ಮುರುಘಾಶ್ರೀಗೆ ಸೆ. 14ರ ವರೆಗೆ ಜೈಲುವಾಸ

ಮುರುಘಾ ಶ್ರೀ
Advertisement

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಪೋಕ್ಸೋ ಪ್ರಕರಣ ಬಂಧಿಯಾಗಿರುವ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಸೆ.14 ರವರೆಗೆ ಜೈಲುವಾಸ ಫಿಕ್ಸ್ ಆಗಿದೆ.
2ನೇ ಅಪರ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯವು ಕಳೆದ ಆ.31 ರಂದು ಡಾ.ಮುರುಘಾ ಶರಣರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಇದಾದ ಬಳಿಕಾ ಶ್ರೀಗಳು ತೀವ್ರವಾದ ಎದೆ ನೋವು ಎಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ನ್ಯಾಯಾಧೀಶರು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶಿಸಿದ್ದರು.
ಅದರಂತೆ ಇಂದು ನ್ಯಾಯಾಲಯಕ್ಕೆ ಪೊಲೀಸರು ಶ್ರೀಗಳನ್ನು ಹಾಜರು ಪಡಿಸಿ, ಶ್ರೀಗಳ ವಿಚಾರಣೆ ಮುಗಿದಿದೆ. ಕಸ್ಟಡಿಗೆ ಬೇಡ ಎಂದ ಪೊಲೀಸರು ತಿಳಿಸಿದ ಮೇರೆಗೆ ಸೆ.14 ರ ವರೆಗೆ ಜೈಲು ವಾಸದಲ್ಲಿರುವಂತೆ 2ನೇ ಅಪರ ಮತ್ತು ಸತ್ರ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಆದೇಶಿಸಿದರು.
ಇದರಿಂದ ಮುರುಘಾ ಶರಣರ ಆಸ್ಪತ್ರೆ ಹೈಡ್ರಾಮಕ್ಕೆ ನ್ಯಾಯಾಧೀಶರು ಬ್ರೇಕ್ ಹಾಕಿದಂತಾಗಿದ್ದು, ಇನ್ನೂ 9 ದಿನ ನ್ಯಾಯಾಂಗ ಬಂಧನ ಅನುಭವಿಸಬೇಕಾಗಿದೆ.
ಸಂತ್ರಸ್ತ ಬಾಲಕಿಯರ ಪರ ಸರ್ಕಾರಿ ಅಭಿಯೋಜಕಿ ನಾಗವೇಣಿ ವಾದ ಮಂಡನೆ ಮಾಡಿದ್ದು, ಮುರುಘಾ ಶರಣರ ಪರ ವಕೀಲ ಉಮೇಶ್ ಅವರು ವಾದ ಮಂಡನೆ ಮಾಡಿದರು.
ಇನ್ನೂ ಡಾ.ಮುರುಘಾ ಶರಣರ ಜೈಲು ಬಂಧನದಿಂದ ಹೊರ ಬರಲು ಜಾಮೀನು ಅರ್ಜಿಯನ್ನು ವಕೀಲರು ಸಲ್ಲಿಸಿದ್ದು, ಅಕ್ಷೇಪಣಾ ಅರ್ಜಿ ಸಲ್ಲಿಸಲು ಸೆ.7 ರ ವರೆಗೆ ನ್ಯಾಯಾಧೀಶೆ ಬಿ.ಕೆ ಕೋಮಲಾ ಅವರು ಗಡುವು ನೀಡಿದ್ದಾರೆ.
ಮತ್ತೊಂದೆಡೆ ಪ್ರಕರಣದ ಎರಡನೇ ಆರೋಪಿಯಾಗಿರುವ ಹಾಸ್ಟೆಲ್ ವಾರ್ಡನ್ ರಶ್ಮಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಬೇಕು ಎಂದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.