ಅಮಿತ್ ಶಾ ಬಂದು ಅಜೆಂಡಾ ಮಾಡ್ತಾರೆ ಅಂದ್ರೆ, ಶೆಟ್ಟರ ಸಾಮರ್ಥ್ಯ ಅಲ್ಲವೇ?

ಜಗದೀಶ ಶೆಟ್ಟರ್‌
Advertisement

ಹುಬ್ಬಳ್ಳಿ: ಬಿಜೆಪಿಯವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಡಿಸ್ಟರ್ಬ್ ಮಾಡಿದ್ರೆ ಇಡೀ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಡಿಸ್ಟರ್ಬ್ ಆಗುತ್ತದೆ. ಚುನಾವಣೆ ಫಲಿತಾಂಶದ ಬಳಿಕ ಜಗದೀಶ ಶೆಟ್ಟರ ಏನು ಎಂಬುದು ಬಿಜೆಪಿಯವರಿಗೆ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೆಂಟ್ರಲ್ ಕ್ಷೇತ್ರವನ್ನು ಸೆಂಟರ್ ಸ್ಟೇಜ್‌ಗೆ ತಂದವರೇ ಬಿಜೆಪಿಯವರು. ನನ್ನನ್ನು ಡಿಸ್ಟರ್ಬ್ ಮಾಡಿ ಬಿಜೆಪಿ ತಳಪಾಯ ಹಾಳು ಮಾಡಿಕೊಂಡಿದ್ದಾರೆ. ನನ್ನನ್ನು ಕಡೆಗಣಿಸಿದ್ದಕ್ಕೆ ಬಿಜೆಪಿ ಹಣೆಬರಹ ಏನು ಎಂಬುದು ಈಗ ಗೊತ್ತಾಗುತ್ತಿದೆ. ಶೆಟ್ಟರ್ ಸೋಲಿಸಲು ಅಮಿತ್ ಶಾ ಹುಬ್ಬಳ್ಳಿಗೆ ಬಂದು ಅಜೆಂಡಾ ಮಾಡುತ್ತಾರೆ ಎಂದರೆ ಶೆಟ್ಟರ ಸಾಮರ್ಥ್ಯ ಏನು ಎಂಬುದು ತಿಳಿಯಿತಲ್ಲಾ ಎಂದು ಶೆಟ್ಟರ ಹೇಳಿದರು.
ನಾನು ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದವ. ನಾನು ಏನು ಅನ್ಯಾಯ ಮಾಡಿದ್ದೆ? ನಾನು ಸಂಘಟನೆ ಮಾಡಿದ್ದರಿಂದಲೇ ಪಕ್ಷ ಇಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಅಷ್ಟೊಂದು ಬಲಿಷ್ಠವಾಗಿ ಯಾಕೆ ಬೆಳೆಯಲಿಲ್ಲ? ನಾನು ಜೀರೊದಿಂದ ಪಕ್ಷ ಕಟ್ಟಿ ಬೆಳೆಸಿದ್ದೇ ತಪ್ಪಾಗಿ ಹೋಯಿತೇ ಎಂದು ಹೇಳುವ ಮೂಲಕ ಬಿಜೆಪಿ ವರಿಷ್ಠರಿಗೆ ಪ್ರಶ್ನೆಗಳ ಸುರಿಮಳೆಗೈದರು.
ಸಂತೋಷ, ಜೋಶಿ, ಬೊಮ್ಮಾಯಿ ಕಪಿಮುಷ್ಠಿಯಲ್ಲಿ ಬಿಜೆಪಿ ಇದೆ. ಇವರೇ ನನಗೆ ಟಿಕೆಟ್ ತಪ್ಪಲು ಕಾರಣ. ಇವರೆಲ್ಲರೂ ನಿರ್ಧಾರ ಮಾಡಿ ಪಕ್ಷದ ರಾಷ್ಟ್ರೀಯ ನಾಯಕರಿಂದ ಹೇಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.