ಮತದಾರರು ಕೈಬಿಟ್ಟರೆ ವಿಷ ಕುಡಿದು ಸಾಯುವುದೊಂದೇ ದಾರಿ

Advertisement

ಗುರುಮಠಕಲ್: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗುರುಮಠಕಲ್‌ನಿಂದ ಸ್ಪರ್ಧಿಸಿರುವ ಬಾಬುರಾವ್ ಚಿಂಚನಸೂರ್ ಆ ದೇವರ ಕೃಪೆಯಿಂದ ಹಾಗೂ ಬೆನ್ನೆಲುಬಾಗಿ ನಿಂತ ನಿಮ್ಮೆಲ್ಲರ ಮನೋಧೈರ್ಯದಿಂದ ಶುಕ್ರವಾರ ತಡರಾತ್ರಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರಲು ಆಗದಂತಹ ಪರಿಸ್ಥಿತಿ ಅವರಿದ್ದಾರೆ. ನೀವುಗಳು ಕೈ ಬಿಟ್ಟರೆ ವಿಷ ಸೇವಿಸುವುದು ಒಂದೇ ನಮ್ಮ ಮುಂದೆ ಇರುವ ದಾರಿಯಾಗಿದೆ ಎಂದು ಅಮರೇಶ್ವರಿ ಚಿಂಚನಸೂರ್ ಹೇಳಿದರು.
ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅವರು ಪತಿ ಬಾಬುರಾವ್ ಚಿಂಚನಸೂರ್ ಪರ ಮತಯಾಚನೆ ನಡೆಸಿ ಮಾತನಾಡಿ, ಚಿಂಚನಸೂರ್ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಇದ್ದ ಸಂದರ್ಭದಲ್ಲಿ ಮುಖಂಡರು, ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಮತದಾರರು ಎಲ್ಲರೂ ಸೇರಿ ಆಸ್ಪತ್ರೆಗೆ ಭೇಟಿ ನೀಡಿ ಸರ್ ನೀವು ಯಾವುದೇ ಕಾರಣಕ್ಕೂ ಎದೆಗುಂದದಿರಿ ನಿಮ್ಮೊಂದಿಗೆ ನಾವಿದ್ದೇವೆ ನಿಮ್ಮನ್ನು ಗೆಲ್ಲಿಸಿ ಕಳುಹಿಸುತ್ತೇವೆ ಎಂದು ಅವರುಗಳು ತುಂಬಿದ ಆತ್ಮಸ್ಥೈರ್ಯವೇ ಇಂದು ನಾನು ಚುನಾವಣಾ ಪ್ರಚಾರ ಕಾರ್ಯಕ್ಕೆ ಬರಲು ಸಾಧ್ಯವಾಯಿತು ಎಂದರು.
2023ನೇ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್ ಅವರಿಗೆ ಮತ ನೀಡಲು ಸೆರಗೊಡ್ಡಿ ಮತಯಾಚನೆ ಮಾಡುತ್ತಿದ್ದು ಎಲ್ಲರೂ ಬೆಂಬಲಿಸುವ ವಿಶ್ವಾಸ ನನಗಿದೆ ಒಂದು ವೇಳೆ ಮತದಾರರು ತಿರಸ್ಕಾರ ಮಾಡಿದರೆ ನಮಗೆ ಇರುವದು ಒಂದೇ ದಾರಿ, ಅದು ವಿಷ ಸೇವನೆ ಹೊರತು ಬೇರೇನೂ ಇಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸಿದ ನಾಯಕನಿಗೆ ಇಂದು ತಾವು ಬೆಂಬಲ ಸೂಚಿಸುತ್ತೀರಿ ಎನ್ನುವ ವಿಶ್ವಾಸ ನನಗೆ ಇದೆ ಎಂದು ಅವರು ಭಾವುಕರಾಗಿ ಮತಯಾಚನೆ ಮಾಡಿದರು.