ಕಾಯಕ ಮತ್ತು ದಾಸೋಹದ ಪ್ರೇರಣೆ ನಮ್ಮ ಅಭಿವೃದ್ಧಿ

Advertisement

ವಿಜಯಪುರ: ಕಾಯಕ, ದಾಸೋಹ ನಮಗೆ ಪ್ರೇರಣೆಯಾಗಿದೆ. ಬಸವೇಶ್ವರ ಹಾದಿಯಲ್ಲಿ ನಾವು ನಡೆಯುತ್ತೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸಮಾವೇಶದಲ್ಲಿ ಮಾತನಾಡಿರುವ ಅವರು, ಪಂಚನದಿಗಳ‌ ನಾಡು ವಿಜಯಪುರ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿಗೆ ಬಂದಿದ್ದೇನೆ. ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿಗೆ ಬಂದಿದ್ದೇನೆ. 2014ರ ಯುಗಾದಿ ಹಬ್ಬದ ಸಂದರ್ಭದಲ್ಲಿ ನಾನು ಬಂದಿದ್ದೆ. ಹೊಸ ವರ್ಷದ ಜೊತೆಗೆ ನಿಮ್ಮ ಆಶೀರ್ವಾದ ಸಿಕ್ಕಿತ್ತು ಎಂದು ನೆನಪಿಸಿಕೊಂಡರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ಮಾಡಲು ಬಂದಿದ್ದೀರಿ. ‘ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ’ ಎಂದು ಕನ್ನಡದಲ್ಲೇ ಒತ್ತಿ ಹೇಳಿದರು. “ಸಬ್​ ಕಾ ಸಾತ್ ಸಬ್​ ಕಾ ವಿಕಾಸ್​ಗೆ ಭಗವಾನ್ ಬಸವಣ್ಣ ಸ್ಫೂರ್ತಿಯಾಗಿದ್ದಾರೆ. ಕಾಯಕ ಮತ್ತು ದಾಸೋಹದ ಪ್ರೇರಣೆ ನಮ್ಮ ಅಭಿವೃದ್ಧಿ ಯೋಜನೆಗಳ ಹಿಂದಿನ ಉದ್ದೇಶ. ಆದಿವಾಸಿ, ಮಹಿಳೆಯರು, ದಲಿತರು ಸೇರಿದಂತೆ ಎಲ್ಲ ವರ್ಗಗಳ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಅನ್ನ, ಆಶ್ರಯ್, ಅಕ್ಷರಕ್ಕಾಗಿ ಡಬಲ್ ಎಂಜಿನ್ ಸರ್ಕಾರವನ್ನು ಬೆಂಬಲಿಸಬೇಕು,” ಎಂದು ಪ್ರಧಾನಿ ಮೋದಿ ಮನವಿ ಮಾಡಿದರು. ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್​​ನಲ್ಲಿ ಅನುದಾನ ನೀಡಿದ್ದೇವೆ. ವಿಜಯಪುರದ ರೈತರಿಗೆ ನೆರವಾಗುವ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕೆಲಸ ಆರಂಭವಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಕಟಿಬದ್ಧತೆಯಾಗಿದೆ. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿಯೂ ಡಬಲ್ ಎಂಜಿನ್ ಸರ್ಕಾರ ಕ್ರಮ ಕೈಗೊಂಡಿದೆ. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೂ ಮೊದಲು ಕುಡಿಯುವ ನೀರನ್ನು ಎಲ್ಲಿಂದಲೋ ತರಬೇಕಿತ್ತು. ಈಗ ಮನೆ ಮನೆಗೆ ನೀರು ಬರುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿಜಯಪುರ ಬಿಜೆಪಿ ಘಟಕದ ವತಿಯಿಂದ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಜ್ಞಾನಯೋಗಾಶ್ರಮದ ದಿವಂಗತ ಸಿದ್ದೇಶ್ವರ ಸ್ವಾಮೀಜಿ ಅವರ ಸಿದ್ದೇಶ್ವರ ಶ್ರೀಗಳ ವಿಲ್ (ಅಂತಿಮ ಅಭಿವಂದನಾ ಪತ್ರ)ವನ್ನು ಉಡುಗೊರೆಯಾಗಿ ನೀಡಲಾಯಿತು.