ತಂದೆ ಆತ್ಮಕ್ಕೆ ಶಾಂತಿ ದೊರೆಕಿಸಲು ಒದ್ದು ಹೊರಬನ್ನಿ

Advertisement

ಬಾಗಲಕೋಟೆ: ಆರು ಬಾರಿ ಶಾಸಕರನ್ನಾಗಿ ಮಾಡಿ ಎಲ್ಲ ಹುದ್ದೆಗಳನ್ನು ಒದಗಿಸಿದ ನಂತರವೂ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ತಮ್ಮ ತಂದೆ ಆತ್ಮಕ್ಕೆ ಶಾಂತಿ ದೊರೆಕಿಸಿಕೊಡಲು ಕಾಂಗ್ರೆಸ್ ಪಕ್ಷವನ್ನು ಒದ್ದು ಹೊರಬರಬೇಕೆಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಜಗದೀಶ ಶೆಟ್ಟರ ಅವರನ್ನು ಬಿಜೆಪಿ 6 ಬಾರಿ ಶಾಸಕರನ್ನಾಗಿ ಮಾಡಿದೆ. ಮುಖ್ಯಮಂತ್ರಿ, ವಿಪಕ್ಷ ನಾಯಕ ಸೇರಿದಂತೆ ನಾನಾ ಹುದ್ದೆಗಳನ್ನು ನೀಡಿದ ನಂತರವೂ ಪಕ್ಷ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಮುಸ್ಲಿಂರ ಟೋಪಿಯನ್ನು ಧರಿಸಿ ಒಂದೇ ನಿಮಿಷದಲ್ಲಿ ತೆಗೆದಿದ್ದಾರೆ. ಕಾಂಗ್ರೆಸ್ ಪಕ್ಷ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಮಾಡುವುದಾಗಿ ಹೇಳಿದೆ. ಶೆಟ್ಟರ್ ಮುಂದೆ ಗೋಹತ್ಯೆಯನ್ನು ಬೆಂಬಲಿಸುತ್ತಾರಾ ಎಂದು ಪ್ರಶ್ನೆ ಮಾಡಿದರು. ಬಿಜೆಪಿ ನಾಯಕತ್ವ, ಸಂಘಟನೆ, ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾರತದ ನಾಯಕರಲ್ಲ ಇಡೀ ವಿಶ್ವಕ್ಕೆ ಅವರು ನಾಯಕರಾಗಿದ್ದಾರೆ. ಅಮಿತ್ ಶಾ ರಂಥ ನಾಯಕತ್ವವಿದೆ. ಸಂಘಟನೆ ವಿಚಾರದಲ್ಲಿ ಪೇಜ್ ಪ್ರಮುಖರಿಂದ ನಾಯಕತ್ವವನ್ನು ಬೆಳೆಸುವ ಕೆಲಸ ಮಾಡುವುದರ ಜತೆಗೆ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರ್ವಸ್ಪರ್ಶಿಯಾಗಿರುವ ಆಡಳಿತವನ್ನು ನೀಡಿದೆ. ಇದೆಲ್ಲವನ್ನು ಜನರ ಮುಂದಿಡಲಾಗುತ್ತಿದೆ. ರಾಜ್ಯದಲ್ಲಿ ಜನರ ಸ್ಪಂದನೆಯನ್ನು ಗಮನಿಸಿದೆ 140ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಸ್ಲಿಂ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ನೀಡಿಲ್ಲ. ಕಾಂಗ್ರೆಸ್‌ನವರು ತಮ್ಮ ಮತ ಬ್ಯಾಂಕ್‌ಗಾಗಿ ಸೃಷ್ಟಿಸಿದ್ದರು. ಸಂವಿಧಾನದ ಪ್ರಕಾರ ಧರ್ಮಾಧಾರಿತ ಮೀಸಲಾತಿಗೆ ಅವಕಾಶವೇ ಇಲ್ಲ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗುತ್ತಿದ್ದ ಶೇ. 10 ಮೀಸಲಾತಿಯಲ್ಲಿ ಅವರಿಗೂ ಹಂಚಿಕೆ ಮಾಡಲಾಗಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೋಡಿದರೆ ಕಾನೂನು ಅರ್ಥವಾಗದ ದಡ್ಡ ಅನಿಸುತ್ತಿದ್ದಾರೆ ಎಂದರು.
ರವಿ ಹಿಂದೂತ್ವವಾದಿ ಯುವಕ ಸಿಎಂ ಆಗಬೇಕೆಂದಿದ್ದೇನೆ:
ದತ್ತಪೀಠದ ಹೋರಾಟದ ಮೂಲಕ ಹಿಂದೂ ಸಂಘಟನೆ ಮಾಡಿ ಬಿಜೆಪಿಗೆ ಬಂದಿರುವ ಸಿ.ಟಿ.ರವಿ ಯುವ ಮುಖವಾಗಿರುವುದರ ಜತೆಗೆ ಹಿಂದುತ್ವದ ಪ್ರತಿಪಾದಕರಾಗಿರುವುದರಿಂದ ಅವರು ಮುಖ್ಯಮಂತ್ರಿ ಆಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅದನ್ನು ಒಪ್ಪುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು.