ರಾಷ್ಟ್ರ ವಿರೋಧಿಗಳೊಂದಿಗೆ ಕಾಂಗ್ರೆಸ್ ಹೊಂದಾಣಿಕೆ

modi
Advertisement

ಮಂಗಳೂರು: ಕಾಂಗ್ರೆಸ್ ರಾಷ್ಟ್ರ ವಿರೋಧಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ಚುನಾವಣೆಗೆ ಅವರ ಸಹಾಯ ಪಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದರು. ಮಂಗಳೂರಿನ ಮೂಡಬಿದಿರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಲ್ಕಿಯಲ್ಲಿಂದು ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದರು.​ ರಾಷ್ಟ್ರ ವಿರೋಧಿಗಳ ಮೇಲಿನ ಪ್ರಕರಣಗಳನ್ನು ಕಾಂಗ್ರೆಸ್‌ ಹಿಂಪಡೆಯುತ್ತದೆ. ಈ ಮೂಲಕ ಭಯೋತ್ಪಾದಕ ಬೆಂಬಲಿಗರನ್ನು ರಕ್ಷಿಸುತ್ತದೆ ಎಂದು ದೂರಿದರು.
ರಾಜಸ್ಥಾನದಲ್ಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಆರೋಪಿಗಳನ್ನು ಕಾಂಗ್ರೆಸ್ ರಕ್ಷಿಸಿದೆ. ಎಲ್ಲ ಆರೋಪಿಗಳಿಗೂ ಕ್ಲೀನ್ ಚಿಟ್ ಸಿಕ್ಕಿದೆ. ಯಾರಿಗೂ ಶಿಕ್ಷೆಯಾಗಲಿಲ್ಲ. ಕಾಂಗ್ರೆಸ್​ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಕರ್ನಾಟಕದಲ್ಲಿ ಇಂತಹ ಕಾಂಗ್ರೆಸ್​ ಅನ್ನು ಅಧಿಕಾರಕ್ಕೆ ಬರಲು ಬಿಡುತ್ತೀರಾ, ನಿಮ್ಮ ರಾಜ್ಯವನ್ನು ನಾಶ ಮಾಡಲು ಬಿಡುತ್ತೀರಾ, ನಿಮ್ಮ ಭವಿಷ್ಯವನ್ನು ಹಾಳು ಮಾಡಲು ಬೀಡುತ್ತೀರಾ ಎಂದು ಪ್ರಶ್ನಿಸಿದರು. ದೇಶಾದ್ಯಂತ ಶಾಂತಿ ಮತ್ತು ಪ್ರಗತಿಯನ್ನು ಬಯಸುವ ಜನತೆ ಮೊದಲು ತಮ್ಮ ರಾಜ್ಯದಿಂದ ಕಾಂಗ್ರೆಸ್​ನವರನ್ನು ಹೊರಹಾಕುತ್ತಾರೆ ಎಂದು ಮೋದಿ ಹೇಳಿದರು.
ಸೂಪರ್‌ಪವರ್‌ ರಾಜ್ಯ ನಮ್ಮ ಗುರಿ – ಮೋದಿ: ನಾವು ಸಬ್​ ಕಾ ಸಾಥ್​​, ಸಬ್​ ಕಾ ವಿಕಾಸ್​ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ಇದಕ್ಕೆ ಎಲ್ಲ ಸಂತರ ಪ್ರೇರಣೆಯೇ ಕಾರಣ. ದೇಶದ 140 ಕೋಟಿ ಜನತೆಯೇ ನಮ್ಮ ರಿಮೋಟ್​ ಕಂಟ್ರೋಲ್​. ಮೇ 10ರ ಮತದಾನದ ದಿನ ದೂರವಿಲ್ಲ. ದೇಶದಲ್ಲಿ ಕರ್ನಾಟಕವನ್ನು ನಂ.1 ಮಾಡುವುದು ಬಿಜೆಪಿಯ ಸಂಕಲ್ಪ. ಆಧುನಿಕ ಮೂಲಭೂತ ಸೌಕರ್ಯಗಳನ್ನು ಬಲ ಪಡಿಸಿ ಸೂಪರ್‌ಪವರ್‌ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ. ಇದೇ ನಮ್ಮ ರೋಡ್​ ಮ್ಯಾಪ್​ ಆಗಿದೆ ಎಂದರು.
ಆದರೆ, ಕಾಂಗ್ರೆಸ್​ ತನ್ನ ಒಬ್ಬ ನಾಯಕ ನಿವೃತ್ತಿ ಹೊಂದುತ್ತಿದ್ದಾರೆ… ಹೀಗಾಗಿ ಮತ ನೀಡಿ ಎಂದು​ ಕೇಳುತ್ತಿದೆ. ಪಕ್ಷದ ನಾಯಕನ ನಿವೃತ್ತಿಯಾಗಿ ಮತ ಬಯಸುತ್ತಿದೆ. ಬಿಜೆಪಿ ಸರ್ಕಾರದ ಜನಹಿತ ಯೋಜನೆಗಳು, ಜನ ಕಲ್ಯಾಣ ಯೋಜನೆಗಳನ್ನು ಹಿಂದಕ್ಕೆ ಕೊಂಡೊಯ್ಯಲು ಕಾಂಗ್ರೆಸ್​ ಮತ ಕೇಳುತ್ತಿದೆ. ನಾನು ನಾಲ್ಕೈದು ದಿನಗಳಿಂದ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ಎಲ್ಲೆಡೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ಮಾತನ್ನು ಕೇಳುತ್ತಿದ್ದೇನೆ ಎಂದು ಮೋದಿ ಹೇಳಿದರು.ಬಿಜೆಪಿ ಕರ್ನಾಟಕವನ್ನು ನಂ.1 ರಾಜ್ಯ ಮಾಡಲು ಬಯಸಿದರೆ, ಶೇ.85ರಷ್ಟು ತಿನ್ನುವ ಕಾಂಗ್ರೆಸ್​ ದೆಹಲಿಯಲ್ಲಿ ಕುಳಿತಿರುವ ಒಂದು ಕುಟುಂಬದ ನಂ.1 ಎಟಿಎಂ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಕಾಂಗ್ರೆಸ್​ ರಾಜ್ಯವನ್ನು ದಶಕಗಳ ಹಿಂದೆಕ್ಕೆ ಕೊಂಡೊಯ್ದು ಗಡ್ಡೆಯಲ್ಲಿ ಹಾಕಲು ಮುಂದಾಗಿದೆ. ಇದರಿಂದ ಕರ್ನಾಟಕ ಜನತೆ ಕಾಂಗ್ರೆಸ್​ನಿಂದ ಸಾವಧಾನದಿಂದ ಇರಬೇಕು. ಜೆಡಿಎಸ್​ ಸಹ ಇದೇ ರೀತಿಯಾದ ಕಚ್ಚೆ-ಪಚ್ಚೆ ಪಕ್ಷದವರು ಎಂದು ಟೀಕಿಸಿದರು.
ಕಾಂಗ್ರೆಸ್​ ಶಾಂತಿ, ವಿಕಾಸದ ವಿರೋಧಿ: ರಾಜ್ಯದಲ್ಲಿ ಅಸ್ಥಿರ ಸರ್ಕಾರ ಬಂದರೆ, ಜನತೆಯ ಭವಿಷ್ಯವು ಅಸ್ಥಿರವಾಗಿರುತ್ತದೆ. ನಿಮ್ಮ ಕನಸು ಮಾಡಿಕೊಳ್ಳಲು ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಸಾಧ್ಯವಿಲ್ಲ. ಕರ್ನಾಟಕದ ಅಸ್ಥಿರತೆ ಇದ್ದರೆ, ನಿಮ್ಮ ಭಾಗ್ಯವೂ ಅಸ್ಥಿರವಾಗಿರುತ್ತದೆ. ಯಾಕೆಂದರೆ, ಕಾಂಗ್ರೆಸ್​ ಶಾಂತಿ ಮತ್ತು ವಿಕಾಸದ ವಿರೋಧಿ. ತುಷ್ಟೀಕರಣ ರಾಜಕೀಯವನ್ನು ಹೆಚ್ಚಿಸುತ್ತದೆ. ಕೆಲ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಬಾಂಬ್​ ಸ್ಫೋಟವಾಗಿತ್ತು. 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಆದರೆ, ಅಲ್ಲಿನ ಸರ್ಕಾರದ ಪೊಲೀಸರು ಎಲ್ಲ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದರು ಎಂದು ಮೋದಿ ಆರೋಪಿಸಿದರು.