ಬಸವ ಜನ್ಮಭೂಮಿಯಲ್ಲಿ ಸಂಭ್ರಮದ ತೊಟ್ಟಿಲೋತ್ಸವ

Advertisement

ವಿಜಯಪುರ(ಬಸವನಬಾಗೇವಾಡಿ): ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬಸವ ಜಯಂತಿಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದಲ್ಲಿ ಭಕ್ತರು ಬೆಳಗ್ಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿದರು. ಬಸವ ಜಯಂತಿ ಅಂಗವಾಗಿ ಬಸವೇಶ್ವರ ದೇವಸ್ಥಾನ, ಬಸವೇಶ್ವರ ವೃತ್ತವನ್ನು ಅಲಂಕರಿಸಲಾಗಿತ್ತು.
ಸಂಪ್ರದಾಯದಂತೆ ಬಸವೇಶ್ವರ ದೇವಸ್ಥಾನದಿಂದ ವಿರಕ್ತಮಠಕ್ಕೆ ತೆರಳಿ ವಿರಕ್ತಮಠದ ಶ್ರೀಗಳನ್ನು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಶ್ರೀಗಳು ಎರಡು ದಿನಗಳಿಂದ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶಿವಭಜನೆಗೆ ಪೂಜೆ ಸಲ್ಲಿಸಿ ಮಂಗಳಾರತಿ ಜರುಗಿದ ನಂತರ ಶಿವಭಜನೆ ಮುಕ್ತಾಯಗೊಳಿಸಿದರು. ನಂತರ ಬಸವೇಶ್ವರ ದೇವಸ್ಥಾನದಲ್ಲಿ ಸಿದ್ದಲಿಂಗ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜರುಗಿತು. ಉಭಯ ಶ್ರೀಗಳು ಬೆಳ್ಳಿ ಬಾಲ ಬಸವ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿದರು. ಸುಮಂಗಲೆಯರು ನಾಮಕರಣ ಮಾಡುವ ಪದ್ಧತಿ ನೆರವೇರಿಸಿ ಜೋಗುಳ ಪದ ಹಾಡಿದರು. ಭಕ್ತರು ಕಾಯಿ, ಕರ್ಫೂರ ನೈವೇದ್ಯದೊಂದಿಗೆ ಬಸವೇಶ್ವರ ದೇವಸ್ಥಾನ ಹಾಗೂ ಬಸವಜನ್ಮ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು.