ಸೃಜನಶೀಲತೆಯ ಪಾಠ

ಗುರುರಾಜ ಕರಜಗಿ
Advertisement

ಶಿಕ್ಷಕರ ತರಬೇತಿ ಕೇಂದ್ರ ಬಹುಬೇಗನೆ ಹೆಸರು ಪಡೆಯುತ್ತಿತ್ತು. ಅದರ ಪಠ್ಯಕ್ರಮದಲ್ಲಿ ಸೃಜನಶೀಲತೆಯನ್ನು ಸೇರಿಸಿದ್ದು ಹೆಗ್ಗಳಿಕೆಯಾಗಿತ್ತು. ಅದುವರೆಗೂ ಪ್ರಪಂಚದ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಸೃಜನಶೀಲತೆ ಎಂಬ ವಿಷಯದ ಮೇಲೆ ಪೂರ್ಣಪ್ರಮಾಣದ ಪಠ್ಯಕ್ರಮ ಇರಲಿಲ್ಲ. ನಾನು ಅದನ್ನು ಸಿದ್ಧಪಡಿಸುವಾಗ ತುಂಬ ತಲೆ ಕೆಡಿಸಿಕೊಂಡಿದ್ದೆ. ಎಷ್ಟೊಂದು ಪುಸ್ತಕಗಳು, ವೆಬ್‌ಸೈಟುಗಳು, ಬ್ಲಾಗ್‌ಗಳು ಇವನ್ನೆಲ್ಲ ಹೆಚ್ಚು ಹೆಚ್ಚು ಓದಿದ ಹಾಗೆ ಅದನ್ನೊಂದು ಪಠ್ಯಕ್ರಮದಲ್ಲಿ ಜೋಡಿಸುವುದು ಕಷ್ಟಸಾಧ್ಯವೆನ್ನಿಸಿತ್ತು. ಆದರೆ ಹಟವೊಂದಿತ್ತಲ್ಲ. ಹೇಗಾದರೂ ಮಾಡಿ ಶಿಕ್ಷಕರು ವಿಭಿನ್ನ ರೀತಿಯಲ್ಲಿ ಯೋಚಿಸಿ, ಸೃಜನಶೀಲವಾಗಿ ಪಾಠ ಮಾಡುವುದನ್ನು ಕಲಿಸಬೇಕು ಎಂಬ ಹಟ.
ನಾನು ಅನೇಕರೊಂದಿಗೆ ಚರ್ಚಿಸಿದಾಗ ಬಹುಪಾಲು ಜನ ನನಗೆ ನಿರಾಸೆಯನ್ನೇ ಉಂಟು ಮಾಡಿದರು. “ಸೃಜನಶೀಲತೆಯನ್ನು ಕಲಿಸಲು ಸಾಧ್ಯವೇ?” ಎಂದು ಕೆಲವರು ಕೇಳಿದರೆ, ಮತ್ತೆ ಕೆಲವರು, “ಸೃಜನಶೀಲತೆ ಎನ್ನುವುದು ಹುಟ್ಟಿನಿಂದಲೆ ಬಂದದ್ದು. ಅದನ್ನು ಕಲಿಸುವುದು ಸಾಧ್ಯವಿಲ್ಲ” ಎಂದು ಭರತವಾಕ್ಯವನ್ನು ನುಡಿದುಬಿಟ್ಟರು. ಆದರೆ ನನಗೆ ಅದರ ಬಗ್ಗೆ ಖಚಿತವಾದ ನಂಬಿಕೆ ಇತ್ತು. ಸೃಜನಶೀಲತೆಯನ್ನು ಬೆಳೆಸಿಕೊಳ್ಳಬಹುದು. ಅದೊಂದು ಉಪಕರಣವಿದ್ದ ಹಾಗೆ.
ಒಬ್ಬ ರೈತನಿದ್ದಾನೆಂದು ಕಲ್ಪಿಸಿ. ಅವನಿಗೆ ಎರಡು ಎಕರೆ ನೆಲವಿದೆ. ಅವಳ ಬಳಿ ಎತ್ತು, ನೇಗಿಲು ಮತ್ತಾವ ಪರಿಕರಗಳೂ ಇಲ್ಲ. ಆತ ಕೈಯಿಂದಲೇ ನೆಲವನ್ನು ಕೆರೆದು ಅಲ್ಲಲ್ಲಿ ಬೀಜ ಹಾಕುತ್ತಾನೆ. ಸ್ವಲ್ಪ ಬೆಳೆಯೂ ಬರುತ್ತದೆ. ಅದೂ ಒಕ್ಕಲುತನವೇ. ಅವನಿಗೆ ಯಾರೋ ಒಬ್ಬರು ಒಂದು ಪುಟ್ಟ ಪಿಕಾಸೆಯನ್ನು ಕೊಟ್ಟರು ಎಂದಿಟ್ಟುಕೊಳ್ಳಿ. ಆತ ಅದರಿಂದ ನೆಲವನ್ನು ಅಗಿದಗಿದು ಬೀಜಗಳನ್ನು ನೆಡುತ್ತಾನೆ. ಆಗ ಸ್ವಲ್ಪ ಹೆಚ್ಚಿನ ಬೆಳೆ ಬರುತ್ತದೆ, ಯಾಕೆಂದರೆ ಹೆಚ್ಚು ಬೀಜಗಳನ್ನು ನೆಡುತ್ತಾನೆ. ಮತ್ತಾರೋ ಅವನಿಗೆ ಎರಡು ಎತ್ತುಗಳು ಮತ್ತು ನೇಗಿಲನ್ನು ಕೊಟ್ಟರು ಎಂದಿಟ್ಟುಕೊಳ್ಳಿ. ಆಗ ಏನಾಗುತ್ತದೆ? ಈ ಬಾರಿ ಫಸಲು ಚೆನ್ನಾಗಿ ಬರುತ್ತದೆ. ಯಾಕೆಂದರೆ ಅವನ ಬಳಿ ಸುಧಾರಿತ ಉಪಕರಣಗಳಿವೆ. ಅವನ ಪ್ರಯತ್ನವನ್ನು ಕಂಡು ಇನ್ನೊಬ್ಬರು ರೈತನಿಗೆ ಒಂದು ಅತ್ಯಂತ ನವೀನ ಟ್ರ್ಯಾಕ್ಟರ್ ಕೊಟ್ಟರು ಎನ್ನಿ, ಆಗ ಅವನ ಕೃಷಿ ಹೇಗಾಗುತ್ತದೆ? ಅವನ ಆದಾಯ ತುಂಬ ಹೆಚ್ಚಾಗುವುದಿಲ್ಲವೆ? ದಯವಿಟ್ಟು ಗಮನಿಸಿ. ಅದೇ ರೈತ ಮತ್ತು ಅದೇ ಹೊಲ. ಅವನ ಬಳಿಯಿದ್ದ ಉಪಕರಣಗಳ ಗುಣಮಟ್ಟ ಹೆಚ್ಚಾದಂತೆ ಅವನ ಉತ್ಪಾದಕತೆ ಹೆಚ್ಚಾಗುತ್ತದೆ. ಪ್ರತಿಯೊಬ್ಬ ಮನುಷ್ಯನ ಸ್ಥಿತಿಯೂ ಹಾಗೆಯೇ. ಹೊಸ ಅನುಭವಗಳು, ಹೊಸ ತಿಳುವಳಿಕೆಗಳು, ಹೊಸ ಪರಿಹಾರ ಸೂತ್ರಗಳು ನಮ್ಮ ಕ್ಷಮತೆಯನ್ನು ಹೆಚ್ಚಿಸುವುದರೊಂದಿಗೆ ಸೃಜನಶೀಲತೆಯನ್ನು ಬೆಳೆಸುತ್ತವೆ. ಯಾವ ಅನುಭವಗಳು, ಚಟುವಟಿಕೆಗಳು, ಸಮಸ್ಯಾ ಪೂರಣ ಕಲೆಗಳು (Problem solving skills) ನಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತವೋ ಅವುಗಳನ್ನೆಲ್ಲ ಒಂದು ಕಡೆಗೆ ತಂದು ಗುಡ್ಡೆ ಹಾಕಿದೆ. ನಂತರ ಅವುಗಳನ್ನು ಪರಿಷ್ಕರಿಸಿ, ತರ್ಕಬದ್ಧವಾಗಿ ಜೋಡಿಸಿ ಪಠ್ಯಕ್ರಮವನ್ನು ಮಾಡಿದೆ. ಆದರೆ ಅದು ಸರಿಯಿದೆಯೋ ಎಂದು ಪರೀಕ್ಷಿಸಲು ನಮ್ಮದೇ ಸಂಸ್ಥೆಯ ಶಾಲೆ, ಕಾಲೇಜುಗಳಲ್ಲಿ ಪ್ರಯೋಗಮಾಡಿ ನೋಡಿದೆ. ಪ್ರತಿಕ್ರಿಯೆ ಅದ್ಭುತವಾಗಿತ್ತು. ಮತ್ತಷ್ಟು ಚಟುವಟಿಕೆಗಳನ್ನು ಸೇರಿಸಿದೆ, ಅನವಶ್ಯಕವಾದ ಸಿದ್ಧಾಂತಗಳನ್ನು ತೆಗೆದು ಹಾಕಿದೆ. ಮತ್ತೆ ಕೆಲವು ಶಾಲೆಗಳ ಶಿಕ್ಷಕರಿಗೆ ಮಾತ್ರ ಈ ಪಠ್ಯಕ್ರಮದ ಕೆಲಭಾಗಗಳ ಪಾಠ ಮಾಡಿದೆ. ಅವರ ಪ್ರತಿಕ್ರಿಯೆಯಂತೂ ನನಗೆ ಅಮಿತ ವಿಶ್ವಾಸವನ್ನು ಕೊಟ್ಟಿತು.
ಇವೆಲ್ಲ ಕ್ರಿಯೆಗಳು ನಡೆದು, ಅದು ಪ್ರಯೋಜನಕಾರಿಯಾಗುತ್ತದೆಂದು ಖಾತ್ರಿಯಾದ ಮೇಲೆ ನಮ್ಮ ಸಂಸ್ಥೆಯ ತರಗತಿಯಲ್ಲಿ ಪಾಠ ಮಾಡತೊಡಗಿದೆ. ಕೆಲವು ಚಟುವಟಿಕೆಗಳಿಗೆ ಆಟದ ಸಾಮಾನುಗಳನ್ನು ಸಿದ್ಧಗೊಳಿಸಲು ಅನೇಕರನ್ನು ಸಂಪರ್ಕಿಸಿದೆ. ಅದರಲ್ಲಿ ಖ್ಯಾತ ಜಾದೂಗಾರರಾದ ಶ್ರೀ ಉದಯ ಜಾದೂಗಾರ ತುಂಬ ಸಹಾಯ ಮಾಡಿದರು. ಅವರ ಕಂಪನಿಯಲ್ಲಿದ್ದ ಯಂತ್ರದಲ್ಲಿ ಪ್ಲಾಸ್ಟಿಕ್‌ನ ಅನೇಕ ಕಲಿಕಾ ಸಾಮಗ್ರಿಗಳನ್ನು ಮಾಡಿಕೊಟ್ಟರು. ಅವು ಇಂದಿಗೂ ಬಹಳ ಪ್ರಸಿದ್ಧಿ ಪಡೆದಿವೆ.
ಈ ಪಠ್ಯಕ್ರಮ ನನಗೆ ಬಹುದೊಟ್ಟ ಮನ್ನಣೆಯನ್ನು ನೀಡಿದೆ. ಯಾವಾಗ ಪಠ್ಯಕ್ರಮದ ರೂಪು-ರೇಷೆಗಳನ್ನು ನಾನು ಇಂಟರ್‌ನೆಟ್‌ನಲ್ಲಿ ಹಾಕಿದೆನೋ, ಅನೇಕ ಕಡೆಗಳಿಂದ ಅದರ ಬಗ್ಗೆ ವಿಚಾರಣೆಗೆ ಫೋನ್‌ಗಳು, ಈ-ಮೇಲ್‌ಗಳು ಬರತೊಡಗಿದವು. ಎರಡು ವರ್ಷಗಳಲ್ಲಿ ಆಸ್ಟ್ರಿಯಾ ದೇಶದ ವಿಯೆನ್ನಾದ ಒಂದು ವಿಶ್ವವಿದ್ಯಾಲಯ ನನ್ನಿಂದ ಪ್ರಾಯೋಗಿಕ ತರಬೇತಿಯನ್ನು ಕೇಳಿತು. ನಾನು ಹೋಗಿ ಮೂರು ದಿನಗಳ ತರಬೇತಿ ನಡೆಸಿ ಬಂದೆ. ಅದು ಅವರಿಗೆ ಎಷ್ಟು ಪ್ರಿಯವಾಯಿತೆಂದರೆ, ನಮ್ಮ ಇಡೀ ಪಠ್ಯಕ್ರಮವನ್ನು ಅವರು ಕಲಿಸಲು ತೀರ್ಮಾನಿಸಿ ನನ್ನನ್ನು ಅದನ್ನು ಪ್ರಾರಂಭವಾಡಲು ಬರಬೇಕೆಂದು ಆಹ್ವಾನಿಸಿದರು. ಅಲ್ಲಿಗೆ ಹೋಗಿ, ಅಲ್ಲಿಯ ಅಧ್ಯಾಪಕರಿಗೆ ಅದನ್ನು ಹೇಗೆ ಪಾಠ ಮಾಡಬೇಕು ಎಂದು ತೋರಿಸಿ ಬಂದೆ. ಸತ್ಯ ಮತ್ತು ಒಳ್ಳೆಯ ಚಿಂತನೆಗಳು ಬಹು ಬೇಗ ಹರಡುತ್ತವೆ. ಈ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿದೆ ಎಂಬುದನ್ನು ತಿಳಿದು ಅಮೇರಿಕೆಯ ಓಕ್ಲೋಹೋಮಾ ವಿಶ್ವವಿದ್ಯಾಲಯದವರು ಅಲ್ಲಿಯೂ ಅದನ್ನು ಪ್ರಾರಂಭಿಸಿದರು. ನಾನು ಅಲ್ಲಿಗೂ ಹೋಗಿ ಅವರಿಗೆ ಕಲಿಸಿ ಬಂದದ್ದಾಯಿತು. ಅಲ್ಲಿಂದ ಅದು ವಾಶಿಂಗ್‌ಟನ್ ವಿಶ್ವವಿದ್ಯಾಲಯಕ್ಕೆ, ಇಂಗ್ಲೆಂಡಿನ ವಾರ್‌ವಿಕ್ ವಿಶ್ವವಿದ್ಯಾಲಯಕ್ಕೆ, ಅಮೇರಿಕೆಯ ಬಫೆಲೋ ವಿಶ್ವವಿದ್ಯಾಲಯಕ್ಕೆ ಹೋಯಿತು. ನನಗೂ ಇದರಿಂದಾಗಿ ವಿಶ್ವ ಸುತ್ತುವಂತಾಯಿತು. ಒಂದು ವರ್ಷವಂತೂ ವರ್ಷದಲ್ಲಿ ನಾಲ್ಕು ತಿಂಗಳು ಹೊರಗೇ ಇರುವಂತಾಗಿ ಕಷ್ಟವಾಯಿತು. ಆಗ ನಾನು ತೀರ್ಮಾನಿಸಿದೆ. ಅಲೆಮಾರಿಯಂತೆ ಎಲ್ಲೆಲ್ಲೋ ಅಲೆಯದೆ, ನನ್ನ ದೇಶದಲ್ಲೇ ಇದನ್ನು ಹರಡುತ್ತೇನೆ. ಬೇರೆ ದೇಶದವರು ಬೇಕಾದರೆ ನಮ್ಮಲ್ಲಿಗೇ ಬಂದು ಕಲಿತುಕೊಂಡು ಹೋಗಲಿ ಎಂದು. ಅದರಂತೆ ಅನೇಕ ದೇಶದ ಶಿಕ್ಷಕರು, ವಿದ್ಯಾರ್ಥಿಗಳು ಪ್ರತಿವರ್ಷ ನಮ್ಮಲ್ಲಿಗೇ ಬಂದು ಕಲಿತು ಹೋಗತೊಡಗಿದರು. ಅಂತೂ ಪಠ್ಯಕ್ರಮ ಮತ್ತು ಅದರ ಕೆಲವು ವಿಶೇಷ ಭಾಗಗಳು ತುಂಬ ಜನಪ್ರಿಯ ಮಾತ್ರವಲ್ಲ, ಪ್ರಯೋಜನಕಾರಿಯಾದವು. ಅಮೇರಿಕೆಯಲ್ಲಿ ಬೇರೆ ಬೇರೆ ಕಡೆಗೆ ಪಾಠ ಮಾಡುವಾಗ ಜಗತ್ತಿನ ಸರ್ವಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಪ್ರಮುಖವಾದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಮತ್ತು ಹಾರ್ವರ್ಡ ಬಿಸಿನೆಸ್ ಸ್ಕೂಲ್‌ಗಳಿಂದ ಮೂರು-ನಾಲ್ಕು ದಿನಗಳ ಮಾರ್ಗದರ್ಶಿ ಉಪನ್ಯಾಸಗಳನ್ನು ನೀಡುವುದಕ್ಕೆ ಕರೆ ಬಂದಿತು. ಅದಾಗಲೇ ನಾನು ಕಲ್ಕತ್ತೆಯ ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ (IIM) ಯಲ್ಲಿ ಕೆಲವರ್ಷಗಳಿಂದ ಕೆಲವು ಭಾಗಗಳ ಮೇಲೆ ಉಪನ್ಯಾಸ ನೀಡಿದ್ದೆ.
ಇದು ಭಗವಂತನ ಕೃಪೆ. ನಾನು ಮೂಲತ: ವಿಜ್ಞಾನದ ವಿದ್ಯಾರ್ಥಿ. ನಾನು. ಎಂ.ಬಿ.ಎ ಯನ್ನು ಮಾಡಿಲ್ಲ, ಆ ವಿಷಯದಲ್ಲಿ ಡಾಕ್ಟರೇಟೂ ಪಡೆದಿಲ್ಲ. ಆದರೆ ಇಂಥ ಬಹು ಪ್ರಖ್ಯಾತವಾದ ಸಂಸ್ಥೆಗಳಲ್ಲಿ ಪಾಠ ಮಾಡುವ ಅವಕಾಶಗಳನ್ನು ಭಗವಂತ ಒದಗಿಸಿದ್ದ. ಒಂದು ಸಲ ನಡೆದ ಘಟನೆ ನನಗೆ ಚೆಂದದ ಪಾಠವನ್ನು ಕಲಿಸಿತ್ತು. ದೊಡ್ಡ ಸಂಸ್ಥೆಗಳಲ್ಲಿ ಕಾರ್ಯಮಾಡುವಾಗ ಅಹಂಕಾರ ಬರುತ್ತದೋ, ಮನಸ್ಸು ಪೂರ್ವಾಗ್ರಹ ಪೀಡಿತವಾಗುತ್ತದೆಯೋ ಅಥವಾ ಎರಡೂ ಆಗುತ್ತದೆಯೋ ತಿಳಿಯದು. ಹಾರ್ವರ್ಡನಲ್ಲಿ ಪಾಠ ಮಾಡುವ ಮೊದಲು ನನಗೆ ಯಾರೋ ಹೇಳಿದ್ದರು, ಈ ಮಕ್ಕಳಿಗೆ ಕೋಡು ಇರುತ್ತದೆ. ಅವರೆಲ್ಲ ಅಹಂಕಾರಿಗಳು ಎಂದು. ಅದನ್ನು ನಾನು ನಂಬಿದ್ದು ತಪ್ಪು. ಒಂದು ತರಗತಿಯಲ್ಲಿ ಸುಮಾರು ಇನ್ನೂರು ಜನ ವಿದ್ಯಾರ್ಥಿಗಳಿದ್ದರು. ತರಗತಿಯ ಪಾಠ ಮುಗಿಯಿತು. ಆಗ ಒಬ್ಬ ಹುಡುಗಿ ಎದ್ದು ನಿಂತಳು. ನೇರವಾಗಿ ಕೇಳಿದಳು, ”Are you visiting professor?” (ತಾವು ಸಂದರ್ಶಕ ಪ್ರಾಧ್ಯಾಪಕರಾ?) ನಾನು ನಕ್ಕು ಹೇಳಿದೆ, “Ņo I am a Professor visit” (ಇಲ್ಲ, ನಾನೊಬ್ಬ ಪ್ರಾಧ್ಯಾಪಕ, ಸಂದರ್ಶನಕ್ಕೆ ಬಂದಿದ್ದೇನೆ) ಆಕೆಯೂ ನಕ್ಕಳು. “ನೀವು ಇಡೀ ಪಠ್ಯಕ್ರಮವನ್ನು ತೆಗೆದುಕೊಂಡರೆ ಚೆನ್ನಾಗಿತ್ತು” ಎಂದಳು. ನಾನು ತಕ್ಷಣ ಹೇಳಿದೆ, “ಬಹುಶ: ನೀವು ನನ್ನನ್ನು ಇಡೀ ವರ್ಷದ ಶಿಕ್ಷಕನನ್ನಾಗಿ ಒಪ್ಪಿಕೊಳ್ಳುತ್ತಿರಲಿಲ್ಲ”. ಆಕೆ, “ಯಾಕೆ ಹಾಗೆ ಹೇಳುತ್ತೀರಿ?” ಎಂದು ಕೇಳಿದರು. ಆಕೆ ತರಗತಿಯಲ್ಲಿ ಚ್ಯೂಯಿಂಗ್ ಗಮ್ ತಿನ್ನುವುದನ್ನು ಕಂಡಿದ್ದೆ. “ನನ್ನ ತರಗತಿಯಲ್ಲಿ ಚ್ಯೂಯಿಂಗ್ ಗಮ್ ತಿನ್ನುವುದು ನನಗಿಷ್ಟವಾಗುವುದಿಲ್ಲ. ನನ್ನ ದೇಶದಲ್ಲಿ ಅದು ಸಭ್ಯತೆಯಲ್ಲ” ಎಂದೆ. ಆಕೆ ಒರಟಾಗಿ, ನಾನು ಗಮ್ ತಿಂದರೆ ನಿಮಗೇನು ತೊಂದರೆ ಎಂದು ಕೇಳುತ್ತಾಳೆ ಎಂದುಕೊMಡಿದ್ದೆ. ಯಾಕೆಂದರೆ ಅವರೆಲ್ಲ ಅಹಂಕಾರಿಗಳು ಎಂದು ನಾನು ನಂಬಿದ್ದೆನಲ್ಲ. ಆಕೆ ತಕ್ಷಣ, “Oh! I am sorŗy I did not Know” (ಓಹ್, ಕ್ಷಮಿಸಿ. ನನಗದು ಗೊತ್ತಿರಲಿಲ್ಲ) ಎಂದು ತನ್ನ ಬ್ಯಾಗ್ ಬಿಚ್ಚಿ, ಅದರಿಂದ ಒಂದು ಟಿಶ್ಯೂ ಕಾಗದವನ್ನು ತೆಗೆದ್ದು ಚ್ಯೂಯಿಂಗ್ ಗಮ್‌ನ್ನು ಅದರೊಳಗಿರಿಸಿ ಮತ್ತೆ ಬ್ಯಾಗಿನಲ್ಲಿ ಹಾಕಿ, “Sorry Again” ಎಂದಳು. ನನಗೆ ಕೆನ್ನೆಗೆ ಹೊಡೆದಂತಾಯಿತು. ಆಕೆ ಅಹಂಕಾರಿ ಎಂದು ಭಾವಿಸಿದ್ದ ನಾನೇ ಅಹಂಕಾರಿಯMತೆ ವರ್ತಿಸಿದ್ದೆ, ಕೊಂಕು ಮಾತನಾಡಿದ್ದೆ. ತರಗತಿಯಲ್ಲೇ ಆಕೆಯ ಕ್ಷಮೆ ಕೇಳಿದೆ. ಮನಸ್ಸು ಹಗುರಾಯಿತು.
ಅಂದಿನಿಂದ ಯಾವುದೇ ತರಗತಿಗೆ ಹೋದರೂ ಮನಸ್ಸಿನಲ್ಲಿ ಯಾವುದೇ ಪೂರ್ವಾಗ್ರಹವನ್ನು ಇಟ್ಟುಕೊಳ್ಳದಂತೆ ಪ್ರಯತ್ನಿಸುತ್ತೇನೆ. ನಾವು ವಿದ್ಯಾರ್ಥಿಗಳಿಗೆ ಕಲಿಸುವುದಕ್ಕಿಂತ ಹೆಚ್ಚು ವಿದ್ಯಾರ್ಥಿಗಳೇ ನಮಗೆ ಕಲಿಸುತ್ತಾರಲ್ಲವೇ?