸ್ ನೀಡಿದ್ದಾರೆ. ರತ್ನಾ ಮಾಮನಿ ಅವರು ಅಫಿಡೆವಿಟ್ ಸಲ್ಲಿಕೆ ವೇಳೆ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘಸಿದ್ದಾರೆಂದು ಸವದತ್ತಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಬಾಪುಗೌಡ ಪಾಟೀಲ್ ನಿನ್ನೆ ನಾಮಪತ್ರ ಪರಿಶೀಲನೆ ವೇಳೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ರತ್ನಾ ಮಾಮನಿ ಅವರು ಏ.18 ಹಾಗೂ ಏ.19ರಂದು ಎರಡು ಬಾರಿ ನಾಮಪತ್ರ ಸಲ್ಲಿಸಿದ್ದರು. ಎರಡೂ ಬಾರಿಯೂ ಪ್ರಜಾಪ್ರತಿನಿಧಿ ಕಾಯ್ದೆ 2019ರ ತಿದ್ದುಪಡಿ ಪ್ರಕಾರ ಪರಿಷ್ಕೃತ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸದೆ, 2018ರ ಮಾದರಿಯ ಫಾರ್ಮ್ ಸಂಖ್ಯೆ 26 (ಅಫಿಡೆವಿಟ್) ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷದ​ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ರತ್ನಾ ಮಾಮನಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ವಿಪಕ್ಷಗಳು ಆಗ್ರಹಿಸುತ್ತಿವೆ.
ಡಿಕೆಶಿ ಪ್ರತಿಕ್ರಿಯೆ: ಸವದತ್ತಿ ಯಲ್ಲಮ್ಮ ಕ್ಷೇತ್ರ ಬಿಜೆಪಿ ಅಭ್ಯರ್ಥಿ ರತ್ನಾಮಾಮನಿ ನಾಮಪತ್ರದಲ್ಲಿರುವ ಲೋಪದೋಷಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ದೊಡ್ಡ ಯಡವಟ್ಟಾಗಿದೆ. ಅದರ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಒತ್ತಡ ಮಾಡುತ್ತಿದ್ದಾರೆ. ಚುನಾವಣಾಧಿಕಾರಿಗಳಿಗೆ ಮುಖ್ಯಮಂತ್ರಿ ಆದೇಶದ ಮೇರೆಗೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದರು.